KSOU :ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆ ನೇರ ನೇಮಕಾತಿಗೆ ಹೈಕೋರ್ಟ್‌  ತಡೆ..!

 

ಬೆಂಗಳೂರು, ಫೆ.೧೭, ೨೦೨೪ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ನೇರ ನೇಮಕಾತಿಗೆ ತಡೆಯಾಜ್ಞೆ ನೀಡಿದ ಉಚ್ಚ ನ್ಯಾಯಾಲಯ.

ಉಚ್ಚ ನ್ಯಾಯಾಲಯದ ನ್ಯಾಯಧೀಶ ಸಚಿನ್‌ ಶಂಕರ್‌ ಮುಗ್ದಂ ಅವರು, 16.08.2023ರ  ಕರಾಮುವಿ ಅಧಿಸೂಚನೆಗೆ ತಡೆಯಾಜ್ಞೆ ನೀಡಿದ್ದಾರೆ.

ವಿವರ:

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ( KSOU  ̲ Karnataka state open university )  ತನ್ನ 7 ಪ್ರೊಫೆಸರ್ ಹಾಗೂ 25 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳನ್ನು ನೇರನೇಮಕಾತಿಗೆ  ಹಿಂದಿನ ಕುಲಪತಿ ಡಾ.ವಿದ್ಯಾಶಂಕರ್ ಅವದಿಯ 18.10.2021ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಸದರಿ‌ ಅಧಿಸೂಚನೆಯು UGC ನಿಯಮಾನುಸಾರ ಇರುವುದಿಲ್ಲ ಹಾಗೂ ಅರ್ಜಿ ಸಲ್ಲಿಸಲು ನಿಯಮಾನುಸಾರ ಸಾಕಷ್ಟು ಸಮಯಾವಕಾಶ ಕಲ್ಪಿಸಿರುವುದಿಲ್ಲವೆಂದು ಕೆಲವು ಅಭ್ಯರ್ಥಿಗಳು ಹಿಂದೆ ರಿಟ್ ಅರ್ಜಿ  W.P 6147/2022 ಸಲ್ಲಿಸಿದ್ದು ಮಾನ್ಯ ಉಚ್ಚ ನ್ಯಾಯಾಲಯ 29.03.2022ರ ಮಧ್ಯಂತರ ಸದರಿ ನೇಮಕಾತಿಗೆ ತಡೆಯಾಜ್ಞೆ ನೀಡಿತ್ತು.

ನಂತರದಲ್ಲಿ ಮುಕ್ತ ವಿವಿ ಸದರಿ 18.10.2021ರ ಅಧಿಸೂಚನೆಯನ್ನು ಹಿಂಪಡೆದಿತ್ತು.

ಕರಾಮುವಿ  ಮತ್ತೊಮ್ಮೆ 16.08.2023ರ ಅಧಿಸೂಚನೆ ಹೊರಡಿಸಿ  7 ಪ್ರೊಫೆಸರ್ ಹಾಗೂ 25 ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿ ಕರೆದಿತ್ತು, 18.10.2021ಅಧಿಸೂಚನೆಯಂತೆ ಅರ್ಜಿ ಸಲ್ಲಿದ್ದವರು, ಮತ್ತೊಮ್ಮೆ ಅಜಿ೯ ಸಲ್ಲಿಸುವ ಅವಶ್ಯಕತೆ ಇಲ್ಲ ಆದರೆ ಹೆಚ್ಚುವರಿ ಅರ್ಜಿ:ಶುಲ್ಕ ಮಾತ್ರ ಪಾವತಿಸುವುದು ಸೂಚಿಸಲಾಗಿತ್ತು.

16.08.2021ರ ಮರುಅಧಿಸೂಚನೆಯಲ್ಲಿ ಮೀಸಲಾತಿ ಸಂಬಂಧದ ಸರ್ಕಾರಿ ಆದೇಶ 22.2.1994ಕ್ಕೆ ವಿರುದ್ಧವಾಗಿ ಶಿಕ್ಷಣ ಶಾಸ್ತ್ರ, ಗಣಿತ ಶಾಸ್ತ್ರ,  ಹಾಗೂ ಭೌತಶಾಸ್ತ್ರ ವಿಭಾಗಗಳಿಗೆ ತಲಾ ಒಂದು ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯನ್ನು  ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿರಿಸಿರುವುದು ಸೇರಿದಂತೆ UGC  ನಿಯಮಾವಳಿಗಳನ್ವಯ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಮೌಖಿಕ‌ ಸಂದರ್ಶಶನಕ್ಕೆ ಅರ್ಹರಿರುವ ಅಭ್ಯರ್ಥಿಗಳ ವಿವರಗಳನ್ನು ಕರಾಮುವಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸದೇ ತರಾತುರಿಯಲ್ಲಿ ದಿನಾಂಕ: 17.02.2024ಕ್ಕೆ ಸಂದರ್ಶನ ನಿಗದಿಪಡಿಸುದ್ದುದನ್ನು ರಿಟ್ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಅರ್ಜಿದಾರರ ವಾದವನ್ನು‌ ಮತ್ತು ದಾಖಲೆಗಳನ್ನು ಪರಿಶೀಲಿಸಿ ದಿನಾಂಕ:16.02.2024ರ ಆದೇಶದಂತೆ ಮಾನ್ಯ ಉಚ್ಚ ನ್ಯಾಯಾಲಯವು ಕರಾಮುವಿಯ 16.08.2021ರ ಶಿಕ್ಷಕ ಹುದ್ದೆಗಳ ನೇರನೇಮಕಾತಿ  ಅಧಿಸೂಚನೆಗೆ ತಡೆಯಾಜ್ಞೆ  ನೀಡಿದ್ದು ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ನೋಟೀಸ್ ಜಾರಿಗೊಳಿಸಿ ಪ್ರಕರಣವನ್ನು ಮುಂದೂಡಿದೆ.

ಅಲ್ಲಿಗೆ  ಪ್ರೊಫೆಸರ್ ಹಾಗೂ  ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿ ಮತ್ತೊಮ್ಮೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದಂತಾಗಿದೆ.

ಕಳೆದ 31.07.2023ರಲ್ಲಿ ಕರಾಮುವಿಯು (KSOU ; Karnataka state open university  ) ಗುತ್ತಿಗೆ ಅಧಾರದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂಬಂಧ ಹೊರಡಿಸಿದ್ದ ಅಧಿಸೂಚನೆಯೂ UGC ನಿಯಮಾವಳಿ ಹಾಗೂ ಮೀಸಲಾತಿ ಉಲ್ಲಂಘನೆ ಕಾರಣಕ್ಕೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ನಂತರದಲ್ಲಿ ಕರಾಮುವಿ ಆಡಳಿತ ಮಂಡಳಿ ಈ ಗುತ್ತಿಗೆ ಆಧಾರಿತ ಶಿಕ್ಷಕ ಹುದ್ದೆಗಳನ್ನು ಹಿಂಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

 

ಕುಲಸಚಿವರ ಸ್ಪಷ್ಟನೆ:

ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ಬಗ್ಗೆ ಯಾವುದೇ ಆದೇಶ ಕೈತಲುಪಿಲ್ಲ. ಈ ಬಗ್ಗೆ ವಕೀಲರೊಬ್ಬರು ವಿಶ್ವವಿದ್ಯಾನಿಲಯಕ್ಕೆ ಬರೆದಿರುವ ಪತ್ರ ಮಾತ್ರ ತಲುಪಿದೆ.

ಆದ್ದರಿಂದ ಇಂದು ನಿಗಧಿಯಂತೆ ಹುದ್ದೆಗೆ ಸಂದರ್ಶನ ನಡೆಯಲಿದೆ ಎಂದು ಕರಾಮುವಿ ಕುಲಸಚಿವ ಪ್ರೊ. ಕೆ.ಎಲ್.ಎನ್.‌ ಮೂರ್ತಿ ಅವರು ಜಸ್ಟ್‌ ಕನ್ನಡ ಗೆ ಸ್ಪಷ್ಟಪಡಿಸಿದರು.

Key words : KSOU  ̲ Karnataka state open university  ̲ high ̲ court ̲ stayed ̲ oppointment ̲ Bangalore