ಬೆಳ್ಳಂಬೆಳಿಗ್ಗೆ ಅಧಿಕಾರಿಗಳಿಗೆ ಶಾಕ್: ಬೆಂಗಳೂರು ಸೇರಿ ರಾಜ್ಯದ 63 ಕಡೆಗಳಲ್ಲಿ ಲೋಕಾಯುಕ್ತ ದಾಳಿ.

ಬೆಂಗಳೂರು, ಡಿಸೆಂಬರ್,5, 2023(www.justkannada.in): ಬೆಳ್ಳಂಬೆಳಿಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ 63 ಕಡೆ ಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು  ದಾಳಿ ಮಾಡಿದ್ದು ದಾಖಲೆ  ಪರಿಶೀಲನೆ ನಡೆಸುತ್ತಿದ್ದಾರೆ.

13 ಅಧಿಕಾರಿಗಳ ಮನೆಗಳ ಮೇಲೆ ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.  ಬೆಂಗಳೂರಿನಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಸ್ಕಾಂ ಜಾಗೃತ ದಳ ಅಧಿಕಾರಿ ಟಿ.ಎನ್ .ಸುಧಾಕರ್ ರೆಡ್ಡಿ ಮನೆ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್​​​.ಎಸ್​​.ಕೃಷ್ಣಮೂರ್ತಿ ಮನೆ ಹಾಗೂ ಕುಂಬಳಗೂಡು-ಕಣಿಮಿಣಿಕೆ ಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರಿ ಮನೆ ಮೇಲೂ ದಾಳಿ ಮಾಡಿದ್ದು, ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.

ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಏಕಕಾಲಕ್ಕೆ ಲೋಕಯುಕ್ತ ದಾಳಿಯಾಗಿದೆ. ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಚಂದ್ರಶೇಖರ, ಅರಣ್ಯ ಇಲಾಖೆಯ ಡಿಆರ್ ಎಫ್ ಓ ಮಾರುತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ  ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಚಂದ್ರಶೇಖರ ಅವರ ಹೊಸಪೇಟೆ ಮನೆ ಮತ್ತು ಮಾರುತಿ ಅವರ ಕಂಪ್ಲಿ ಮತ್ತು ಗಂಗಾವತಿ ನಿವಾಸದ ಮೇಲೆ ದಾಳಿ ಮಾಡಿದ್ದು, ದಾಖಲೆ ಪರಿಶೀಲಿಸುತ್ತಿದ್ದಾರೆ.

ಮೈಸೂರಿನಲ್ಲಿ  ಉಪನ್ಯಾಸಕ ಮಹದೇವಸ್ವಾಮಿ ಮನೆ ಮೇಲೆ ದಾಳಿ.

ಇಂದು ಬೆಳ್ಳಂಬೆಳಗ್ಗೆ ಮೈಸೂರಿನಲ್ಲೂ ಲೋಕಾಯುಕ್ತ ಕಾರ್ಯಾಚರಣೆ ನಡೆಸಿದ್ದು, ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮೇಲೆ ದಾಳಿ ಮಾಡಿದ್ದಾರೆ. ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ಪರಿಶೀಲನೆ ನಡೆಸಿದ್ದಾರೆ.

ಇನ್ನು ಬೀದರ್​​ನಲ್ಲೂ ಸಹ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆಸಿದೆ. ಬೀದರ್ ನ ಪಶು ವೈಧ್ಯಕೀಯ ವಿಶ್ವವಿದ್ಯಾಲಯದ ನೌಕರರ ಸುನೀಲ್ ಕುಮಾರ್ ಮನೆ ಹಾಗೂ ಕಾಂಪ್ಲೆಕ್ಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

Key words: Lokayukta –attack- 63 place-state – Bangalore.