ಯಾರು ಕೋರ್ಟ್ ಮೊರೆ ಹೋಗಿದ್ದರೋ ಅವರಿಗೆ ಮಾತ್ರ ಅಂಕಪಟ್ಟಿ : ಕೆಎಸ್ಒಯು ಕುಲಪತಿ ಡಾ.ಎಸ್‌.ವಿದ್ಯಾಶಂಕರ್‌

ಮೈಸೂರು, ಜು.13, 2019 : (www.justkannada.in news) : ತಾತ್ಕಾಲಿಕ ಪದವಿ ಪತ್ರ (ಪ್ರಾವಿಷನ್‌ ಡಿಗ್ರಿ ಸರ್ಟಿಫಿಕೇಟ್‌) ಹಾಗೂ ಅಂಕಪಟ್ಟಿಗಾಗಿ ಯಾರು ಕೋರ್ಟ್ ಮೊರೆ ಹೋಗಿದ್ದರೋ ಅವರಿಗೆ ಮಾತ್ರ ಅಂಕಪಟ್ಟಿ ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ.

ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ವ್ಯಾಸಂಗ ಮಾಡಿದ 11 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿ ಪತ್ರ (ಪ್ರಾವಿಷನ್‌ ಡಿಗ್ರಿ ಸರ್ಟಿಫಿಕೇಟ್‌) ಹಾಗೂ ಅಂಕಪಟ್ಟಿ ನೀಡುವಂತೆ ಕೆಎಸ್‌ಒಯುಗೆ ಹೈಕೋರ್ಟ್‌ ಆದೇಶ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಕರ್ನಾಟಕ ರಾಜ್ಯ ಮುಕ್ತ ವಿವಿ. ಕುಲಪತಿ ಡಾ.ಎಸ್‌.ವಿದ್ಯಾಶಂಕರ್‌ ಅಧ್ಯಕ್ಷತೆಯಲ್ಲಿ ವಿಶೇಷ ಶೈಕ್ಷಣಿಕ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಕೋರ್ಟ್ ಆದೇಶದ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು.
ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಮುಕ್ತ ವಿವಿ ಕುಲಪತಿ ಡಾ.ಎಸ್‌.ವಿದ್ಯಾಶಂಕರ್‌ ಹೇಳಿದಿಷ್ಟು…

ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ವ್ಯಾಸಂಗ ಮಾಡಿದ 11 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿ ಪತ್ರ (ಪ್ರಾವಿಷನ್‌ ಡಿಗ್ರಿ ಸರ್ಟಿಫಿಕೇಟ್‌) ಹಾಗೂ ಅಂಕಪಟ್ಟಿ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಇದೇ ಮಾನದಂಡವನ್ನು ಉಳಿದ 95 ಸಾವಿರ ವಿದ್ಯಾರ್ಥಿಗಳಿಗೂ ಅನ್ವಯಗೊಳಿಸಲು ಸಾಧ್ಯವೆ ಎಂಬ ನಿಟ್ಟಿನಲ್ಲಿ ಚರ್ಚಿಸಲಾಯಿತು. ಆದರೆ ಕಾನೂನು ತಜ್ಞರ ಸಲಹೆ ಪ್ರಕಾರ ಸಾಧ್ಯವಿಲ್ಲ. ಕಾರಣ, ಕೋರ್ಟ್, ಅರ್ಜಿದಾರರನ್ನು ಉಲ್ಲೇಖಿಸಿ ಅವರಿಗೆ ತಾತ್ಕಾಲಿಕ ಪದವಿ ಪತ್ರ (ಪ್ರಾವಿಷನ್‌ ಡಿಗ್ರಿ ಸರ್ಟಿಫಿಕೇಟ್‌) ಹಾಗೂ ಅಂಕಪಟ್ಟಿ ನೀಡುವಂತೆ ಆದೇಶಿಸಿರುವುದು.
ಈ ಹಿನ್ನೆಲೆಯಲ್ಲಿ ಯಾರು ನ್ಯಾಯಾಲಯದಲ್ಲಿ ಆದೇಶ ತಂದಿದ್ದಾರೋ ಅಥವಾ ತರುತ್ತಾರೋ ಅಂಥವರಿಗೆ ತಾತ್ಕಾಲಿಕ ಪದವಿ ಪತ್ರ ಹಾಗೂ ಅಂಕಪಟ್ಟಿಯನ್ನು ಕೆಎಸ್ಒಯು ನೀಡಲಿದೆ.

ಏನಿದು ಹಿನ್ನೆಲೆ :

ಮುಕ್ತ ವಿವಿ ತನ್ನ ವ್ಯಾಪ್ತಿ ಮೀರಿ ಕೋರ್ಸ್‌ಗಳನ್ನು ತೆರೆದಿದೆ ಎಂದು ಯುಜಿಸಿ 2013ರಿಂದ 15ರ ಶೈಕ್ಷಣಿಕ ಅವಧಿಯಲ್ಲಿ ಪ್ರವೇಶ ನೀಡಿದ ಎಲ್ಲಾ ಕೋರ್ಸ್‌ಗಳ ಮಾನ್ಯತೆ ರದ್ದುಪಡಿಸಿತ್ತು. ಇದರಿಂದ ಅಂದಾಜು ನಾಲ್ಕು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜತೆಗೆ 95 ಸಾವಿರ ಇನ್‌ಹೌಸ್‌ ವಿದ್ಯಾರ್ಥಿಗಳ ಭವಿಷ್ಯವೂ ಅತಂತ್ರಗೊಂಡಿತು. ಇನ್‌ ಹೌಸ್‌ ವಿದ್ಯಾರ್ಥಿಗಳ ಪರ ಸರಕಾರ ಕ್ಯಾಬಿನೆಟ್‌ನಲ್ಲಿ ಅಧಿಸೂಚನೆ ಹೊರಡಿಸಿದರೂ ರಾಜ್ಯಪಾಲರ ಸಹಿ ಬೀಳಲಿಲ್ಲ.

ಇದೇ ವೇಳೆ ನೊಂದ ವಿದ್ಯಾರ್ಥಿಗಳು 2019ರ ಏಪ್ರಿಲ್‌ನಲ್ಲಿ ಕೋರ್ಟ್‌ ಮೊರೆ ಹೋದರು. ಈ ವೇಳೆ ಮುಕ್ತ ವಿವಿ ಕುಲಪತಿಯಾಗಿದ್ದ ಪ್ರೊ.ಡಿ.ಶಿವಲಿಂಗಯ್ಯ ಅವರು ಕೋರ್ಟ್ ಮೆಟ್ಟಿಲು ಹತ್ತಿದ ವಿದ್ಯಾರ್ಥಿಗಳಿಗೆ ಪೂರಕವಾಗುವಂತೆ ನ್ಯಾಯಾಲಯದಲ್ಲಿ ದಾಖಲೆ ಸಲ್ಲಿಸಿದರು. ಮುಕ್ತವಿವಿ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ. 2015 ರಲ್ಲಿ ನೋಟಿಫಿಕೇಷನ್ ಹೊರಡಿಸುವ ಮುನ್ನವೇ 2013-14 ರ p ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಜತೆಗೆ ವಿವಿಯ ವ್ಯಾಪ್ತಿಯ ಹೊರಗೆ ಯಾವುದೇ ಕೇಂದ್ರಗಳನ್ನು ತೆರೆದಿಲ್ಲ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದರು.

ಕುಲಪತಿ ಅವಧಿ ಪೂರ್ಣಗೊಂಡು ಹುದ್ದೆಯಿಂದ ನಿರ್ಮಿಸುವ ಸಂದರ್ಭದಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದ ಪ್ರೊ.ಡಿ.ಶಿವಲಿಂಗಯ್ಯ ಅವರು, ಪತ್ರಿಕಾಗೋಷ್ಠಿಯಲ್ಲೂ ಈ ಅಂಶ ಉಲ್ಲೇಖಿಸಿದ್ದರು. ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಲಾಗಿದೆ. ಸದ್ಯದಲ್ಲೇ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಹೊರ ಬೀಳಲಿದೆ ಎಂದಿದ್ದರು.

ಈ ಆಧಾರದ ಮೇಲೆ ಇದೀಗ ಅರ್ಜಿದಾರರಾದ ನಂಜನಗೂಡಿನ ಜಿ.ಆನಂದಕುಮಾರ್‌, ಆರ್‌.ಮಹದೇವಸ್ವಾಮಿ, ಸಿದ್ದರಾಜು ಸೇರಿದಂತೆ 11 ಜನರ ಪರ ತೀರ್ಪು ಬಂದಿದೆ.

—-

key words : KSOU-markscard-vc-vidyashankar-vc-mysore