ಬೆಂಗಳೂರು, ಜುಲೈ 27,2026 (www.justkannada.in): ದೇಶದ ಯುವ ಸಮುದಾಯದ ಧ್ವನಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಭಾರತದ ರಾಜಕೀಯಕ್ಕೆ ಜುಲೈ 25 ನೆನಪಿಸಿದೆ. ಆದ್ದರಿಂದ ಪ್ರತಿವರ್ಷ ಜುಲೈ 25 ಅನ್ನು *”ಯುವೋದಯ ದಿನ”*ವಾಗಿ ಆಚರಿಸುವ ಪರಂಪರೆಯನ್ನು ದೇಶಾದ್ಯಂತ ಆರಂಭಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಜುಲೈ 25 ಕೇವಲ ಒಂದು ದಿನಾಂಕವಲ್ಲ. ಅದು ಯುವಶಕ್ತಿ, ವಿದ್ಯಾರ್ಥಿ ಚಳವಳಿ ಮತ್ತು ಪ್ರಜಾಪ್ರಭುತ್ವದ ಜಾಗೃತಿಯ ಸಂಕೇತ. ದೇಶದ ಭವಿಷ್ಯವನ್ನು ರೂಪಿಸುವ ಯುವಕರು ಒಗ್ಗಟ್ಟಾಗಿ ಧ್ವನಿ ಎತ್ತಿದಾಗ, ಎಷ್ಟೇ ಪ್ರಬಲ ಸರ್ಕಾರವಿದ್ದರೂ ಜನಾಭಿಪ್ರಾಯಕ್ಕೆ ತಲೆಬಾಗಲೇಬೇಕಾಗುತ್ತದೆ ಎಂಬುದನ್ನು ಈ ದಿನ ಇತಿಹಾಸದ ಪುಟಗಳಲ್ಲಿ ದಾಖಲಿಸಿದೆ” ಎಂದು ಹೇಳಿದ್ದಾರೆ.
ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು Gen Z ಯುವಕರು ಶಿಕ್ಷಣ, ಪಾರದರ್ಶಕತೆ ಹಾಗೂ ನ್ಯಾಯಕ್ಕಾಗಿ ನಡೆಸಿದ ಹೋರಾಟವು ಕೇವಲ ಒಂದು ಪ್ರತಿಭಟನೆ ಆಗಿರಲಿಲ್ಲ. ಅದು ಆಡಳಿತದ ಅಹಂಕಾರವನ್ನು ಪ್ರಶ್ನಿಸಿದ ಜನತಾಂತ್ರಿಕ ಚಳವಳಿಯಾಗಿತ್ತು. ಯುವಕರ ಸಹನೆಗೆ ಮಿತಿ ಇದೆ, ಅವರ ಕನಸುಗಳೊಂದಿಗೆ ಆಟವಾಡಿದರೆ ಅದರ ವಿರುದ್ಧ ದೇಶವ್ಯಾಪಿ ಜನಾಂದೋಲನ ಹುಟ್ಟುತ್ತದೆ ಎಂಬ ಎಚ್ಚರಿಕೆಯನ್ನು ಜುಲೈ 25 ದೇಶದ ಆಡಳಿತ ವ್ಯವಸ್ಥೆಗೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಯುವಕರಿಗೆ ಉದ್ಯೋಗದ ಭರವಸೆ ನೀಡಿ, ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿ ಅಕ್ರಮ, ಪರೀಕ್ಷಾ ಅವ್ಯವಸ್ಥೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ವೈಫಲ್ಯಗಳಿಂದ ಅವರ ಭವಿಷ್ಯವನ್ನು ಹಾಳು ಮಾಡುವ ಯಾವುದೇ ಸರ್ಕಾರದ ವಿರುದ್ಧ ಯುವ ಸಮುದಾಯ ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಹಕ್ಕು. ಆ ಹಕ್ಕಿನ ವಿಜಯದ ದಿನವೇ “ಯುವೋದಯ ದಿನ”.
ಪ್ರಜಾಪ್ರಭುತ್ವದಲ್ಲಿ ಯಾವುದೇ ಅಧಿಕಾರ ಶಾಶ್ವತವಲ್ಲ. ಆದರೆ ಯುವಶಕ್ತಿ ಶಾಶ್ವತ. ಅಧಿಕಾರದ ದರ್ಪ, ಆಡಳಿತದ ನಿರ್ಲಕ್ಷ್ಯ ಮತ್ತು ಜನರ ಧ್ವನಿಯನ್ನು ಹತ್ತಿಕ್ಕುವ ಮನೋಭಾವದ ವಿರುದ್ಧ ಯುವಕರು ಸಂಘಟಿತರಾದರೆ ಬದಲಾವಣೆ ಅನಿವಾರ್ಯ ಎಂಬ ಸಂದೇಶವನ್ನು ಜುಲೈ 25 ಸಾರಿದೆ ಎಂದು ಎಚ್.ಎ. ವೆಂಕಟೇಶ್ ಹೇಳಿದ್ದಾರೆ.
“ಇತಿಹಾಸದಲ್ಲಿ ಆಗಸ್ಟ್ 15 ಸ್ವಾತಂತ್ರ್ಯ ದಿನ, ಜನವರಿ 26 ಗಣರಾಜ್ಯೋತ್ಸವ, ಅಕ್ಟೋಬರ್ 2 ಗಾಂಧಿ ಜಯಂತಿಯಂತೆ, ಜುಲೈ 25 ಯುವ ಸಮುದಾಯದ ಪ್ರಜಾತಾಂತ್ರಿಕ ಜಾಗೃತಿಯ ದಿನವಾಗಿ – ‘ಯುವೋದಯ ದಿನ’ವಾಗಿ – ಗುರುತಿಸಬೇಕು. ಈ ದಿನವನ್ನು ಕಾಲೇಜುಗಳು, ವಿಶ್ವವಿದ್ಯಾಲಯಗಳು, ಯುವ ಸಂಘಟನೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಆಚರಿಸುವ ಮೂಲಕ ಯುವ ಹೋರಾಟದ ಮೌಲ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು” ಎಂದು ಅವರು ಕರೆ ನೀಡಿದ್ದಾರೆ.
“ದೇಶದ ಭವಿಷ್ಯ ಸಂಸತ್ತಿನ ಗೋಡೆಗಳಲ್ಲಿ ಮಾತ್ರ ನಿರ್ಮಾಣವಾಗುವುದಿಲ್ಲ; ವಿದ್ಯಾರ್ಥಿಗಳ ಕನಸುಗಳಲ್ಲಿ ನಿರ್ಮಾಣವಾಗುತ್ತದೆ. ಆ ಕನಸುಗಳಿಗೆ ಧಕ್ಕೆ ಬಂದಾಗ ಇತಿಹಾಸ ಬರೆಯುವುದು ಯುವಕರೇ. ಜುಲೈ 25 ಅಂಥ ಇತಿಹಾಸ ನಿರ್ಮಿಸಿದ ದಿನ. ಆದ್ದರಿಂದ ಅದು ಇನ್ನು ಮುಂದೆ ‘ಯುವೋದಯ ದಿನ’ವಾಗಿ ದೇಶದ ನೆನಪಿನಲ್ಲಿ ಶಾಶ್ವತವಾಗಿ ಉಳಿಯಬೇಕು” ಎಂದು ಎಚ್.ಎ. ವೆಂಕಟೇಶ್ ಹೇಳಿದ್ದಾರೆ.
English Summary..
Declare July 25 as “Youth Awakening Day”: KPCC Spokesperson H.A. Venkatesh
July 25 marks a defining moment in India’s democratic journey, when the collective voice of students and Gen Z youth proved that public opinion cannot be ignored.
This day symbolizes the courage of young people who stood up for transparency, accountability, and justice. It is a reminder that when the aspirations of the youth are challenged, democracy responds.
Therefore, July 25 should be observed every year as “Youth Awakening Day” to honour the power of youth, inspire future generations, and celebrate democratic participation.
Key words: July 25, “Youth Day, KPCC spokesperson, H.A. Venkatesh





