ಬೆಳಗಾವಿ, ಡಿಸೆಂಬರ್, 16, 2025 (www.justkannada.in): ಕುಣಿಗಲ್ ತಾಲ್ಲೂಕಿನ ಸಹಕಾರಿ ರಂಗಕ್ಕೆ ಅನುದಾನ ನೀಡಿಕೆಯಲ್ಲಿ ತಾರತಮ್ಯವಾಗಿದ್ದಲ್ಲಿ, ಮುಂದಿನ ವರ್ಷದಿಂದ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಶಾಸಕ ಡಾ. ಎಚ್.ಡಿ.ರಂಗನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂ:82(1612) ಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದರು.
2024-25ರಲ್ಲಿ ನಬಾರ್ಡ್ ನಿಂದ 5600 ಕೋಟಿ ಕಮ್ಮಿ ಬಡ್ಡಿದರದಲ್ಲಿ ಬರಬೇಕಾಗಿತ್ತು. ಅದರಲ್ಲಿ 3415 ಕೋಟಿ ರೂ. ಬಂದಿದ್ದು, 2185 ಕೋಟಿ ರೂ.ಗಳ ಕೊರತೆಯಾಗಿದೆ. ಮಧುಗಿರಿ ತಾಲ್ಲೂಕಿಗೆ ಹೆಚ್ಚು ಅನುದಾನ ನೀಡಿ, ಕುಣಿಗಲ್ ತಾಲ್ಲೂಕಿಗೆ ಕಡಿಮೆಯಾಗಿರುವ ಬಗ್ಗೆ ಶಾಸಕರು ತಿಳಿಸಿದ್ದಾರೆ. ಆದರೆ ಮಧುಗಿರಿಯಲ್ಲಿ ಶೇ. 26 ರಷ್ಟು ಎಸ್ ಸಿ, ಎಸ್ ಟಿ ಸಮುದಾಯದವರಿದ್ದು, ಕುಣಿಗಲ್ ನಲ್ಲಿ ಕೇವಲ ಶೇ. 8 ರಷ್ಟು ಮಾತ್ರ ಎಸ್ ಸಿ ಎಸ್ ಟಿ ಗೆ ಸೇರಿದ ಸಮುದಾಯಗಳಿವೆ. ಆದ್ದರಿಂದ ಅನುದಾನದ ಹೆಚ್ಚಿನ ಪಾಲು ಮಧುಗಿರಿಗೆ ನೀಡಿರಬಹುದು. ಆದರೆ ಮುಂದಿನ ವರ್ಷದಿಂದ ಈ ತಾರತಮ್ಯವನ್ನು ಕಾನೂನು ಪ್ರಕಾರ ನಿವಾರಣೆ ಮಾಡಲಾಗುವುದು ಎಂದರು.
ಕುಣಿಗಲ್ ತಾಲ್ಲೂಕಿನಲ್ಲಿ 4 ಲಕ್ಷ ಪಹಣಿ ಇದ್ದು, 1 ಲಕ್ಷ ರೈತರಿದ್ದಾರೆ. ಆದರೆ ಡಿಸಿಸಿ ಬ್ಯಾಂಕ್ ಗಳ ಮೂಲಕ ಕೇವಲ 20 ರೈತರಿಗೆ ಮಾತ್ರ ಅಲ್ಪಾವಧಿ ಸಾಲ ಕೊಟ್ಟಿರುತ್ತಾರೆ. ರೈತರ ಹಣವನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿರುವ ಇಂತಹ ಸಂಘಗಳಿಂದ ರೈತರ ರಕ್ಷಣೆಗೆ ಸರ್ಕಾರ ಬರಬೇಕಿದೆ ಎಂದು ಕುಣಿಗಲ್ ಶಾಸಕ ಡಾ. ಎಚ್.ಡಿ.ರಂಗನಾಥ್ ಅವರು ತಮ್ಮ ಪ್ರಶ್ನೆಯ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆದರು.
Key words: Kunigal Taluk, Discrimination, next year, CM, Siddaramaiah







