ಪಠ್ಯಪುಸ್ತಕಗಳ ವಿವಾದದಿಂದಾಗಿ ಕುಂಠಿತಗೊಂಡಿರುವ ವಿದ್ಯಾರ್ಥಿಗಳ ಕಲಿಕೆ.

ಬೆಂಗಳೂರು, ಜೂನ್,8, 2022 (www.justkannada.in): ಪಠ್ಯಪುಸ್ತಕಗಳ ವಿತರಣೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ಹಲವು ವಿವಾದಗಳು ಹಾಗೂ ತಡೆಗಳನ್ನು ಹೊರತುಪಡಿಸಿ, ಇನ್ನೂ ಒಂದು ತೊಂದರೆ ಎದುರಾಗಿದೆ. ರಾಜ್ಯ ಸರ್ಕಾರ ಒದಗಿಸಿರುವ ಶಾಲಾ ಪಠ್ಯಪುಸ್ತಕಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಪರಿಷತ್ (ಎನ್‌ ಸಿಇಆರ್‌ ಟಿ) ಮಾರ್ಗಸೂಚಿಗಳ ಪ್ರಕಾರ ಮಾಡಿಲ್ಲ ಎಂಬ ಸಂಗತಿ ಬಹಿರಂಗಗೊಂಡಿದೆ. ಇದರಿಂದಾಗಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ನಡುವಿನ ಸಮಾನತೆಯ ಮೇಲೆ ಪರಿಣಾಮ ಬೀರಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯೋಜಿತ ನಿರ್ವಹಣಾ ಮಂಡಳಿಯ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಡಿ., ಅವರು, “ಪಠ್ಯಪುಸ್ತಕಗಳಲ್ಲಿ ಎದುರಾಗಿರುವ ಅತೀ ದೊಡ್ಡ ಲೋಪವೇನೆಂದರೆ ಎನ್‌ಸಿಇಆರ್‌ ಟಿ ಶಿಫಾರಸ್ಸುಗಳ ಪ್ರಕಾರ ಪರಿಷ್ಕರಣೆ ಆಗಿಲ್ಲದಿರುವುದು. ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ನಡುವೆ ಯಾವುದೇ ರೀತಿ ಅಸಮಾನತೆ ಬಾರದಿರುವುದನ್ನು ಖಾತ್ರಿಪಡಿಸುವಂತೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಬೇಕು ಎನ್ನುವುದು ಎನ್‌ಸಿ ಇಆರ್‌ಟಿನ ಶಿಫಾರಸ್ಸಾಗಿದೆ. ಸರ್ಕಾರದ ಆದೇಶಗಳ ಪ್ರಕಾರ, ಈ ಸಮಸ್ಯೆಗಳ ಕುರಿತು ಮಾತನಾಡುವಂತಹ ಓರ್ವ ಪ್ರತಿನಿಧಿಯನ್ನು ಸಮಿತಿಯಲ್ಲಿ ಸೇರ್ಪಡೆಗೊಳಿಸಬೇಕಾಗಿತ್ತು, ಆದರೆ ಅದನ್ನೂ ಸಹ ಪಾಲಿಸಲಾಗಿಲ್ಲ,” ಎಂದರು.

2017ರಲ್ಲಿ ಎನ್‌ಸಿಆರ್‌ಟಿ ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿದ ಪಠ್ಯಪುಸ್ತಕಗಳ ವಿಶ್ಲೇಷಣೆಯನ್ನು ನೀಡಿತ್ತು. ಅದರಲ್ಲಿ ಪದ್ಯಗಳನ್ನು ಚುಟುಕುಗೊಳಿಸುವುದು, ಕೆಲವು ಚಿತ್ರಗಳನ್ನು ತೆಗೆದುಹಾಕುವುದು ಹಾಗೂ ಇನ್ನೂ ಕೆಲವು ಚಿತ್ರಗಳ ಗಾತ್ರವನ್ನು ದೊಡ್ಡದಾಗಿಸುವಂತಹ ಕೆಲವು ಪರಿಷ್ಕರಣಾ ಸಲಹೆಗಳನ್ನು ನೀಡಲಾಗಿತ್ತು.

ಕೆಲವು ಶೀರ್ಷಿಕೆಗಳನ್ನು ತೆಗೆದು ಅದರ ಜಾಗದಲ್ಲಿ, ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತಹ ಬೇರೆ ಸರಳವಾದ ಶೀರ್ಷಿಕೆಗಳನ್ನು ಸೇರಿಸುವುದೂ ಸಹ ಸಲಹೆಗಳಲ್ಲಿ ಸೇರಿತ್ತು. ಜೊತೆಗೆ ಕೆಲವು ಕಷ್ಟವೆನಿಸುವಂತಹ ಪದಗಳನ್ನು ತೆಗೆಯುವುದು, ಸಣ್ಣ ಅಕ್ಷರಗಳ ಬಳಕೆ, ಬರೆಯಲು ಹೆಚ್ಚು ಸ್ಥಳವನ್ನು ಒದಗಿಸುವುದು, ಟೈಪಿಂಗ್ ತಪ್ಪುಗಳನ್ನು ಸರಿಪಡಿಸುವುದು, ಪಠ್ಯವನ್ನು ಲಿಂಗಸಂವೇದಿಯಾಗಿರುವಂತೆ ಮಾಡುವುದು, ಇತ್ಯಾದಿ ಸಲಹೆಗಳನ್ನೂ ನೀಡಲಾಗಿತ್ತು.

ಆದರೆ ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಇದ್ಯಾವುದನ್ನೂ ಪಾಲಿಸಿರಲಿಲ್ಲ. “ಸರ್ಕಾರ ಹಣವನ್ನು ಮಾತ್ರ ಮುಂಗಡವಾಗಿ ತೆಗೆದುಕೊಳ್ಳುತ್ತದೆ, ಆದರೆ ಸರಿಯಾದ ಸಮಯಕ್ಕೆ ಯಾವಾಗಲೂ ಪುಸ್ತಕಗಳನ್ನು ಒದಗಿಸುವುದಿಲ್ಲ. ಈ ವರ್ಷ, ವಿಳಂಬವೊಂದೇ ಅಲ್ಲದೆ ಪರಿಸ್ಥಿತಿ ಬಹಳ ಕೆಟ್ಟದೆ. ಅವರು ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ಒಂದು ಅಥವಾ ಎರಡು ಪುಸ್ತಕಗಳನ್ನು ಹೊರತುಪಡಿಸಿದರೆ ಇನ್ನೂ ಪರಿಷ್ಕರಣೆಗೊಂಡಿರುವ ಪುಸ್ತಕಗಳು ತಲುಪದೇ ಇರುವ ಕಾರಣದಿಂದಾಗಿ ನಮಗೆ ತುಲುಪುವುದಿಲ್ಲ,” ಎಂದು ಶಶಿಕುಮಾರ್ ಅವರು ತಿಳಿಸಿದರು.

ವಿದ್ಯಾ ವೈಭವ್ ಪಬ್ಲಿಕ್ ಶಾಲೆಯ, ಹೆಸರು ಹೇಳಲು ಇಚ್ಛಿಸದೇ ಇರುವ ವಿದ್ಯಾರ್ಥಿಯೊಬ್ಬರು ತಿಳಿಸಿರುವಂತೆ, “ನಮಗೆ ಒಂದು ವರ್ಷಕ್ಕೂ ಹೆಚ್ಚಿನ ಸಮಯದವರೆಗೆ ಆನ್‌ ಲೈನ್ ತರಗತಿಗಳು ನಡೆಯುತ್ತಿದ್ದುದರಿಂದಾಗಿ ಆಫ್‌ ಲೈನ್ ತರಗತಿಗಳಿಗೆ ಒಗ್ಗಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ಏಕಾಗ್ರತೆ ಕ್ರೋಢೀಕರಿಸಲು ಕಷ್ಟವಾಯಿತು, ಮೇಲಾಗಿ ಪಠ್ಯಪುಸ್ತಕಗಳು ಬೇರೆ ಇಲ್ಲ. ಆನ್‌ ಲೈನ್‌ ನಲ್ಲಿ ಓದುವುದು ಅಥವಾ ಮುದ್ರಿತ ಹಾಳೆಗಳನ್ನು ಬಳಸಬೇಕಾಗಿರುವುದರಿಂದ ನಮಗೆ ಬಹಳ ಕಷ್ಟವಾಗಿದೆ,” ಎಂದರು.

ಪಠ್ಯಪುಸ್ತಕಗಳು ತಮಗೆ ಯಾವಾಗ ತಲುಪುತ್ತವೆ ಎಂದು ಶಾಲೆಗಳಿಗೆ ಇನ್ನೂ ಗೊತ್ತಾಗಿಲ್ಲ. ಗುರುಕುಲ್ ಇಂಟರ್‌ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ಎಂ.ಎನ್. ನಟೇಶ್ ಕುಮಾರ್ ಅವರು ಈ ಸಂಬಂಧ ಮಾತನಾಡಿ ಈಗಾಗಲೇ ೨೦ ದಿನಗಳಾಗಿದ್ದು ಇನ್ನೂ ನಮಗೆ ಅಗತ್ಯವಿರುವಷ್ಟು ಪಠ್ಯಪುಸ್ತಕಗಳು ಲಭಿಸಿಲ್ಲ ಎಂದಿದ್ದಾರೆ.

“ನಮಗೆ ಒಟ್ಟು ಅಗತ್ಯವಿರುವ ಪೈಕಿ ಕೇವಲ ಶೇ.೨೫-೩೦ರಷ್ಟು ಪಠ್ಯಪುಸ್ತಕಗಳು ಮಾತ್ರ ದೊರೆತಿವೆ. ಕೇವಲ ಆನ್‌ ಲೈನ್ ಪಠ್ಯ ಮಾತ್ರ ಲಭಿಸಿದೆ, ಹಾಗಾಗಿ ಬೋಧಕರಿಗೆ ಅದರ ಮುದ್ರಿತ ಪ್ರತಿಗಳನ್ನು ತೆಗೆದುಕೊಳ್ಳದೇ ಬೇರೆ ದಾರಿ ಇಲ್ಲ,” ಎಂದು ವಿವರಿಸಿದರು.

ಶಿಕ್ಷಣ ಇಲಾಖೆ v/s ಸಮಿತಿ

ಹಲವು ಆರೋಪಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪಿಯು ಪಠ್ಯಪುಸ್ತಕಗಳ ಪರಿಷ್ಕರಣಾ ಸಮಿತಿಯಿಂದ ಕೈಬಿಟ್ಟಿದೆ. ಚಕ್ರತೀರ್ಥ ಮುಂದಾಳತ್ವದ ಸಮಿತಿಯು ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿತ್ತು, ಆದರೆ, ಶಿಕ್ಷಣ ಇಲಾಖೆ ಆ ಪರಿಷ್ಕೃತ ಪಠ್ಯಕ್ಕೆ ಒಪ್ಪಿಗೆ ನೀಡಿಲ್ಲ.

ಈ ನಡುವೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಮಾತನಾಡಿ, ಮೂಲ ಪಠ್ಯಪುಸ್ತಕದ ಎಲ್ಲಾ ಕಂಟೆಂಟ್ ಜೊತೆಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಾಗೂ ಈಗಿನ ಬಿಜೆಪಿ ಅಧಿಕಾರಾವಧಿಯಲ್ಲಿ ಸಿದ್ಧಪಡಿಸಿರುವ ಎಲ್ಲಾ ಕಂಟೆಂಟ್ ಅನ್ನೂ ಸಹ ಜನರ ಮುಂದೆ ಪ್ರಸ್ತುತಪಡಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಜೊತೆಗೆ, ಜನರ ಅಭಿಪ್ರಾಯಗಳನ್ನು ಪರಿಗಣಿಸಿ ಹೆಚ್ಚಿನ ಪರಿಷ್ಕರಣೆ ಮಾಡಲೂ ಸಹ ಸರ್ಕಾರ ಮುಕ್ತವಾಗಿರುವುದಾಗಿಯೂ ತಿಳಿಸಿದ್ದಾರೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: learning – students – Stunted controversy – textbooks.