ಚಾಮುಂಡಿಬೆಟ್ಟಕ್ಕೆ ತನ್ನದೇ ಆದ ಪಾವಿತ್ರತೆ ಇದೆ: ಅದನ್ನು ಹಾಳು ಮಾಡಬಾರದು-ಶಾಸಕ ಟಿ.ಎಸ್ ಶ್ರೀವತ್ಸ.

ಮೈಸೂರು,ಅಕ್ಟೋಬರ್,12,2023(www.justkannada.in): ಮಹಿಷ ದಸರಾ ಆಚರಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಟಿ. ಎಸ್ ಶ್ರೀವತ್ಸ, ಚಾಮುಂಡಿಬೆಟ್ಟಕ್ಕೆ ತನ್ನದೇ ಆದ ಪಾವಿತ್ರತೆ ಇದೆ. ಅದನ್ನು ಹಾಳು ಮಾಡಬಾರದು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಟಿ.ಎಸ್ ಶ್ರೀವತ್ಸ, ಜಿಲ್ಲಾಡಳಿತ ಮಹಿಷ ದಸರಾ ಮತ್ತು ಚಾಮುಂಡಿ ಚಲೋ ಎರಡಕ್ಕೂ ಅನುಮತಿ ಕೊಟ್ಟಿಲ್ಲ. ನಾಳೆ ಒಂದು ವೇಳೆ ಕದ್ದುಮುಚ್ಚಿ ಹೋಗಿ ಪುಷ್ಪಾರ್ಚನೆ ಮಾಡಿ ಬಂದರೆ ಏನು ಮಾಡೋಕೆ ಆಗುತ್ತೆ.? ಮಹಿಷ ದಸರಾವನ್ನ ಚಾಮುಂಡಿ ಬೆಟ್ಟದಲ್ಲಿ  ಮಾಡುವುದಕ್ಕೆ ವಿರೋಧವಿದೆ ಅಷ್ಟೇ. ಬೆಟ್ಟಕ್ಕೆ ತನ್ನದೇ ಆದ ಪಾವಿತ್ರೆತೆ ಇದೆ ಅದನ್ನು ಹಾಳು ಮಾಡಬಾರದು ಎಂದರು.

ನಾನು ಯಾರ ಒತ್ತಡಕ್ಕೂ ಮಣಿದಿಲ್ಲ. ಪಕ್ಷಕ್ಕಾಗಿ  ಕಳೆದ 38 ವರ್ಷ ದುಡಿಯುತ್ತಿದ್ದೇನೆ. ನಾವು ಒಂದು ಸಿದ್ದಾಂತಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಸ್ವತಃ ಸಿಎಂ ಪತ್ನಿಯೇ ಜನ ಸಾಮಾನ್ಯರಂತೆ ಬಂದು ಚಾಮುಂಡಿ ತಾಯಿಯ ದರ್ಶನ ಪಡೆದು ಹೋಗುತ್ತಾರೆ. ಪ್ರಧಾನಿ, ರಾಷ್ಟ್ರಪತಿಗಳು ಬಂದು ಹೋಗಿರುವ ಪವಿತ್ರ ಚಾಮುಂಡಿ ಬೆಟ್ಟ. ಹಾಗಾಗಿ ಅಲ್ಲಿನ ಪಾವಿತ್ರತೆ ಹಾಳು ಮಾಡುವ ಕೆಲಸ ಮಾಡಬಾರದು. ಒಂದು ವೇಳೆ ಜಿಲ್ಲಾಡಳಿತದ ಆದೇಶವನ್ನು ಮೀರಿ ಮಹಿಷಾ ದಸರಾವನ್ನು ಆಚರಣೆ ಮಾಡಿದರೆ  ನಾವು ಮುಂದೆ ಏನು ಮಾಡಬೇಕೆಂದು ಪಕ್ಷದ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದರು.

ದಸರಾ ಸಂದರ್ಭದಲ್ಲಿ ಮಹಿಷಾ ದಸರಾ ಆಚರಣೆ ಮಾಡುವುದು ಸರಿಯಲ್ಲ- ಮೇಯರ್ ಶಿವಕುಮಾರ್

ಮಹಿಷಾ ದಸರಾ ಆಚರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ  ಮೇಯರ್ ಶಿವಕುಮಾರ್, ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ಸಂದರ್ಭದಲ್ಲಿ ಮಹಿಷಾ ದಸರಾ ಆಚರಣೆ ಮಾಡುವುದು ಸರಿಯಲ್ಲ. ದಸರಾ ಮಹೋತ್ಸವದ ಸಂದರ್ಭದಲ್ಲಿ ಚಾಮುಂಡಿ  ತಾಯಿಯನ್ನು ನವದುರ್ಗೆಯರ ರೂಪದಲ್ಲಿ ಸಾಂಪ್ರದಾಯಿಕವಾಗಿ ಎಲ್ಲಾ ಕಡೆ  ಪೂಜೆ ಮಾಡಿಕೊಂಡು ಬಂದಿದ್ದಾರೆ. ಅದಕ್ಕೆ ಧಕ್ಕೆ ಆಗಬಾರದು ಎಂದು ನಾವು ಮಹಿಷಾ ದಸರಾವನ್ನು ನಾವು ವಿರೋಧಿಸುತ್ತೇವೆ. ಈ ಹೋರಾಟ  ಬಿಜೆಪಿಗೆ ಮಾತ್ರ ಸೀಮಿತವಲ್ಲ. ಹಾಗಾಗಿ ಮಹಿಷಾ ದಸರಾ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದ್ದೆವು. ಪೋಲಿಸರು ಅನುಮತಿ ಕೊಟ್ಟಿಲ್ಲ ಕಾನೂನಿಗೆ ಗೌರವ ಕೊಟ್ಟು ನಾವು ಚಾಮುಂಡಿ ಬೆಟ್ಟ ಚಲೋ ವಾಪಸ್ ಪಡೆದಿದ್ದೇವೆ ಎಂದರು.

Key words: mahisha dasara-Chamundi Hill – own sanctity-MLA-TS Srivatsa.