ಮೈಸೂರಿನಲ್ಲಿ ಮೋಡ, ಸೋನೆ ಮಳೆ ನಡುವೆ ಮ್ಯಾರಥಾನ್ ಓಟದ ಸಂಭ್ರಮ!

ಮೈಸೂರು, ನವೆಂಬರ್ 14, 2021 (www.justkannada.in): ಸೆಲೆಬ್ರೇಷನ್ ರನ್ ಸರಣಿಯ ಭಾಗವಾಗಿ,ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪನಿಯಾದ ಲೈಫ್ ಈಸ್ ಕಾಲಿಂಗ್ ವತಿಯಿಂದ ಇಂದು ಬೆಳಗ್ಗೆ ಮೈಸೂರು ಅರಮನೆಯ ಬಲರಾಮ ಗೇಟ್‌ನಿಂದ ಮ್ಯಾರಥಾನ್‌ನ 11 ನೇ ಆವೃತ್ತಿಯನ್ನು ಆಯೋಜಿಸಲಾಗಿದ್ದು, ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮೈಸೂರಿನ ಅರಮನೆ ದ್ವಾರದಿಂದ ವಿಶೇಷವಾಗಿ ಶಾಂತಿಗೋಸ್ಕರ ಪ್ರಧಾನಮಂತ್ರಿಗಳ ಆಸೆಯ ರೀತಿಯಲ್ಲಿ ಫಿಟ್ ಇಂಡಿಯಾ ದ ಚಿಂತನೆಗೆ ಪೂರಕವಾಗಿ ಸಂದೇಶ ಕೊಡುವ ಈ ಕಾರ್ಯದಲ್ಲಿ ಭಾಗವಹಿಸಿರುವ ನಿಮಗೆಲ್ಲರಿಗೂ ಅಭಿನಂದನೆಗಳು. ಭಾರತವನ್ನು ವಿಶ್ವಗುರು ಮಾಡಬೇಕೆಂಬ ಕಲ್ಪನೆ ಇಟ್ಟುಕೊಂಡಿದ್ದೇವೆ, ಇದಕ್ಕಾಗಿ ಮಾನಸಿಕ ದೃಢತೆಯೊಂದಿಗೆ ದೈಹಿಕ ಫಿಟ್ ನೆಸ್ ಕೂಡಾ ಬಹು ಮುಖ್ಯವಾದದ್ದು, ಜೀವನವನ್ನು ನಾವು ಎಲ್ಲೋ ಪ್ರಾರಂಭಿಸುತ್ತೇವೆ ಆದರೆ ಎಲ್ಲಿ ಅಂತ್ಯ ಮಾಡಬೇಕೆಂದು ನಾವು ನಿರ್ಧಾರ ಮಾಡಬೇಕು ಎಂದರು.

ವಿಶೇಷವಾಗಿ 42, 30, 20 ,10 ಹಾಗೂ 5 ಕಿ.ಮಿ ಶಾಂತಿಗಾಗಿ ರನ್ ಮಾಡುತ್ತಿರುವುದು ಸಂತಸದ ವಿಷಯವಾಗಿದೆ, 11 ವರ್ಷದ ಹಿಂದೆ ಜಿಲ್ಲಾ ಮಂತ್ರಿಯಾಗಿದ್ದಾಗ ನಾನು ಚಾಲನೆ ನೀಡಿದ್ದೆ ಅಂದಿನಿಂದ ಇಂದಿನವರೆಗೂ ಕೂಡಾ ಇದು ನಿರಂತರವಾಗಿ ನಡೆದುಕೊಂಡು ಬಂದಿರುವುದು ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿ.ಎಸ್.ಎಸ್ ಸಂಸ್ಥೆಯ ಶ್ರೀಹರಿ, ಪಿ.ವಿ ಸುನಿಲ್ ಮತ್ತಿತರರು ಹಾಜರಿದ್ದರು.