ರಾಜೀವ್ ಸ್ನೇಹ ಬಳಗದ ಕಾರ್ಯ ಶ್ಲಾಘನೀಯ: ರಾಜ್ಯದಲ್ಲಿ 5 ಕೋಟಿ ಗಿಡ ಬೆಳೆಸುವ ಗುರಿ- ಸಿಎಂ ಸಿದ್ದರಾಮಯ್ಯ

ಮೈಸೂರು ,ಜೂನ್,15,2024 (www.justkannada.in): ರಾಜೀವ್ ಸ್ನೇಹ ಬಳಗದವರು ಗಿಡಮರಗಳ ನೆಡುವ ಮತ್ತು ಕೊಡುವ ಕೆಲಸವನ್ನ 2019 ರಿಂದಲೂ ಮಾಡುತ್ತಾ ಬಂದಿದ್ದಾರೆ. ಗಿಡ ನೆಟ್ಟು ಅವುಗಳ ಸಂರಕ್ಷಣಾ ಕಾರ್ಯವನ್ನೂ ಮಾಡುತ್ತಿದ್ದಾರೆ. ಇದು ಬಹಳ ಶ್ಲಾಘನೆಗೆ ಕೆಲಸ. ಹಾಗೆಯೇ ರಾಜ್ಯದಲ್ಲಿ 5 ವರ್ಷದಲ್ಲಿ  5 ಕೋಟಿ ಗಿಡ ಬೆಳೆಸುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಲಕ್ಷವೃಕ್ಷ ಯೋಜನಾ ಕಾರ್ಯಕ್ರಮದಲ್ಲಿ ಮಾತನಾಡಿದ  ಸಿಎಂ ಸಿದ್ದರಾಮಯ್ಯ, ರಾಜೀವ್ ಮತ್ತು ಅವರ ಸ್ನೇಹಿತರು ಲಕ್ಷ ವೃಕ್ಷ ಯೋಜನಾ ಕಾರ್ಯಕ್ರಮ ಹಮ್ಮಿಕೊಂಡು ನಾವೆಲ್ಲರೂ ಭಾಗವಹಿಸಲು ಕಾರಣಕರ್ತರಾಗಿದ್ದಾರೆ. ನಾನು ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಸಸ್ಯಗಳನ್ನು ನೆಡುವುದು,ಬೆಳೆಸೋದು ಬಹಳ ಒಳ್ಳೆಯ ಕೆಲಸ. ಪ್ರಕೃತಿ ನಮ್ಮ‌ಅವಶ್ಯಕತೆಗಳನ್ನ ಪೂರೈಸುತ್ತದೆ ಹೊರತು ನಮ್ಮ ದುರಾಸೆಗಳನ್ನಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ನಮ್ಮ‌ ದುರಾಸೆಗಳಿಂದ ಕಾಡು ನಶಿಸಿಹೋಗುತ್ತಿದೆ. ಕಾಡು ಕನಿಷ್ಠ ಪಕ್ಷ 30% ಇರಬೇಕು. ನಮ್ಮಲ್ಲಿ ಈಗ 19 ರಿಂದ 20% ಇದೆ. ಸರಾಸರಿ 30% ಇರಬೇಕು.  ಕೆಲವು ಜಿಲ್ಲೆಗಳಲ್ಲಿ ಬಹಳ ಕಡಿಮೆ ಕಾಡು ಇದೆ. ಯಾವಾಗಲೂ ಗಾಳಿ, ನೀರು, ಭೂಮಿ,ಆಕಾಶ ಇವೆಲ್ಲ ಸ್ವಚ್ಛವಾಗಿದ್ರೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಪ್ರಕೃತಿಯನ್ನ ಗೌರವಿಸಬೇಕು,ಸಂರಕ್ಷಣೆ ಮಾಡಬೇಕು. ನಾವೆಲ್ಲರೂ ಕೂಡ ಪ್ರಕೃತಿಯ ಒಂದು ಭಾಗ. ಪ್ರಕೃತಿ ನಮಗಾಗಿ ಇರದಲ್ಲ,ನಾವು ಪ್ರಕೃತಿಗೊಸ್ಕರ ಇರಬೇಕು. ಇದನ್ನ ಎಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈಗ ಜನ ಸಂಖ್ಯೆ ಬೆಳೆಯುತ್ತಿದೆ, ಜನಸಂಖ್ಯೆ ಬೆಳದಂತೆ ಕಾಡು ಕೂಡ ಬೆಳೆಯಬೇಕು. ಪ್ರಕೃತಿಯಲ್ಲಿ ಸಮತೋಲನ ಇರಬೇಕು. ಈ ವರ್ಷ ಬಹಳ ಶಾಖ, ತಾಪಮಾನ ಏರಿಕೆ ಆಗಿತ್ತು. ದೆಹಲಿಯಲ್ಲಿ 50 ಡಿಗ್ರಿಗೂ ಹೆಚ್ಚು ಏರಿಕೆಯಾಗಿತ್ತು. ಮಳೆ ಕಡಿಮೆಯಾಗಿದೆ,ಉಷ್ಣಾಂಶ ಹೆಚ್ಚಾಗಿದೆ. ಪ್ರಕೃತಿ ಅಸಮತೋಲನವಾಗಿದೆ.ಅದಕ್ಕಾಗಿ ತಾಪಮಾನದಲ್ಲಿ ಏರಿಕೆಯಾಗಿದೆ. ಕರ್ನಾಟಕದಲ್ಲೂ ಕೂಡ 47 ಡಿಗ್ರಿ ವರೆಗೂ ಏರಿಕೆ ಆಗಿತ್ತು ಎಂದರು.

ರಾಜ್ಯದಲ್ಲಿ ಐದು ವರ್ಷದಲ್ಲಿ 5 ಕೋಟಿ ಗಿಡ ಬೆಳೆಸುವ ಗುರಿ ಇಟ್ಟುಕೊಂಡಿದ್ದೇವೆ. ಇಡೀ ರಾಜ್ಯದಲ್ಲಿ ಹಸಿರು ಬೆಳೆಸಲು ನಾವು ಎಲ್ಲಾ ಪ್ರಯತ್ನ ಮಾಡುತ್ತೇವೆ. ಫಾರೆಸ್ಟ್ ಹೆಚ್ಚು ಹೆಚ್ಚು ಅಭಿವೃದ್ಧಿ ಮಾಡಲು ಈಶ್ವರ್ ಖಂಡ್ರೆಗೆ ಜವಾಬ್ದಾರಿ ಕೊಟ್ಟಿದ್ದೇವೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.ಜೊತೆಗೆ ಸಾರ್ವಜನಿಕರು ಕೂಡ ಸರ್ಕಾರದ ಜೊತೆ ಕೈ ಜೋಡಿಸಬೇಕು. ರಾಜೀವ್ ಸ್ನೇಹ ಬಳಗ ಬೇರೆಯವರಿಗೆ ಮಾದರಿಯಾಗಿದ್ದಾರೆ. ಇಂತ ಕೆಲಸಗಳನ್ನ ಎಲ್ಲರೂ ಮಾಡಬೇಕು. ನಮ್ಮ‌ ಪೂರ್ವಿಕರು ಒಂದು ಮರ ಕಡಿದ್ರೆ ಇನ್ನೊಂದು ಮರ ನೆಡುತ್ತಿದ್ದರು.  ಆ ಪದ್ದತಿ ಈಗ ಕಾಣುತ್ತಿಲ್ಲ.ರಾಜೀವ್ ಅವರು ಇನ್ನಷ್ಟು ಉತ್ತಮ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಶುಭಕೋರಿದರು.

ಮರಗಿಡಗಳನ್ನ ಬೆಳೆಸುವ ಪ್ರತಿಜ್ಞೆಯನ್ನ ಎಲ್ಲರೂ ಮಾಡಬೇಕು- ಸಚಿವ ಈಶ್ವರ್ ಖಂಡ್ರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ,  ರಾಜೀವ್ ಸ್ನೇಹ ಬಳಗದಿಂದ ಕಳೆದ 2019 ರಿಂದ ಲಕ್ಷವೃಕ್ಷ ಅಭಿಯಾನ ಹಮ್ಮಿಕೊಂಡಿದ್ದಾರೆ. ಅದಕ್ಕೆ ನಮ್ಮ ಅರಣ್ಯ ಇಲಾಖೆ ಪರವಾಗಿ ಅವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ಇಂದು ಹವಾಮಾನ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ರಕೃತಿಯಲ್ಲಿ ಹಲವಾರು ಬದಲಾವಣೆಗಳಾಗಿತ್ತಿವೆ. ಮುಂದಿನ ದಿನಗಳಲ್ಲಿ ಪ್ರಕೃತಿ ನಾಶವಾಗದಂತೆ ಮನುಕುಲ ಉಳಿವಿಗೆ ಪ್ರಕೃತಿ ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ಬಾರಿ ಭಾರಿ ಬಿಸಿಲಿನಿಂದ ಜನ ಕಂಗೆಟ್ಟಿದ್ದರು. ಇದೇ ಮುಂದುವರಿದರೆ ಪ್ರಾಣಿ ಸಂಕುಲ ಉಳಿಯಲಿಕ್ಕೆ ಸಾಧ್ಯವಿಲ್ಲ. ಋತುಮಾನದಲ್ಲಾಗುವ ಬದಲಾವಣೆಗೆ ನಮ್ಮಲ್ಲಿರುವ ಅತಿ ಆಸೆ. ಅಭಿವೃದ್ಧಿ ಹೆಸರಿನಲ್ಲಿ ನೈಸರ್ಗಿಕ ಸಂಪತ್ತು ನಾಶ ಮಾಡುತ್ತಿದ್ದೇವೆ. ನಮ್ಮ ಪೂರ್ವಜರು ಪ್ರಕೃತಿಯನ್ನು ಪೂಜಿಸುತ್ತಿದ್ದರು. ಇಂದು ಅದು ಬದಲಾಗಿದೆ,ಅರಣ್ಯ ನಾಶವಾಗುತ್ತಿದೆ. ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರು ಪರಿಸರ ಉಳಿಸುವ ಕೆಲಸ ಮಾಡಬೇಕು. ಮರಗಿಡಗಳನ್ನ ಬೆಳೆಸುವ ಪ್ರತಿಜ್ಞೆಯನ್ನ ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.

ಮೈಸೂರಿನಲ್ಲಿ ಕಳೆದ ವರ್ಷ 20 ಲಕ್ಷ ಸಸಿ ನೆಟ್ಟಿದ್ದೇವೆ. ಈ ಬಾರಿ ಮುಂಗಾರು ಬೇಗ ಬಂದಿದೆ ಈ ಬಾರಿಯೂ 11 ಲಕ್ಷ ಸಸಿ ನೆಡುವ ಯೋಜನೆ ಇದೆ. ಸಸಿ ನೆಡುವುದಲ್ಲ ಅವುಗಳ ಉಳಿಸುವ ಕೆಲಸ ಆಗಬೇಕು. ಐದು ವರ್ಷಗಳಲ್ಲಿ 25 ಕೋಟಿ ಸಸಿ ನೆಡುವ ಗುರಿ ಹೊಂದಿದ್ದೇವೆ ಎಂದು  ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು- ಸಚಿವ ಎಚ್.ಸಿ ಮಹದೇವಪ್ಪ.

ಸಸ್ಯ ಸಂಭ್ರಮ ಕಿರುಹೊತ್ತಿಗೆ  ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ, ಸ್ವತಂತ್ರ ಬಂದಾಗ ಭಾರತ ಜನಸಂಖ್ಯೆ 35 ಕೋಟಿ ಇತ್ತು. ಈಗ  140 ಕೋಟಿ ಆಗಿದೆ. ಜೀವಕೋಶ ಉಳಿಯಬೇಕು ಅಂದರೆ ಶೇ 33 ರಷ್ಟು ಅರಣ್ಯ ಇರಬೇಕು. ಇಲ್ಲ ಅಂದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಅಂತ ಒಂದು ಸಾಮಾಜಿಕ ಕಾಳಜಿಯ ಕೆಲಸವನ್ನ ರಾಜೀವ್ ಸ್ನೇಹ ಬಳಗ ಮಾಡುತ್ತಿದೆ. ನಮಗೆ ಆಮ್ಲಜನಕ ಕೊಡೋದು ಗಿಡಮರಗಳು. ಜನ ಸಂಖ್ಯೆ ನಿಯಂತ್ರಣ ಮಾಡದೇ ಹೋದರೆ‌ ಪರಿಸರ ಸಂರಕ್ಷಣೆ ಕಷ್ಟ ಆಗುತ್ತೆ. ಪರಿಸರದಲ್ಲಿ ಇಂಗಾಲ  ಡೈಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಿದೆ. ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗುತ್ತದೆ. ಉಷ್ಣಾಂಶ ನಿಯಂತ್ರಣಕ್ಕೆ ಮರಗಿಡಗಳನ್ನ ಹೆಚ್ಚು ಹೆಚ್ಚು ಬೆಳೆಸಬೇಕು ಎಂದರು.

ಮೈಸೂರು ಜಿಲ್ಲೆಯ ಸುತ್ತಮುತ್ತ 140 ಕಿ.ಮೀ ಸುತ್ತುಮುತ್ತಲಿನ ಪ್ರದೇಶದಲ್ಲಿ ಗಿಡಗಳನ್ನು ನೆಡಲು ಅವಕಾಶ ಇದೆ. ಆ ಕೆಲಸವನ್ನ ಎಲ್ಲರೂ ಮಾಡಬೇಕು. ಇದೊಂದು ರಾಷ್ಟ್ರೀಯ ಮಹತ್ವಾಕಾಂಕ್ಷೆಯ ಕೆಲಸ. ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು ಕಾಡು ಉಳಿದರೆ ನಾಡು ಉಳಿಯುತ್ತೆ ಎಂದು  ಉಸ್ತುವಾರಿ ಎಚ್.ಸಿ ಮಹದೇವಪ್ಪ ತಿಳಿಸಿದರು.

ಪರಸರ ಸಂರಕ್ಷಣಾ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ  ಬೆಂಗಳೂರಿನ ಶ್ರೀನಿವಾಸ್ ರಾಜು ಮತ್ತು ಬೆಳಗಿರಿರಂಗನಬೆಟ್ಟದ ಪರಿಸರ ಪ್ರೇಮಿ ರಾಮೇಗೌಡ ಎಂಬುವರಿಗೆ ಸಿರಿ ಸಂವರ್ಧನ  ಪ್ರಶಸ್ತಿ ಪ್ರದಾನ ಮಾಡಲಾಯಿತು.

Key words: Laksha Vrishka Abhiyan, Mysore, CM Siddaramaiah