ಈ ಬಾರಿ ಭಾರತದಲ್ಲಿ ಸುದೀರ್ಘ ಮಳೆಗಾಲ: ಭಾರತೀಯ ಹವಾಮಾನ ಇಲಾಖೆ

ಬೆಂಗಳೂರು, ಸೆಪ್ಟೆಂಬರ್ 21, 2023 (www.justkannada.in): ಕೆಲವು ದಿನಗಳವರೆಗೆ ನೈಋತ್ಯ ಮಾನ್ಸೂನ್ ಭಾರತದಾದ್ಯಂತ ವಿಸ್ತರಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

ಮಾನ್ಸೂನ್ ಜೂನ್ ಆರಂಭದಲ್ಲಿ ಭಾರತವನ್ನು ಪ್ರವೇಶಿಸುತ್ತದೆ, ಜುಲೈ ಆರಂಭದ ವೇಳೆಗೆ ಇಡೀ ರಾಷ್ಟ್ರವನ್ನು ಆವರಿಸುತ್ತದೆ. ಮಾನ್ಸೂನ್ ಮಳೆಯು ಸೆಪ್ಟೆಂಬರ್ 17 ರ ಹೊತ್ತಿಗೆ ಉತ್ತರ ಭಾರತದ ರಾಜ್ಯಗಳಿಂದ ಕ್ರಮೇಣ ಕಡಿಮೆಯಾಗಲು ಆರಂಭಿಸುತ್ತದೆ. ಆದರೆ ಈ ಬಾರಿ ಇದರಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

ದೇಶದ ಹಲವು ಭಾಗಗಳಲ್ಲಿ ಹೊಸ ಪರಿಚಲನೆ ಮತ್ತು ಕಡಿಮೆ ಒತ್ತಡದ ಪ್ರದೇಶಗಳನ್ನು ಕಾಣುತ್ತಿದ್ದೇವೆ. ಆದ್ದರಿಂದ, ಈ ಹಂತದಲ್ಲಿ ಮಳೆಗಾಲ ನಿಲ್ಲುವ ಸಾಧ್ಯತೆಗಳಿಲ್ಲ. ಈ ಬಾರಿಯ ಮಳೆಗಾಲ ಮುಗಿಯುವುದು ತಡವಾಗಲಿದೆ ಎಂದು ಮೃತ್ಯುಂಜಯ್ ಮೊಹಾಪಾತ್ರ  ಮಾಹಿತಿ ನೀಡಿದ್ದಾರೆ.

ಅಂದಹಾಗೆ ಈ ವರ್ಷ ಮುಂಗಾರು ಹಂಗಾಮು ದುರ್ಬಲವಾಗಿ ಆರಂಭವಾಗಿದೆ. ಜೂನ್‌ನಲ್ಲಿ ಸರಾಸರಿಗಿಂತ ಶೇ 9ರಷ್ಟು ಕಡಿಮೆ ಮಳೆಯಾಗಿದೆ. ಜುಲೈನಲ್ಲಿ ಇದು ಪ್ರಭಾವಶಾಲಿಯಾಗಿ ಚೇತರಿಸಿಕೊಂಡಿತು. ಸರಾಸರಿಗಿಂತ ಶೇ 13 ರಷ್ಟು ಮಳೆಯನ್ನು ದಾಖಲಿಸಿದೆ.