ಕೋಟಿಗಟ್ಟಲೇ ಸಾರ್ವಜನಿಕ ಹಣ ಲೂಟಿ ಹೊಡೆದ ರಮೇಶ್ ಜಾರಕಿಹೊಳಿ : ದಾಖಲೆ ಬಿಡುಗಡೆ ಮಾಡಿದ ಕೆಪಿಸಿಸಿ ವಕ್ತಾರ.

kpcc-spokes.person-m.lakshman-allegation-against-ramesh-jarakiholi

 

ಬೆಂಗಳೂರು, ಜೂ.26, 2022 : (www.justkannada.in news)ಸಮ್ಮಿಶ್ರ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ತಂದ ರೂವಾರಿ ರಮೇಶ್ ಜಾರಕಿಹೊಳಿ. ಇವರು ಸುಮಾರು 819 ಕೋಟಿ ರೂ. ಸಾರ್ವಜನಿಕ ಹಣವನ್ನು ಲೂಟಿ ಮಾಡಿದ್ದಾರೆ. ಇದು ಗಂಭೀರವಾದ ವಿಚಾರವಾಗಿದ್ದು, ಇದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ, ಕೇಂದ್ರ ಸಚಿವ ಅಮಿತ್ ಶಾ, ಮಹರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕರ್ನಾಟಕ ರಾಜ್ಯದ ಹಾಲಿ ಮುಖ್ಯಮಂತ್ರಿಗಳು ನೇರವಾಗಿ ಭಾಗಿಯಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದು ಹೀಗೆ..

ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕರ ಆಸ್ತಿಯನ್ನು ನುಂಗಿದ್ದರೂ ಅವರಿಗೆ ಒಂದೇ ಒಂದು ನೊಟೀಸ್ ಅನ್ನು ಜಾರಿ ಮಾಡದಿರುವುದು ದುರಂತ. ಸೌಭಾಗ್ಯ ಲಕ್ಷ್ಮೀ ಶುಗರ್ ಲಿಮಿಟೆಡ್ ಗೆ 6 ಮಂದಿ ಬೋರ್ಡ್ ಆಫ್ ಡೈರೆಕ್ಟರ್, 4 ಜನ ಅವರ ಕುಟುಂಬದವರು, ಉಳಿದವರು ಇವರ ಬೇನಾಮಿಗಳು. ಈ ಕಂಪನಿ ಯಾವ ಬ್ಯಾಂಕಿಗೆ ಎಷ್ಟು ಸಾಲ ನೀಡಬೇಕು ಎಂದು ಲಿಖಿತ ರೂಪದಲ್ಲಿ ತಿಳಿಸಿದೆ. ಅದರ ಪ್ರಕಾರ, ಕರ್ನಾಟಕ ಸ್ಟೇಟ್ ಕೋ ಆಪರೇಟಿವ್ ಅಪೆಕ್ಸ್ ಬ್ಯಾಂಕ್ ಲಿ. ಗೆ 180 ಕೋಟಿ ರೂ. ಐಕೆಮೆಸ್ಟ್ ಆಸೆಟ್ ರೀಕನ್ಸ್ಟ್ರಕ್ಷನ್ ಲಿ. 128.96 ಕೋಟಿ ರೂ., ವಿಜಯಪುರ ಡಿಸಿಸಿ ಬ್ಯಾಂಕ್ ಲಿ. 57 ಕೋಟಿ ರೂ., ಸೌಥ್ ಕೆನರಾ ಡಿಸಿಸಿಗೆ 44 ಕೋಟಿ ರೂ., ತುಮಕೂರು ಡಿಸಿಸಿಗೆ 44.33 ಕೋಟಿ ರೂ., ಕರ್ನಾಟಕ ಡಿಸಿಸಿ ಬ್ಯಾಂಕ್ ಗೆ 51 ಕೋಟಿ, ಶ್ರೀ ಹರಿಹಂತ್ ಕ್ರೆಡಿಟ್ ಸಹಕಾರ ಲಿಮಿಟೆಡ್ 42.22 ಕೋಟಿ ರೂ. ನೀಡಬೇಕಿದೆ. ಯೂನಿಯನ್ ಬ್ಯಾಂಕ್ ನಲ್ಲಿ 22.66 ಕೋಟಿ, ಶ್ರೀ ಬೀರವೇಶ್ವರ ಸೌಹಾರ್ದ್ ಕ್ರೆಡಿಟ್ ಸಹಕಾರ ಲಿಮಿಟೆಡ್ ನಿಂದ 6.87 ಕೋಟಿ ಸೇರಿದಂತೆ ಒಟ್ಟು 578.39 ಕೋಟಿ ಸಾಲ ಪಡೆದಿದ್ದಾರೆ.

ಹರಿಹಂತ್ ಕ್ರೆಡಿಟ್ ಸಹಕಾರ ಲಿಮಿಟೆಡ್ ನಡೆಸುತ್ತಿರುವ ಅಭಿನಂದನ್ ಪಾಟೀಲ್ ಅವರು ರಮೇಶ್ ಜಾರಕಿಹೋಳಿ ಅವರ ಬೇನಾಮಿ ಆಗಿದ್ದಾರೆ. ರಮೇಶ್ ಜಾರಕಿಹೋಳಿ ಅವರು ಇವರಿಂದಲೇ 42.24 ಕೋಟಿ ಸಾಲ ಪಡೆದಿದ್ದಾರೆ.

ಈ ಸಾಲ ಪಡೆದಿರುವುದರ ಜತೆಗೆ ಕಬ್ಬು ರೈತರಿಗೆ 50 ಕೋಟಿ ರೂ. ಬಾಕಿ, ಗುತ್ತಿಗೆದಾರರಿಗೆ 5 ಕೋಟಿ, ಸರಬರಾಜುದಾರರಿಗೆ 50 ಕೋಟಿ ಬಾಕಿ ಉಳಿಸಿಕೊಂಡಿದೆ. ಇನ್ನು ಶ್ರೀ ಕೊಂಡಿಶೆಟ್ಟಿ ಕುಮಾರ ದುಶ್ಯಂತ ಎಂಬ ಸೌಭಾಗ್ಯ ಲಕ್ಷ್ಮಿ ಶುಗರ್ ಕಂಪನಿಯ ಆರ್ಬಿಟ್ರೇಟರ್ ಅವರು ಆದಾಯ ತೆರಿಗೆಗೆ 19-5-2020 ರಂದು ಬರೆದ ಪತ್ರದಲ್ಲಿ 2011ರಿಂದ 156.64 ಕೋಟಿ ರೂ. ಆದಾಯ ತೆರಿಗೆ ಬಾಕಿ ಇದೆ ಎದು ತಿಳಿಸಿದ್ದಾರೆ. ಇದೆಲ್ಲವೂ ಸೇರಿ ರಮೇಶ್ ಜಾರಕಿಹೊಳಿ ಅವರು ಮೋಸ ಮಾಡಲು ಹೊರಟಿರುವ ಒಟ್ಟಾರೆ ಮೊತ್ತ 819 ಕೋಟಿ.
ಎಲ್ಲಾ ಡಿಸಿಸಿ ಬ್ಯಾಂಕುಗಳಿಗೆ ಮುಖ್ಯಸ್ಥವಾಗಿರುವ ಅಪೆಕ್ಸ್ ಬ್ಯಾಂಕ್ ಸಾಲ ವಸೂಲಿಗೆ 2019ರಲ್ಲಿ ನೊಟೀಸ್ ಜಾರಿ ಮಾಡಿದ್ದು, ನಿಮ್ಮ ಆಸ್ತಿಗಳನ್ನು ಯಾಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ತಿಳಿಸುತ್ತಾರೆ. ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರು ಹಾಗೂ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ಈ ನೋಟೀಸ್ ಜಾರಿ ಮಾಡುತ್ತಾರೆ.

1-12-2021ರಂದು 2019ರ ನೋಟೀಸ್ ಉಲ್ಲೇಖಿಸಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಾರೆ. ಆದರೂ ಜಿಲ್ಲಾಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ.

ರಮೇಶ್ ಜಾರಕಿಹೊಳಿ ಅವರು 2019ರಲ್ಲಿ ನೊಟೀಸ್ ಪಡೆದ ನಂತರ ನ್ಯಾಯಾಲಯ ಮೆಟ್ಟಿಲೇರಿ ಧಾರವಾಡ ಹೈಕೋರ್ಟ್ ಗೆ ಹೋಗುತ್ತಾರೆ. ಹೈಕೋರ್ಟ್ ಆಗ 6 ವಾರದೊಳಗೆ ಬ್ಯಾಂಕುಗಳಿಗೆ ನೀಡಬೇಕಾದ ಸಾಲವನ್ನು ಶೇ.50ರಷ್ಟು ಸಾಲ ಮರುಪಾವತಿಸಿ ಎಂದು 28-11-2019ರಂದು ಮಧ್ಯಂತರ ಆದೇಶ ನೀಡುತ್ತದೆ. ಆದರೂ ಅವರು ಇದುವರೆಗೂ ಆದೇಶ ಲೆಕ್ಕಿಸಿಲ್ಲ. ನಂತರ ಬೆಳ್ಳಿ ಪ್ರಕಾಶ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಾರೆ.

ನೊಟೀಸ್ ಗೆ ಯಾವುದೇ ಕ್ರಮ ಕೈಗೊಳಳದಿದ್ದಾಗ ಹರಿಹಂತ್ ಕ್ರೆಡಿಟ್ ಸಹಕಾರ ಲಿಮಿಟೆಡ್ ನವರು ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ NCLTಗೆ ಅರ್ಜಿ ಸಲ್ಲಿಸಿ ನಮ್ಮ ಸೊಸೈಟಿಗೆ 42 ಕೋಟಿ ಸಾಲ ಪಾವತಿಸಬೇಕು ಕೊಡಿಸಿ ಎಂದು ಅರ್ಜಿ ಹಾಕುತ್ತಾರೆ. ಆಗ ಈ ನ್ಯಾಯಾಧಿಕಾರಣವು ಆರ್ಬಿಟ್ರೇಟರಿಗೆ ವಹಿಸುತ್ತಾರೆ. ಈ ಐಆರ್ಸಿ ರಮೇಶ್ ದಾರಕಿಹೊಳಿ ಅವರೇ ನೇಮಿಸಿರುವ ಸಂಸ್ಥೆ. ಅವರು ಸೌಭಾಗ್ಯ ಲಕ್ಷ್ಮಿ ಶುಗರ್ ಲಿಮಿಟೆಡ್ ಯಾರಿಗಾದರೂ ಸಾಲ ಮರುಪಾವತಿಸಬೇಕಾದರೆ ನೀವು ಎನ್ ಸಿಎಲ್ ಟಿಗೆ ಅರ್ಜಿ ಹಾಕಬಹುದು ಎಂದು ಪ್ರಕಟಣೆ ಹೊರಡಿಸಿ 1 ತಿಂಗಳು ಕಾಲಾವಕಾಶ ನೀಡುತ್ತಾರೆ. ಈ ಅರ್ಜಿ ಸಲ್ಲಿಸಲು ಜಯನಗರದ ಸುಳ್ಳು ವಿಳಾಸ ನೀಡಿದ್ದಾರೆ. ಈ ವಿಳಾಸದಲ್ಲಿ ಕಚೇರಿ ಇಲ್ಲ ಶೆಡ್ ಇದೆ. ಯಾವ ಬ್ಯಾಂಕುಗಳು ಅರ್ಜಿ ಸಲ್ಲಿಸುವುದಿಲ್ಲ.

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿ ಒಟ್ಟಾರೆ ಆಸ್ತಿ ಹಾಗೂ ಯಂತ್ರೋಪಕರಣಗಳ ಮೊತ್ತ 900 ಕೋಟಿ ರೂ.ನಷ್ಟಿದೆ. ಆದರೆ ಈ ಕಂಪನಿಯ ಒಟ್ಟಾರೆ ಆಸ್ತಿಯ ಮೊತ್ತ 65 ಕೋಟಿ ಎಂದು ಮೌಲ್ಯಮಾಪನ ಮಾಡಲಾಗಿದೆ. ಆಮೂಲಕ 900 ಕೋಟಿ ಮೌಲ್ಯದ ಆಸ್ತಿಯನ್ನು 65 ಕೋಟಿ ಎಂದು ನೀಡಲಾಗಿದೆ.

ಈ ಹರಿಹಂತ್ ಬ್ಯಾಂಕಿನವರು ಪಡೆಯಬೇಕಿರುವ 42 ಕೋಟಿ ಸಾಲ ಮರುಪಾವತಿಯನ್ನುಬಿಟ್ಟು ಉಳಿದ 23 ಕೋಟಿ ಹಣವನ್ನು ಕಟ್ಟಿಸಿಕೊಂಡು ಕಂಪನಿಯ ಸಂಪೂರ್ಣ ಆಸ್ತಿಯನ್ನು ಹರಿಹಂತ್ ಬ್ಯಾಂಕಿಗೆ ಪರಭಾರೆ ಮಾಡುವ ಹುನ್ನಾರ ನಡೆದಿದೆ. ರಮೇಶ್ ಜಾರಕಿಹೊಳಿ ಅವರ ಬೇನಾಮಿ ಅಭಿನಂದನ್ ಪಾಟೀಲ್ ಆಗಿದ್ದಾರೆ. ಉಳಿದ ಬ್ಯಾಂಕಿನವರಿಂದ ಪಡೆದ ಸಾಲದ ಕಥೆ ಏನು? 2019ರಲ್ಲಿ ಸರ್ಕಾರದ ವತಿಯಿಂದ ಈ ಸಾಲವನ್ನು NPA ಎಂದು ಘೋಷಿಸುತ್ತಾರೆ. ಇದು ದಿವಾಳಿಯಾಗಿರುವ ಕಂಪನಿ ಎಂದು 2019ರಲ್ಲೇ ಘೋಷಿಸಿದ್ದರೂ ಇಂದಿಗೂ ಈ ಕಂಪನಿಯಲ್ಲಿ ಕಬ್ಬನ್ನು ಅರಿಯಲಾಗುತ್ತಿದೆ.

ಈ ಕಂಪನಿ 2021ರಲ್ಲಿ ಗಳಿಸಿರುವ ಒಟ್ಟಾರೆ ಲಾಭ 60 ಕೋಟಿಯಷ್ಟಿದೆ. ಆದರೂ ಈ ಕಂಪನಿಗೆ ನೀಡಿರುವ ಸಾಲವನ್ನು NPA ಎಂದು ಘೋಷಿಸಲಾಗಿದೆ. ಈ ಲಾಭದ ಹಣವನ್ನು ಕಂಪನಿಯ 6 ಜನ ಬೋರ್ಟ್ ಆಫ್ ಡೈರೆಕ್ಟರ್ಸ್ ಪಡೆಯುತ್ತಿದ್ದಾರೆ. ಈ ನಿರ್ದೇಶಕರನ್ನು 2018ರಲ್ಲೇ ಅನರ್ಹರು ಎಂದು ಘೋಷಿಸಿದ್ದರೂ ಅವರ ಖಾತೆಗೆ ಆರ್ ಟಿಜಿಎಸ್ ಮೂಲಕ ಹಣ ಸಂದಾಯವಾಗುತ್ತಿದೆ. ರಮೇಶ್ ಜಾರಕಿಹೊಳಿ ಅವರಿಗೆ 96 ಲಕ್ಷ, ಅವರ ಮಗನಿಗೆ 72 ಲಕ್ಷ, ಮಗಳಿಗೆ 73 ಲಕ್ಷ, ಮತ್ತೊಬ್ಬರಿಗೆ 22 ಲಕ್ಷ ಹಣ ವರ್ಗಾವಣೆ ಆಗುತ್ತಿದೆ.
ಇಷ್ಟೆಲ್ಲಾ ಅವ್ಯವಹಾರ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ರಮೇಶ್ ಜಾರಕಿಹೊಳಿ ಅವರನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ 660 ಕೋಟಿ ವಂಚನೆ ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಾಗ ಸಹಕಾರ ಮಂತ್ರಿ ಎಸ್.ಟಿ ಸೋಮಶೇಖರ್ ಅವರು ಬೆಳಗಾವಿಗೆ ಹೋಗಿ ಸಹಕಾರ ಬ್ಯಾಂಕುಗಳ ಜತೆ ಸಭೆ ಮಾಡಿ ಯಾವುದೇ ವಂಚನೆ ನಡೆದಿಲ್ಲ ಎಂದು ಹೇಳುತ್ತಾರೆ.

ಈ ಸಂದರ್ಭದಲ್ಲಿ ನಾನು ಜಾರಿ ನಿರ್ದೇಶನಾಲಯದವರಿಗೆ ಪ್ರಶ್ನೆ ಮಾಡಲು ಬಯಸುತ್ತೇನೆ. ಇದರ ಜವಾಬ್ದಾರಿ ಎಂದರೆ ಆರ್ಥಿಕ ಕಾನೂನು ಜಾರಿ ಹಾಗೂ ಆರ್ಥಿಕ ಅಪರಾಧಗಳ ವಿರುದ್ಧ ಹೋರಾಡುವ ಸಂಸ್ಥೆ. ಇದು ಕೇಂದ್ರ ಹಣಕಾಸು ಸಚಿವಾಲಯದ ಭಾಗವಾಗಿದೆ. ನಿರ್ಮಲಾ ಸೀತರಾಮನ್ ಅವರೇ ಎಲ್ಲಿದ್ದೀರಿ?

key words : kpcc-spokes.person-m.lakshman-allegation-against-ramesh-jarakiholi