ಕೆಎಸ್‌ ಆರ್‌ ಟಿಸಿಯ ಮೊದಲ ಇ-ಬಸ್ ಬೆಂಗಳೂರಿಗೆ ಆಗಮನ; ಫೆಬ್ರವರಿಯಿಂದ ಸೇವೆಗಳು ಆರಂಭ ಸಾಧ್ಯತೆ…

ಬೆಂಗಳೂರು, ಜನವರಿ,2,2023 (www.justkannada.in): ಬೆಂಗಳೂರು-ಮೈಸೂರು ನಡವೆ ಒಳಗೊಂಡಂತೆ, ಮಹಾನಗರದ ಹಲವಾರು ಮಾರ್ಗಗಳಲ್ಲಿ ವಿದ್ಯುತ್ ಬಸ್ಸುಗಳ ಸೇವೆಗಳು ಫೆಬ್ರವರಿಯಿಂದ ಆರಂಭವಾಗುವ ಸಾಧ್ಯತೆಗಳಿವೆ. ಭಾನುವಾರದಂದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ ಆರ್‌ಟಿಸಿ) ಮೊದಲ ವಿದ್ಯುತ್ ಬಸ್‌ ನ ಸ್ವಾಗತಿಸಿದ್ದು, ಶೀಘ್ರದಲ್ಲೇ ಇದರ ಪ್ರಾಯೋಗಿಕ ಸೇವೆ ಆರಂಭವಾಗುವ ನಿರೀಕ್ಷೆ ಇದೆ.

ಕೆಎಸ್‌ ಆರ್‌ ಟಿಸಿಯು ಫೇಮ್-II (Faster Adoption and Manufacturing of Hybrid and Electric Vehicles) ಯೋಜನೆಯಡಿ ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವೀರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ನಗರ ಈ ಆರು ಮಾರ್ಗಗಳಲ್ಲಿ ‘ಇವಿ-ಪವರ್ ಪ್ಲಸ್’ ಹೆಸರನಡಿ ಒಟ್ಟು 50 ವಿದ್ಯುತ್ ಬಸ್ಸುಗಳ ಸೇವೆಯನ್ನು ಆರಂಭಿಸಲಿದೆ. ೪೩ ಪುಷ್ ಬ್ಯಾಕ್ ಸೀಟುಗಳಿರುವ ಈ ಬಸ್ಸುಗಳನ್ನು ಹೈದ್ರಾಬಾದ್ ಮೂಲದ ವಿದ್ಯುತ್ ಬಸ್ಸುಗಳನ್ನು ತಯಾರಿಸುವ ಕಂಪನಿ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ಸರಬರಾಜು ಮಾಡಿದೆ. ಇ ಬಸ್ಸುಗಳಲ್ಲಿ ಆರಾಮದಾಯಕವಾದ ಆಸನಗಳ ಜೊತೆಗೆ ಶಬ್ದರಹಿತ ಪ್ರಯಾಣವನ್ನು ಪ್ರಯಾಣಿಕರು ಅನುಭವಿಸಬಹುದು. ಜೊತೆಗೆ, ಈ ಬಸ್ಸುಗಳಲ್ಲಿ ವೈಫೈ ಸೌಲಭ್ಯ ಹಾಗೂ ಯುಎಸ್‌ ಬಿ ಚಾರ್ಜಿಂಗ್ ವ್ಯವಸ್ಥೆಯೂ ಇದೆ.

ಈ ಬಸ್ಸುಗಳು ಬ್ಯಾಟರಿಗಳನ್ನು ಹೊಂದಿದ್ದು, ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಎರಡರಿಂದ ಮೂರು ತಾಸುಗಳು ಬೇಕಾಗುತ್ತದೆ ಹಾಗೂ ಒಮ್ಮೆ ಚಾರ್ಜ್ ಮಾಡಿದರೆ ೩೦೦ ಕಿ.ಮೀ. ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ. ಕೆಎಸ್‌ ಆರ್‌ ಟಿಸಿ ಅಧಿಕಾರಿಗಳ ಪ್ರಕಾರ, ಬೆಂಗಳೂರು ಹಾಗೂ ಮೈಸೂರು ನಗರಗಳಲ್ಲಿ ಈ ಬಸ್ಸುಗಳನ್ನು ಚಾರ್ಜ್ ಮಾಡುವ ಸ್ಥಳಗಳನ್ನು ಈಗಾಗಲೇ ಅಳವಡಿಸಲಾಗಿದ್ದು, ಮಡಿಕೇರಿ, ವೀರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ನಗರಗಳಲ್ಲಿಯೂ ಈ ಕೆಲಸ ಜಾರಿಯಲ್ಲಿದೆ.

ಇದು ಕೆಎಸ್‌ ಆರ್‌ ಟಿಸಿಯ ವಿದ್ಯುತ್ ಬಸ್ಸುಗಳಿಗೆ ಬದಲಾಗುವ ಮೊದಲ ಹಂತವಾಗಿದೆ. 2030ರ ವೇಳೆಗೆ ಕೆಎಸ್‌ ಆರ್‌ಟಿಸಿಯ ಎಲ್ಲಾ ಬಸ್ಸುಗಳು ವಿದ್ಯುತ್ ಆಗಲಿವೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಈಗಾಗಲೇ ಬೆಂಗಳೂರು ನಗರದ ಹಲವು ಮಾರ್ಗಗಳಲ್ಲಿ ವಿದ್ಯುತ್ ಬಸ್ಸುಗಳ ಸೇವೆಯನ್ನು ಆರಂಭಿಸಿದ್ದು, ಇದು ಕೆಎಸ್‌ ಆರ್‌ ಟಿಸಿಯ ಬಹಳ ಕಾಲದಿಂದ ನಿರೀಕ್ಷಿಸುತ್ತಿರುವ ಸೇವೆಯ ಆರಂಭವಾಗಿದೆ.

ಸಾರಿಗೆ ಅಧಿಕಾರಿಗಳು ಕೆಎಸ್‌ ಆರ್‌ ಟಿಸಿ ಪಡೆಗೆ 20 ಯೂರೋಪಿಯನ್ ಶೈಲಿಯ ಬಸ್ಸುಗಳನ್ನು ಸೇರ್ಪಡೆಗೊಳಿಸಲು ಯೋಜಿಸಿದೆ. ಅದು ಮುಂದಿನ ತಲೆಮಾರಿನ ವೋಲ್ವೊ ೯೬೦೦ ಪ್ಲಾಟ್‌ ಫಾರಂ ಬಿಎಸ್-೬ ಮಲ್ಟಿಆಕ್ಸಲ್ ಸ್ಲೀಪರ್ ಕೋಚುಗಳಾಗಿದ್ದು, 40 ಬರ್ತ್ ಗಳನ್ನು ಒಳಗೊಂಡಿರುತ್ತದೆ, ಹಾಗೂ ೧೫ ಮೀ. ಉದ್ದ ಇರುತ್ತದೆ. ಇದರೊಂದಿಗೆ ಇದು ಅತೀ ಉದ್ದನೆಯ ಬಸ್ಸುಗಳಾಗಲಿವೆ. ಹೆಚ್ಚಿನ ಸ್ಥಳಾವಕಾಶ ಹಾಗೂ ಆರಾಮದ ಜೊತೆಗೆ ಈ ಯೂರೋಪಿಯನ್ ಶೈಲಿಯ ಬಸ್ಸುಗಳು ಯುಎಸ್‌ ಬಿ ಚಾರ್ಜಿಂಗ್ ಪೋರ್ಟುಗಳು, ವ್ಯಕ್ತಿಗತ ಎಸಿ ಲೋವರ್ಸ್ ಗಳು, ಹಾಗೂ ಓದುವವರಿಗೆ ಪ್ರತ್ಯೇಕ ದೀಪದ ವ್ಯವಸ್ಥೆಯನ್ನೂ ಒಳಗೊಂಡಿರುತ್ತದೆ.

ಕೆಎಸ್‌ ಆರ್‌ ಟಿಸಿಯು ಮುಂಬರುವ ತಿಂಗಳುಗಳಲ್ಲಿ ತನ್ನ ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸಲು ಇನ್ನೂ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲು ಯೋಜಿಸಿದೆ. ವರದಿಗಳ ಪ್ರಕಾರ, ನಿಗಮವು ಡಿಪೋಗಳು ಹಾಗೂ ನಿಲ್ದಾಣಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ವಿಶೇಷ ಟಿಕೆಟ್ ವ್ಯವಸ್ಥೆಯನ್ನು ಪರಿಚಯಿಸಲಿದೆ. ಸ್ವಯಂಚಾಲಿತ ಶುಲ್ಕ ಸಂಗ್ರಹ ಹಾಗೂ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ)ಗಳನ್ನೂ ಸಹ ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು.

ಸುದ್ದಿ ಮೂಲ: ಟೈಮ್ಸ್ ನೌ

Key words: KSRTC- first -e-bus- arrives – Bangalore- Services – February