ಆರ್‌ಟಿಐ ಅಡಿ ಮಾಹಿತಿ ನೀಡಲೂ ಕೆಪಿಎಸ್‌ಸಿ ನಕಾರ

ಬೆಂಗಳೂರು:ಮೇ-20:ಮಾಹಿತಿ ಹಕ್ಕು ಕಾಯಿದೆ ನಿಯಮದಂತೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಯಾವುದೇ ವ್ಯಕ್ತಿ ಅಥವಾ ಅಭ್ಯರ್ಥಿಗಳು ಮಾಹಿತಿ ಕೇಳಿದರೆ, ನಾನಾ ಬಗೆಯ ‘ಕೊಕ್ಕೆ’ ಹಾಕಿ ಮಾಹಿತಿ ನೀಡಲು ಅಭ್ಯರ್ಥಿಗಳನ್ನು ಅನಗತ್ಯ ಅಲೆಸುವ ಪರಿಪಾಠ ನಡೆಯುತ್ತಿದೆ.

ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಕೇಳಿದರೂ ಒಂದಲ್ಲಾ ಒಂದು ರೀತಿಯ ತಗಾದೆಗಳನ್ನು ತೆಗೆದು ಮಾಹಿತಿ ನೀಡುವುದರಿಂದ ಕೆಪಿಎಸ್ಸಿ ತಪ್ಪಿಸಿಕೊಳ್ಳುತ್ತಿದೆ. ಆರ್‌ಟಿಐ ಅರ್ಜಿ ಸಲ್ಲಿಸುವಾಗಲೇ ನೀವು ಕೆಪಿಎಸ್‌ಸಿ ಪರೀಕ್ಷೆ ಹಾಜರಾಗಿದ್ದೀರಾ? ಹಾಗಿದ್ದರೆ ಪ್ರವೇಶ ಪತ್ರದ ನಕಲು ಪ್ರತಿ ಲಗತ್ತಿಸಿ ಅರ್ಜಿ ಸಲ್ಲಿಸಿ ಎಂದು ಮಾಹಿತಿ ಹಕ್ಕು ಕೋಶದ ಅಧಿಕಾರಿಗಳು ಹೇಳುತ್ತಾರೆ.

ಪ್ರವೇಶ ಪತ್ರದ ನಕಲು ನೀಡದಿದ್ದಲ್ಲಿ ಆರ್‌ಟಿಐ ಅರ್ಜಿಗಳನ್ನು ಸ್ವೀಕರಿಸದೆ ವಾಪಸ್‌ ಕಳುಹಿಸಿರುವ ಉದಾಹರಣೆಗಳೂ ಇವೆ. ಕೆಪಿಎಸ್‌ಸಿ ಸಾರ್ವಜನಿಕ ಸಂಸ್ಥೆಯಾಗಿರುವುದರಿಂದ ಕೇವಲ ಪರೀಕ್ಷೆ ಬರೆಯುವ ಅಭ್ಯರ್ಥಿಗಳೇ ಅರ್ಜಿ ಸಲ್ಲಿಸಬೇಕೆಂದೇನೂ ಇಲ್ಲ , ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಪ್ರವೇಶ ಪತ್ರ ಲಗತ್ತಿಸಿ ಅರ್ಜಿ ಸಲ್ಲಿಸಿದವರಿಗೂ ಸರಿಯಾದ ಮಾಹಿತಿ ಸಿಗುವ ಖಾತ್ರಿಯಿಲ್ಲ. ಮಾಹಿತಿ ಹಕ್ಕು ಅಧಿನಿಯಮ 2005ರ ಸೆಕ್ಷನ್‌ 2(ಎಫ್‌)ನÜಂತೆ ಲಭ್ಯವಿರುವ ಮಾಹಿತಿಯನ್ನು ಮಾತ್ರ ಕೋರಬಹುದಾಗಿದ್ದು, ನೀವು ಕೋರಿರುವ ಮಾದರಿಯಲ್ಲಿ ಸಿದ್ಧಪಡಿಸಿಲ್ಲದ ಪ್ರಯುಕ್ತ ಪ್ರತ್ಯೇಕ ಮಾಹಿತಿ ಸಿದ್ಧಪಡಿಸಿ ನೀಡಲು ಆರ್‌ಟಿಐನಲ್ಲಿ ಅವಕಾಶವಿಲ್ಲವೆಂಬ ಷರಾ ಬರೆದು ಜಾಣ್ಮೆಯ ಉತ್ತರ ನೀಡಿ ತಪ್ಪಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಮಾಮೂಲಿಯಾಗಿದೆ.

ಆಯೋಗದ ಈ ಧೋರಣೆಗೆ ಬೇಸತ್ತು ಮಾಹಿತಿ ಹಕ್ಕು ಆಯೋಗದ ಮೊರೆ ಹೋಗುತ್ತೇನೆ ಎನ್ನುತ್ತಾರೆ ಬೆಂಗಳೂರು ಮಹಾಲಕ್ಷ್ಮೇ ಬಡಾವಣೆಯ ಎಸ್‌.ಕುಮಾರ್‌.

”ಸರಕಾರದ ಪ್ರತಿಯೊಂದು ಕಾರ‍್ಯದಲ್ಲೂ ಪಾರದರ್ಶಕತೆ ಬರಬೇಕು, ಆ ಮೂಲಕ ಸಾರ್ವಜನಿಕರಿಗೆ ಮುಕ್ತ ಮಾಹಿತಿ ಲಭ್ಯವಾಗಬೇಕು ಎನ್ನುವ ಅಶಯದೊಂದಿಗೆ ಜಾರಿಗೊಳಿಸಿರುವ ಮಾಹಿತಿ ಹಕ್ಕಿಗೆ ಆಯೋಗ ಯಾವುದೇ ಬೆಲೆ ನೀಡುತ್ತಿಲ್ಲ. ಹಾಗಾಗಿ ಮಾಹಿತಿ ಹಕ್ಕು ಆಯೋಗವೇ, ಕೆಪಿಎಸ್‌ಸಿ ವಿರುದ್ಧ ಕ್ರಮ ಜರುಗಿಸಬೇಕು ”ಎಂದು ಅಭ್ಯರ್ಥಿ ಎಸ್‌.ಕುಮಾರ್‌ ಒತ್ತಾಯಿಸಿದ್ದಾರೆ.

ಲಿಂಕ್‌ ಕಟ್‌, ಅಭ್ಯರ್ಥಿಗಳ ಪರದಾಟ

ಈ ಮಧ್ಯೆ, ಸಿಎಂ ಮತ್ತು ಸರಕಾರದ ಮುಖ್ಯ ಕಾರ‍್ಯದರ್ಶಿಗಳಿಗೆ ಕೆಪಿಎಸ್‌ಸಿ ನೇಮಕ ಮತ್ತಿತರ ವಿಷಯಗಳ ಬಗ್ಗೆ ನೀಡಿದ ಮನವಿಗಳು ಯಾವ ಹಂತದಲ್ಲಿವೆ ಎಂಬುದನ್ನು ಈ ಮೊದಲು ಅಭ್ಯರ್ಥಿಗಳು ಸಚಿವಾಲಯದ ವಾಹಿನಿಯಲ್ಲಿ ಪರಿಶೀಲಿಸಬಹುದಿತ್ತು. ಅದರಲ್ಲಿ ಕಡತ ಎಲ್ಲಿದೆ, ಯಾವ ಹಂತದಲ್ಲಿ ಎಂಬ ಮಾಹಿತಿ ಲಭ್ಯವಾಗುತ್ತಿತ್ತು. ಆದರೆ ಇದೀಗ ಸಿಎಂ ಮತ್ತು ಸಿಎಸ್‌ ಕಚೇರಿ ಲಿಂಕ್‌ ಅನ್ನು ವಾಹಿನಿಯಿಂದ ತೆಗೆದುಹಾಕಲಾಗಿದೆ. ಆದ್ದರಿಂದ ಅಭ್ಯರ್ಥಿಗಳಿಗೆ ಅಗತ್ಯ ಮಾಹಿತಿ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೃಪೆ:ವಿಜಯಕರ್ನಾಟಕ

ಆರ್‌ಟಿಐ ಅಡಿ ಮಾಹಿತಿ ನೀಡಲೂ ಕೆಪಿಎಸ್‌ಸಿ ನಕಾರ
kpsc-didnot-give-information-under-rti-act