ಲೋಕಸಭೆ ಚುನಾವಣೆ: ಅಭ್ಯರ್ಥಿಗಳಿಗೆ ಕೆಲ ಷರತ್ತುಗಳನ್ನು ವಿಧಿಸಿದ ಚುನಾವಣಾ ಆಯೋಗ.

ನವದೆಹಲಿ,ಮಾರ್ಚ್,16,2024(www.justkannada.in): ಭಾರಿ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ.  ಅಭ್ಯರ್ಥಿಗಳಿಗೆ ಕೇಂದ್ರ ಚುನಾವಣಾ ಆಯೋಗ ಕೆಲ ಷರತ್ತುಗಳನ್ನ ವಿಧಿಸಿದೆ.

ಕೇಂದ್ರ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಲೋಕಸಭೆ ಚುನಾವಣೆ ದಿನಾಂಕ ಘೋಷಿಸಿದರು. ಈ ವೇಳೆ ಮಾತನಾಡಿದ ಅವರು, ಅಭ್ಯರ್ಥಿಗಳು ಭಾಷಣ, ಜಾತಿ, ಧಾರ್ಮಿಕ ವಿಷಯದ ಮೂಲಕ ಮತಯಾಚನೆ ಮಾಡುವಂತಿಲ್ಲ. ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಗಳು ಗೌರವಯುತವಾಗಿ ನಡೆದುಕೊಳ್ಳಬೇಕು. ದ್ವೇಷ ಭಾಷಣ, ಶತ್ರುಗಳ ರೀತಿ ವರ್ತಿಸುವಂತಿಲ್ಲ. ಚುನಾವಣೆಯಿಂದ ಶತ್ರುಗಳು ಸ್ನೇಹಿತರಾಗಬಹುದು. ಅದಕ್ಕೆ ಸಾಕಷ್ಟು ಉದಾಹರಣೆಗಳು ಇವೆ ಎಂದು ತಿಳಿಸಿದ್ದಾರೆ.

ವಿಭಜಿಸಲು ಪ್ರೇರೇಪಿಸುವ ರಾಜಕೀಯ ಭಾಷಣ ಮಾಡುವಂತಿಲ್ಲ. ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಲಾಗಿದೆ. ವಿಷಯಾಧಾರಿತ ಭಾಷಣ ಮಾಡಬೇಕು. ದ್ವೇಷ ಭಾಷಣ, ಯಾವುದೇ ಜಾತಿ, ಧರ್ಮ, ಧಾರ್ಮಿಕ ವಿಷಯಗಳ ಮೂಲಕ ಮತಯಾಚನೆ ಮಾಡುವಂತಿಲ್ಲ ವೈಯಕ್ತಿಕವಾಗಿ  ಟೀಕೆ ಮಾಡುವಂತಿಲ್ಲ. ಮಕ್ಕಳನ್ನ ಚುನಾವಣಾ ಪ್ರಚಾರದಲ್ಲಿ ಬಳಕೆ ಮಾಡುವಂತಿಲ್ಲ ಎಂದು ಸೂಚಿಸಿದ್ದಾರೆ.

ಪಕ್ಷದ ಜಾಹೀರಾತುಗಳನ್ನು ಸುದ್ದಿಯಾಗಿ ನೀಡುವಂತಿಲ್ಲ. ಪರಿಶೀಲಿಸದ ಹಾಗೂ ಯಾವುದೇ ತಪ್ಪುದಾರಿಗೆ ಎಳೆಯುವಂತಹ ಜಾಹೀರಾತುಗಳನ್ನು ಪ್ರಕಟಿಸಬಾರದು. ಪ್ರತಿಸ್ಪರ್ಧಿಗಳನ್ನು ನಿಂದಿಸುವ ಅವಮಾನಿಸುವ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಳ ಮೇಲೆ ನಿರ್ಬಂಧ ಹೇರಲಾಗುವುದು. ಸ್ಟಾರ್ ಪ್ರಚಾರಕರು ಗೌರವ ಕಾಪಾಡಿಕೊಳ್ಳಬೇಕು ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.

Key words: LokSabha-Elections-imposed -certain -conditions – candidates.