ಸಂಘದ ಹೆಸರು, ಲೆಟರ್ ಹೆಡ್ ದುರ್ಬಳಕೆ: ಪೊಲೀಸ್ ಮಹಾ ನಿರ್ದೇಶಕರಿಗೆ KUWJ ದೂರು

ಬೆಂಗಳೂರು,ಜೂನ್,20,2026 (www.justkannada.in): ಟ್ರೇಡ್ ಯೂನಿಯನ್ ಆ್ಯಕ್ಟ್ 1956 ಪ್ರಕಾರ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತವಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೆಸರನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಒತ್ತಾಯಿಸಿದೆ.

ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ಅವರನ್ನು ಭೇಟಿ ಮಾಡಿದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ  ಶಿವಾನಂದ ತಗಡೂರು ಅವರು, ಪೊಲೀಸ್ ಠಾಣೆಯಲ್ಲಿಯೂ ಈ ಹೆಸರಿನ ಲೆಟರ್‌ ಹೆಡ್ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

1932ರಲ್ಲಿ ಡಿ.ವಿ.ಗುಂಡಪ್ಪ ಅವರಿಂದ ಸಂಸ್ಥಾಪಿತವಾದ ಸಂಘವು, ಕಾರ್ಮಿಕ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಟ್ರೇಡ್ ಯೂನಿಯನ್ ಆ್ಯಕ್ಟ್ ಪ್ರಕಾರ ಕಾಲ ಕಾಲಕ್ಕೆ ಚುನಾವಣೆಯನ್ನು ನಡೆಸುತ್ತಿದ್ದು, ರಾಜ್ಯ, ಜಿಲ್ಲೆ ಮತ್ತು ತಾಲೂಕುಗಳಲ್ಲಿ ಚುನಾಯಿತ ಆಡಳಿತ ಮಂಡಳಿಗಳು ಅಧಿಕಾರ ನಡೆಸುತ್ತಿವೆ. ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿಯೂ ಘಟಕಗಳನ್ನು ಹೊಂದಿದ್ದು, ಸುಮಾರು 9 ಸಾವಿರಕ್ಕೂ ಹೆಚ್ಚು ವೃತ್ತಿ ನಿರತ ಪತ್ರಕರ್ತರು ಸಕ್ರೀಯ ಸದಸ್ಯರಿದ್ದಾರೆ. ಹೊರ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿಯೂ ಘಟಕಗಳನ್ನು ಹೊಂದಿದೆ ಎನ್ನುವುದನ್ನು ಅವರ ಗಮನಕ್ಕೆ ತಂದರು.

ಸಹಕಾರ ಇಲಾಖೆಗೆ ತಪ್ಪು ಮಾಹಿತಿ ನೀಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂದು ನೋಂದಾಯಿಸಿಕೊಂಡಿರುವ ಖಾಸಗಿ ವ್ಯಕ್ತಿಯೊಬ್ಬ, ಆರ್‌ಟಿಐ ಹಾಕಲು ಮತ್ತು ಸರ್ಕಾರಿ ಮತ್ತು ಪೊಲೀಸ್ ಇಲಾಖೆಯಲ್ಲಿ ಪತ್ರ ವ್ಯವಹಾರಕ್ಕೆ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಹಕಾರ ಇಲಾಖೆ ಮತ್ತು ಸರ್ಕಾರಕ್ಕೆ ದೂರು ನೀಡಲಾಗಿದೆ ಎನ್ನುವುದನ್ನು ಗಮನಕ್ಕೆ ತಂದರು.

ಎಲ್ಲೆಲ್ಲಿ ಈ ರೀತಿಯ ದೂರುಗಳು ಬಂದಿವೆ ಎನ್ನುವುದನ್ನು ನನ್ನ ಗಮನಕ್ಕೆ ತರುವಂತೆ ಮತ್ತು ಆ ರೀತಿಯ ವ್ಯಕ್ತಿಗಳ ಚಲನ ವಲನ, ಪೂರ್ವಾಪರ ವಿಚಾರಣೆ ಮಾಡಿ ವರದಿ ನೀಡುವಂತೆ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ಪೊಲೀಸ್ ಮಹಾ ನಿರ್ದೇಶಕರು ಕೆಯುಡಬ್ಲ್ಯುಜೆ ನಿಯೋಗಕ್ಕೆ ಭರವಸೆ ನೀಡಿದರು. ಸ್ಥಳದಲ್ಲಿಯೇ ಹೆಚ್ಚು ದೂರು ಬಂದ ಜಿಲ್ಲೆಯೊಂದರ ಪೊಲೀಸ್ ವರಿಷ್ಠಾಧಿಕಾರಿಗೆ ಪೋನ್ ಮಾಡಿ ಸೂಕ್ತ ನಿರ್ದೇಶನವನ್ನೂ ನೀಡಿದರು.

95 ವಸಂತಗಳನ್ನು ತುಂಬಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಚಟುವಟಿಕೆಗಳನ್ನು ಗಮನಿಸಿದ್ದೇನೆ. ಸದಾ ಕ್ರೀಯಾಶೀಲವಾಗಿರುವ ಕೆಯುಡಬ್ಲ್ಯುಜೆ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯುಜೆ ಹೊರ ತಂದಿರುವ ಪತ್ರಕರ್ತ ಮ್ಯಾಗಜೀನ್ ಮತ್ತು ಕೋವಿಡ್ ಕಥೆಗಳು ಹಾಗೂ ಅಮೃತ ಬೀಜ ಪುಸ್ತಕಗಳನ್ನು ಸಂಘದ ರಾಜ್ಯಧ್ಯಕ್ಷ  ಶಿವಾನಂದ ತಗಡೂರು ಅವರು ಪೊಲೀಸ್ ಮಹಾ ನಿರ್ದೇಶಕ  ಎಂ.ಎ.ಸಲೀಂ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಮುನಿರಾಜು ಮತ್ತಿತರರು ಹಾಜರಿದ್ದರು.

Key words: Misuse, association name, letterhead:, KUWJ, complains, DGP