ವಿದ್ಯಾರ್ಥಿಗಳು ವೈಫಲ್ಯಕ್ಕೆ ಹೆದರದೆ ನಾವೀನ್ಯತೆ, ಕ್ರಿಯಾಶೀಲತೆಗೆ ಹೆಚ್ಚು ಒತ್ತು ನೀಡಿ- ಕಾಂತಾ ನಾಯಕ್

ಮೈಸೂರು,ಸೆಪ್ಟಂಬರ್,2,2025 (www.justkannada.in):  ಶಿಕ್ಷಣದ ಕಲಿಕೆ ಜೊತೆಗೆ ಕೌಶಲ್ಯ ಕೂಡಿದರೆ ಇನ್ನಷ್ಟು ಪ್ರಗತಿ ಸಾಧಿಸಬಹುದು. ವಿದ್ಯಾರ್ಥಿಗಳು ವೈಫಲ್ಯಕ್ಕೆ ಹೆದರದೆ ನಾವೀನ್ಯತೆ, ಕ್ರಿಯಾಶೀಲತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಕಾಂತಾ ನಾಯಕ್ ಹೇಳಿದರು.

ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ 45 ದಿನಗಳ ಕಾಲ ಆಯೋಜಿಸಲಾಗಿದ್ದ ಕೆ-ಸೆಟ್ ಮತ್ತು ಯುಜಿಸಿ ನೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಕಾಂತಾ ನಾಯಕ್ ಮಾತನಾಡಿದರು.

ಕೌಶಲ್ಯ ಮಹತ್ವವಾದುದ್ದು, ಅದು ಯಾವುದಾದರೂ ಸರಿಯೇ, ನಿಮ್ಮ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ ಅಗತ್ಯ ಕೌಶಲ್ಯಗಳನ್ನು ಪಡೆದು ಗುರಿ ಮುಟ್ಟಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಉದ್ಯೋಗಕ್ಕೆ ಅಗತ್ಯವಾದ ತರಬೇತಿ ನೀಡಲು ಸರ್ಕಾರ, ಕೈಗಾರಿಕೆ ಮತ್ತು ಶಿಕ್ಷಣ ತಜ್ಞರ ನಡುವೆ ಚರ್ಚೆಗಳಾಗಿ ನೂತನ ಯೋಜನೆಗಳು ಅನುಷ್ಠಾನಗೊಂಡಿವೆ. ಈ ಮೂಲಕ ಕ್ಯಾಂಪಸ್ ನೇರ ನೇಮಕಾತಿಗಳಲ್ಲಿ ಕೌಶಲ್ಯವಿರುವ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುತ್ತಿವೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಜೊತೆಗೆ ಕೌಶಲ್ಯ ಕೂಡ ವೃತ್ತಿಯಾಧಾರಿತ ಬದುಕು ನಡೆಸಲು ಮನುಷ್ಯನಿಗೆ ಸಹಾಯಕವಾಗುತ್ತಿವೆ. ವಿದೇಶಗಳಲ್ಲಿ ಇರುವ ಕೌಶಲ್ಯ ನಮ್ಮಲ್ಲಿ ಇಲ್ಲ. ಇದನ್ನು ನಾವು ಪ್ರಶ್ನಿಸಿಕೊಂಡು, ಓದಿ ಉದ್ಯೋಗ ಪಡೆಯುವುದೇ ಮುಖ್ಯವಲ್ಲ ಇದರ ಜೊತೆ ಕೌಶಲ್ಯ ಬೆಳೆಸಿಕೊಳ್ಳಬೇಕು. ಕೌಶಲ್ಯ ಒಲಿಂಪಿಕ್ಸ್‌ ನಲ್ಲಿ ನೀವೆಲ್ಲಾ ಭಾಗವಹಿಸಿ ಇಲ್ಲಿ ಎಲ್ಲಾ ತರಹದ ವೃತ್ತಿಪರ ಕೌಶಲ್ಯ ಪ್ರದರ್ಶಿಸಲು ಅವಕಾಶವಿರುತ್ತದೆ. ಇದಕ್ಕೆ ಸರ್ಕಾರ ಶಿಷ್ಯವೇತನವನ್ನು ಸಹ ನೀಡುತ್ತಿದೆ ಎಂದು ತಿಳಿಸಿದರು.

ಶಿಕ್ಷಕ ವೃತ್ತಿ ಆರಿಸಿಕೊಂಡು ಇಲ್ಲಿಗೆ ಬಂದಿದ್ದರು ನೀವುಗಳು ಎಐ(ಕೃತಕ ಬುದ್ಧಿಮತ್ತೆ)ನ ಚಾಟ್‌ ಜಿಪಿಟಿ, ಗ್ರೂಕ್, ಜೆಮಿನಿ ಅಂತಹವುಗಳನ್ನು ಬಳಸಿಕೊಂಡು ಕಲಿಕೆ ಗುಣಮಟ್ಟ ಹೆಚ್ಚಿಕೊಂಡು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಿಳಿಹೇಳಬೇಕು. ಹೀಗಾಗಿ ಕಲಿಕೆ ಒಟ್ಟಿಗೆ ಕೌಶಲ್ಯ ಸಹ ನಿಮ್ಮಲ್ಲಿ ಇರಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಲೋಕನಾಥ್ ಅವರು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನ ಜೀವನ ಅವಿಭಾಜ್ಯ ಅಂಗವಾಗಿದೆ. ಇಂದಿನ ಅಧುನಿಕ ಯುಗಕ್ಕೆ ತಂತ್ರಜ್ಞಾನ ಅತ್ಯಗತ್ಯವಾಗಿದೆ. ತಂತ್ರಜ್ಞಾನದ ಜೊತೆಗೆ ನಾವು ಸಾಗಬೇಕೆ ವಿನಃ ಅದನ್ನು ವಿರೋಧಿಸಬಾರದು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡುವವರಲ್ಲಿ ಯುನಿಕ್‌ ನೆಸ್ ಇರಬೇಕು. ಇದರ ಜೊತೆಗೆ ತಂತ್ರಜ್ಞಾನ ಅಳವಡಿಸಿಕೊಂಡರೆ ನಾವು ಬೇಗ ಗುರಿ ಮುಟ್ಟುತ್ತೇವೆ. ಸ್ಪರ್ಧಾತ್ಮಕ ಯುಗದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸುವವರು ತುಂಬಾ ಕಠಿಣವಾದ ಪ್ರಶ್ನೆಗಳನ್ನ ಸಿದ್ಧಪಡಿಸುತ್ತಾರೆ. ಅದನ್ನು ವಿದ್ಯಾರ್ಥಿಗಳು ಸುಲಭವಾಗಿ ಉತ್ತರಿಸುವ ಹಾಗೆ ಸಿದ್ಧವಾಗಿರಬೇಕು ಎಂದು ಹೇಳಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಅವರು ಮಾತನಾಡಿ, ಕೌಶಲ್ಯವಿಲ್ಲದಿದ್ದರೆ ಯಾವುದೇ ರೀತಿ ಸಬಲೀಕರಣ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಶಿಕ್ಷಣದಲ್ಲಿ ಕೌಶಲ್ಯವು ಅತ್ಯಂತ ಅವಶ್ಯಕ ಪೂರಕವಾದದ್ದು. ಕೌಶಲ್ಯ ಕೇಂದ್ರವು ಗ್ರಾಮೀಣ ಭಾಗದಿಂದ ಬಂದ ಯುವಜನರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸುವವರಿಗೆ ಒಂದು ರೀತಿಯ ಆಶಾಕಿರಣ ಹಾಗೂ ಬೆನ್ನಲುಬಾಗಿ ನಿಂತಿದೆ. ಶಿಕ್ಷಣದಿಂದ ಮಾತ್ರ ಎಲ್ಲೆ ಮೀರಲು ಸಾಧ್ಯ ಎಂದು ಹೇಳಿದರು.

ಮೈಸೂರು ಒಂದು ಶೈಕ್ಷಣಿಕ ರಾಜಧಾನಿ. ಶೈಕ್ಷಣಿಕವಾಗಿ ದೊಡ್ಡ ಇತಿಹಾಸ ಪರಂಪರೆಯಿದೆ. ಅದನ್ನು ಸಂರಕ್ಷಿಸಿಕೊಂಡು ಯುವ ಜನಾಂಗಕ್ಕೆ ಪಸರಿಸುವಲ್ಲಿ, ಪೂರೈಸುವಲ್ಲಿ ದೊಡ್ಡ ಕೆಲಸಗಳಾಗುತ್ತಿವೆ ಮೈಸೂರಿನ ಮಾಧ್ಯಮ ಬೇರೆಲ್ಲ ಕ್ಷೇತ್ರಕ್ಕಿಂತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.

ದೇಶದಲ್ಲಿ ಈ ರೀತಿಯ ಉಚಿತವಾಗಿ ಅವಕಾಶಗಳನ್ನು ಒದಗಿಸುವ ವಿಶ್ವವಿದ್ಯಾನಿಲಯಗಳು ಅತ್ಯಂತ ವಿರಳ. ಅವಕಾಶ ವಂಚಿತರಿಗೆ, ಉನ್ನತ ಶಿಕ್ಷಣವನ್ನು ವಿಸ್ತರಿಸುವ, ಒದಗಿಸುವ ಕೆಲಸವಾಗುತ್ತಿದೆ. ಸಮಾಜ, ಸಮುದಾಯ, ಕೈಗಾರಿಕೆಗಳ, ಸಂಸ್ಥೆಗಳ ನಡುವೆ ನಂಟು ಬೆಳೆಸುವುದು ಅತ್ಯಂತ ಅವಶ್ಯಕ. ವಿದ್ಯಾರ್ಥಿಗಳ ಕಲಿಕೆಯು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗ ಬೇಕಿದೆ. ಇವತ್ತು ತಂತ್ರಜ್ಞಾನದಲ್ಲಿ ಬದುಕುತ್ತಿದ್ದು, ಕೃತಕ ಬುದ್ಧಿಮತ್ತೆಯು ನಮ್ಮೆಲ್ಲರ ಬದುಕನ್ನು, ಕ್ಷೇತ್ರವನ್ನು ಆವರಿಸಿದೆ. ಎಲ್ಲ ವಿಚಾರ, ವಿಷಯಗಳು ಅಂಗೈನಲ್ಲಿ ಸಿಗುವ ಅವಕಾಶ ಒದಗಿಸಿದೆ. ಈ ಯುಗದಲ್ಲಿ ಭೋದನೆ, ಸಂಶೋಧನೆ, ಕಲಿಕೆ ಎಲ್ಲವೂ ದೊಡ್ಡ ಸವಾಲಾಗಿದೆ. ಆದ್ದರಿಂದ ತಂತ್ರಜ್ಞಾನವನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಮುಂದುವರೆಯಬೇಕಾಗಿದೆ. ಇದೆಲ್ಲದರ ನಡುವೆ ಬದುಕಿನಲ್ಲಿ ಮಾನವೀಯತೆ, ನೈತಿಕ ಮೌಲ್ಯ, ಸಮಾಜದ ಸಾಮರಸ್ಯ, ಜವಬ್ದಾರಿಗಳನ್ನು ಸ್ಥಾಪಿಸುವಲ್ಲಿ, ಕೂಡಿಸುವಲ್ಲಿ ಶಿಕ್ಷಕರ ಪಾತ್ರ, ಶಿಕ್ಷಣದ ಪಾತ್ರ ಹೆಚ್ಚಿದೆ ಎಂದರು.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು. ಗುರಿ ಜೊತೆಗೆ ಸಮಯ ಪರಿಪಾಲನೆ ಮಾಡುವ ಕೌಶಲ್ಯ ಕೂಡ ಇರಬೇಕು. ನಿಮ್ಮ ಶ್ರಮದ ಮೇಲೆ ನಿಮಗೆ ನಂಬಿಕೆಯಿರಲಿ ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.

ರಾಮನಾಥಂ ನಾಯ್ಡು, ಅಧ್ಯಯನ ಕೇಂದ್ರದ ಡೀನ್‌ ಪ್ರೊ. ಎನ್.ಆರ್. ಚಂದ್ರೇಗೌಡ, ಸಂಯೋಜಕ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ಧೇಶ್ ಹೊನ್ನೂರು, ಬಿ.ಗಣೇಶ್ ಕೆ.ಜಿ. ಕೊಪ್ಪಳ ಸೇರಿದಂತೆ ಇತರರು ಇದ್ದರು.

Key words: KSOU, Students, innovation, without, fear of failure, Kantha Nayak