110 ಅಡಿ ದಾಟಿದ ಕೆಆರ್’ಎಸ್ ಅಣೆಕಟ್ಟೆ: 50 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲು ಸಿದ್ಧತೆ

ಮೈಸೂರು, ಆಗಸ್ಟ್ 08, 2019 (www.justkannada.in): ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ 110 ಅಡಿ ದಾಟಿದೆ.

ಜಲಾಶಯಕ್ಕೆ 1.8 ಲಕ್ಷ ಕ್ಯೂಸೆಕ್ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಜಲಾಶಯದಿಂದ ನದಿಗೆ ಬಿಡಲಾಗುತ್ತಿದ್ದ ನೀರನ್ನು ನಿನ್ನೆಯಿಂದ ನಿಲ್ಲಿಸಿದ್ದು, ದಿನದಿಂದ ದಿನಕ್ಕೆ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಹೇಮಾವತಿ ಜಲಾಶಯದಿಂದ 79 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹಾಗೂ ಹಾರಂಗಿ ಜಲಾಶಯದಿಂದ 16 ಸಾವಿರಕ್ಕೂ ಹೆಚ್ಚು ನೀರನ್ನು ಬಿಡಲಾಗುತ್ತಿದೆ. ಇದರಿಂದ ಕೆಆರ್‍ಎಸ್ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಗರಿಷ್ಠ 124.80 ಅಡಿ ಸಾಮಥ್ರ್ಯದ ಕೆಆರ್‍ಎಸ್ ಸದ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ತುಂಬುವ ಸಾಧ್ಯತೆಗಳಿವೆ. ಇಂದಿನಿಂದಲೇ 50 ಸಾವಿರ ಕ್ಯೂಸೆಕ್ ನೀರನ್ನು ಅಣೆಕಟ್ಟೆಯಿಂದ ಹೊರ ಬಿಡಲಾಗುತ್ತದೆ.