ಮೈಸೂರು,ಆಗಸ್ಟ್,6,2025 (www.justkannada.in): ಕೆಆರ್ ಎಸ್ ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂಬ ಸಚಿವ ಎಚ್.ಸಿ. ಮಹದೇವಪ್ಪ ಹೇಳಿಕೆಯನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಎಂ.ಲಕ್ಷ್ಮಣ್, ಸಚಿವ ಮಹದೇವಪ್ಪ ಹೇಳಿಕೆಯಲ್ಲಿ ಯಾವ ತಪ್ಪು ಇಲ್ಲ. ಮಹದೇವಪ್ಪ ಹೇಳಿದ್ದು ನೂರಕ್ಕೆ ನೂರು ಸತ್ಯ. ಅಣೆಕಟ್ಟು ಕಟ್ಟಿದ್ದು ಮಹಾರಾಜರು. ಆದರೆ, ಅದಕ್ಕೆ ಮೊದಲು ಅದೇ ಜಾಗದಲ್ಲಿ ಬ್ಯಾರೇಜ್ ಕಟ್ಟಿದ್ದು ಟಿಪ್ಪು. ಮೋವಿ ಡ್ಯಾಂ ಅಂತಾ ಹೆಸರಿಟ್ಟು 6 ಟಿಎಂಸಿ ನೀರು ಸಂಗ್ರಹಣದ ಬ್ಯಾರೇಜ್ ಅನ್ನು ಟಿಪ್ಪು ಕಟ್ಟಿದ್ದರು. ಶ್ರೀರಂಗಪಟ್ಟಣ, ಕೆ.ಆರ್. ನಗರ ಭಾಗಕ್ಕೆ ಇದರಿಂದ ನೀರು ಹರಿಸುತ್ತಿದ್ದರು. ನಂತರ ಇದೇ ಜಾಗದಲ್ಲೆ ಕೆಆರ್ ಎಸ್ ಅಣೆಕಟ್ಟು ಕಟ್ಟಲಾಗಿದೆ. ಇದಕ್ಕೆ ಶಾಸನದ ಸಾಕ್ಷಿ ಇದೆ ನಾಲ್ವಡಿಗೂ ಹಾಲಿ ಸಂಸದರಿಗೆ ಹೋಲಿಕೆ ಬೇಡ. ಇವರು ರಾಜಕಾರಣಕ್ಕಾಗಿ ಬಂದವರು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಗಿಂತ ನಮ್ಮ ತಂದೆ ಹೆಚ್ಚು ಕೆಲಸ ಮಾಡಿದ್ದಾರೆ ಎಂಬ ಸಿಎಂ ಪುತ್ರ ಡಾ.ಯತೀಂದ್ರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್ , ಸಿದ್ದರಾಮಯ್ಯ ಮೈಸೂರಿಗೆ ನೀರು ಕೊಟ್ಟಿದ್ದಾರೆ. ಆಸ್ಪತ್ರೆ ಕಟ್ಟಿಸಿದ್ದಾರೆ. ರಸ್ತೆ ಮಾಡಿಸಿದ್ದಾರೆ. ರಾಜ ಪ್ರಭುತ್ವದಲ್ಲಿ ನಾಲ್ವಡಿ ಅವರು ಕೆಲಸ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಸಿದ್ದರಾಮಯ್ಯ ಮೈಸೂರಿಗೆ ಕೆಲಸ ಮಾಡಿದ್ದಾರೆ. ಯತೀಂದ್ರ ಹೇಳಿಕೆಯಲ್ಲಿ ಯಾವ ತಪ್ಪು ಇಲ್ಲ ಎಂದರು.
ಮೈಸೂರು ಲೋಕಸಭಾ ಚುನಾವಣೆಯಲ್ಲಿ ಬಹಳ ಲೋಪ: 292 ಬೂತ್ ಗಳಲ್ಲಿ ಮತಗಳ್ಳತನ
ಮೈಸೂರು ಲೋಕಸಭಾ ಚುನಾವಣೆಯಲ್ಲಿ ಬಹಳ ಲೋಪವಾಗಿದೆ. ಬಿಜೆಪಿ EVM ನಲ್ಲಿ ಮತಗಳ್ಳತನ ಮಾಡಿದೆ. ಒಟ್ಟು 2202 ಬೂತ್ ನಲ್ಲಿ 292 ಬೂತ್ ಗಳಲ್ಲಿ ಮತಗಳ್ಳತನ ಆಗಿದೆ. 292 ಇವಿಎಂ ಯಂತ್ರದಲ್ಲಿ ರಿಗ್ಗಿಂಗ್ ಆಗಿದೆ. 292 ಬೂತ್ ಗಳಲ್ಲಿ1 ಲಕ್ಷ 45 ಸಾವಿರ ಮತಗಳಿವೆ. ಅದರಲ್ಲಿ 22 ಸಾವಿರ ಮತ ಮಾತ್ರ ಕಾಂಗ್ರೆಸ್ ಗೆ ಬಂದಿವೆ. ಕಳೆದ ನಾಲ್ಕು ಚುನಾವಣೆಯಲ್ಲಿ ಇದೇ ಬೂತ್ ಗಳಲ್ಲಿ ಕಾಂಗ್ರೆಸ್ ಗೆ ಶೇಕಡಾ 50 – 60 ಮತ ಬಂದಿದ್ದವು. ಒಂದು ಬೂತ್ ವ್ಯಾಪ್ತಿಯಲ್ಲಿ 15 ಮನೆ ಕಾಂಗ್ರೆಸ್ ಕಾರ್ಯಕರ್ತರದು. ಅಲ್ಲಿ 750 ಮತಗಳಲ್ಲವೆ. ಆದರೆ ಕಾಂಗ್ರೆಸ್ ಬಂದಿದ್ದು ಬರೀ ಏಳು ಮತ ಮಾತ್ರ. ಎನ್.ಆರ್. ಕ್ಷೇತ್ರದ ಶಾಂತಿ ನಗರದಲ್ಲೂ ಇದೇ ರೀತಿ ಆಗಿದೆ ಎಂದು ಎಂ. ಲಕ್ಷ್ಮಣ್ ಆರೋಪಿಸಿದರು.
Key words: Tippu, KRS, M. Laxman ,defends, minister, statement