ಲಾಲ್ ಬಾಗ್ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಬೆಂಗಳೂರಿನ ಕತೆ ಹೂವಿನ ಭಾಷೆಯಲ್ಲಿ.

ಬೆಂಗಳೂರು, ಜನವರಿ ,9,2023 (www.justkannada.in): ಈ ವರ್ಷ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ದಿನದಂದು ನಡೆಯಲಿರುವ ವಿಶ್ವವಿಖ್ಯಾತ ಲಾಲ್‌ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ 15 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ಆಗಮಿಸುವ ನೀರಿಕ್ಷೆ ಇದೆ. ಕೋವಿಡ್ ಸಾಂಕ್ರಾಮಿಕ ಸಂಭವಿಸಿದ ನಂತರದಲ್ಲಿ ೨೦೨೦, ೨೦೨೧ರಲ್ಲಿ ಫಲಪುಷ್ಪ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ೨೦೨೨ರ ಸ್ವಾತಂತ್ರ್ಯ ದಿನಾಚರಣೆಯಂದು ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ದಾಖಲೆ ಸಂಖ್ಯೆಯಲ್ಲಿ ಜನರು ಪ್ರದರ್ಶನಕ್ಕೆ ಆಗಮಿಸಿದರು. ಈ ವರ್ಷ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಲಾಲ್‌ ಬಾಗ್‌ ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನ ಜನವರಿ ೧೯ ಹಾಗೂ ಜನವರಿ ೨೯ರ ನಡುವೆ ನಡೆಯಲಿದ್ದು, ದೊಡ್ಡ ಪ್ರಮಾಣದ ಜನರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನ ‘ಬೆಂಗಳೂರಿನ ಇತಿಹಾಸ’ದ ವಿಷಯವನ್ನು ಆಧರಿಸಿರುತ್ತದೆ. ಬೆಂಗಳೂರಿನ ವಿಕಸನವನ್ನು ಪ್ರತಿಬಿಂಬಿಸಲಿರುವ ಈ ಪ್ರದರ್ಶನದಲ್ಲಿ ಹಳೆಯ ಸಾಂಪ್ರದಾಯಿಕ ಬೆಂಗಳೂರು ನಗರದಿಂದ ಹಿಡಿದು ಈವರೆಗಿನ ಬೆಳವಣಿಗಗಳು ಪುಷ್ಪ ಪ್ರದರ್ಶನದಲ್ಲಿ ವಿವಿಧ ಮಾದರಿಗಳ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ. “ಬೆಂಗಳೂರು ಮಹಾನಗರದ ಸೃಷ್ಟಿ ಸುಮಾರು ೧,೫೦೦ ವರ್ಷಗಳಷ್ಟು ಪ್ರಾಚೀನವಾಗಿದೆ. ಬೇಗೂರಿನಲ್ಲಿ ಕಂಡು ಬಂದಂತಹ ಮೊದಲ ಶಾಸನದಲ್ಲಿ ಬೆಂಗಳೂರಿನ ಉಲ್ಲೇಖವಿದ್ದು, ಆದಾದ ನಂತರದಲ್ಲಿ ಚೋಳರ ಸಾಮ್ರಾಜ್ಯ ಹಾಗೂ ಕೆಂಪೇಗೌಡ ೧ ಆಧುನಿಕ ಬೆಂಗಳೂರನ್ನು ಸ್ಥಾಪಿಸಿದರು ಎನ್ನಲಾಗುತ್ತದೆ. ಈ ಎಲ್ಲಾ ಬೆಳವಣಿಗೆಗಳನ್ನು ಈ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು,” ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮುಂದುವರೆದು, ಮರಾಠರ ಉದಯ, ಒಡೆಯರ್ ರಾಜರ ಉದಯ, ಕೃಷ್ಣರಾಜ ಒಡೆಯರ್ ಹಾಗೂ ಹೈದರ್ ಆಲಿ ಸಾಮ್ರಾಜ್ಯಗಳ ಆಳ್ವಿಕೆಯ ಸಮಯದ ವಿವಿಧ ಮಾದರಿಗಳನ್ನು ಪ್ರದರ್ಶನ ಒಳಗೊಳ್ಳಲಿದೆ. “ಟಿಪು ಸುಲ್ತಾನ್ ಆಳ್ವಿಕೆಯ ಸಮಯದಲ್ಲಿ ಬೆಂಗಳೂರು ನಗರ ಯಾವ ರೀತಿ ವಿಕಾಸಗೊಂಡಿತು ಎನ್ನುವುದರಿಂದ ಹಿಡಿದು ಮೈಸೂರಿನ ಒಡೆಯರ್ ಸಾಮ್ರಾಜ್ಯದವರೆಗಿನ ಬೆಂಗಳೂರು ನಗರದ ವಿಕಸನವನ್ನು ವಿವಿಧ ಆಕರ್ಷಕ ಫಲಪುಷ್ಪ ಮಾದರಿಗಳ ಮೂಲಕ ಪ್ರದರ್ಶಿಸಲಾಗುವುದು. ಅದಾದ ನಂತರ, ೧೯೪೭ರವರೆಗೆ ಬ್ರಿಟಿಷ್ ಈಸ್ಟ್ ಇಂಡಿಯಾ ಆಳ್ವಿಕೆ ಅಡಿಯಲ್ಲಿ ಬೆಂಗಳೂರಿನ ಅಭಿವೃದ್ಧಿ, ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಹಾಗೂ ಕಾಲಕ್ರಮೇಣ ಬೆಂಗಳೂರು ನಗರ ಯಾವ ರೀತಿ ಸಿಲಿಕಾನ್ ಸಿಟಿಯಾಗಿ ಅಭಿವೃದ್ಧಿಯಾಯಿತು ಎಂದು ಪ್ರದರ್ಶನದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತದೆ,” ಎಂದು ಅವರು ವಿವರಿಸಿದರು. ಬೆಂಗಳೂರು ನಗರ ಬಾಹ್ಯಾಕಾಶ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿಯೂ ಸಹ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದು, ಫಲಪುಷ್ಪ ಪ್ರದರ್ಶನದಲ್ಲಿ ಈ ಕುರಿತೂ ಸಹ ಮಾದರಿಗಳು ಇರಲಿವೆ. ಈ ಪೈಕಿ ಕೆಲವು ಪರಿಕಲ್ಪನೆಗಳನ್ನು ಪುಷ್ಪ ಮಾದರಿಗಳು ಹಾಗೂ ಕೆಲವನ್ನು ಫೈಬರ್ ಮಾದರಿಗಳ ರೂಪದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

“ಪ್ರಸ್ತುತ ಪ್ರದರ್ಶನಕ್ಕೆ ಸಂಬಂಧಪಟ್ಟಂತೆ ನಾವು ಯಾವ ರೀತಿಯ ಪುಷ್ಪಗಳಿರಬೇಕೆಂದು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಕೆಲವು ಬಹಳ ಆಸಕ್ತಿ ಹುಟ್ಟಿಸುವಂತಹ ತಳಿಗಳಂತು ಇದ್ದೇ ಇರುತ್ತವೆ. ಇನ್ನು ಮೂರು ದಿನಗಳಲ್ಲಿ ನಾವು ಈ ಕುರಿತು ಅಂತಿಮ ನಿರ್ಧಾರಕ್ಕೆ ಬರುತ್ತೇವೆ,” ಎಂದರು.

ತೋಟಗಾರಿಕೆ ಇಲಾಖೆಯು ಈ ಬಾರಿ ಬೆಂಗಳೂರಿನ ಇತಿಹಾಸದ ಬಗ್ಗೆ ಮಾಹಿತಿಯುಳ್ಳ ಫಲಕಗಳನ್ನು ಪ್ರದರ್ಶನದಲ್ಲಿ ಅಳವಡಿಸುವ ಹಾಗೂ ಈ ವಿಷಯದ ಬಗ್ಗೆ ಹಲವು ಪ್ಯಾನೆಲ್ ಚರ್ಚೆಗಳನ್ನೂ ಸಹ ಆಯೋಜಿಸಲು ಆಲೋಚಿಸುತ್ತಿದೆಯಂತೆ.

ಈ ಬಾರಿ ನವ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಂದು ನಡೆಯಲಿರುವ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಕರ್ನಾಟಕದ ಸ್ತಬ್ದಚಿತ್ರ ಆಯ್ಕೆ ಆಗದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ನೊಡಲ್ ಅಧಿಕಾರಿ ಸಿ.ಆರ್. ನವಿನ್ ಅವರು, “ಭಾರತ ಸರ್ಕಾರ, ಕಳೆದ ಎಂಟು ವರ್ಷಗಳಲ್ಲಿ ಗಣರಾಜ್ಯೋತ್ಸವ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಭಾಗವಹಿಸದೇ ಇದ್ದಂತಹ ರಾಜ್ಯಗಳಿಗೆ ಈ ಬಾರಿ ಒಂದು ಅವಕಾಶವನ್ನು ಕೊಡಲು ನಿರ್ಧರಿಸಿದೆ. ಹಾಗಾಗಿ, ಕರ್ನಾಟಕ ರಾಜ್ಯಕ್ಕೆ ಈ ಬಾರಿ ಸ್ಥಾನ ಸಿಕ್ಕಿಲ್ಲ,” ಎಂದು ತಿಳಿಸಿದರು.

“ಮೇಲಾಗಿ, ಕಳೆದ ವರ್ಷಗಳಲ್ಲಿ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದಂತಹ ರಾಜ್ಯಗಳ ಪಟ್ಟಿ ಹಾಗೂ ಈ ಬಾರಿ ಆಯ್ಕೆಯಾಗಿರುವ ರಾಜ್ಯಗಳ ಪಟ್ಟಿಯನ್ನು ಹೊಲಿಕೆ ಮಾಡಿ ನೋಡಿದರೆ, ೨೦೨೨ರಲ್ಲಿ ಭಾಗವಹಿಸಿದ್ದಂತಹ ಮೂರು ಪ್ರಶಸ್ತಿ ವಿಜೇತ ರಾಜ್ಯಗಳಿಗೂ ಸಹ ಈ ಬಾರಿ ಸ್ಥಾನ ಲಭಿಸಿಲ್ಲ,” ಎಂದರು.

ಸುದ್ದಿ ಮಾಹಿತಿ: ಬೆಂಗಳೂರು ಮಿರರ್

Key words: Lal Bagh -Republic Day- Flower Show-story of Bangalore – language -flowers