‘ ಡಿಯರ್ ಪ್ರತಾಪ್ ಅಂಕಲ್ : ನಾನು ಮತ್ತು ನಿಮ್ಮ ಮಗಳು ಮುಂದೆಯೂ ಕಾವೇರಿ ನೀರು ಕುಡಿಯುವಂತಾಗಲಿ ‘ : ಕೊಡಗಿನ ಬಾಲಕಿ ಪತ್ರಕ್ಕೆ ನೆಟ್ಟಿಗರು ಫಿದಾ..

 

ಮೈಸೂರು, ಮಾ.02, 2020 ; ( www.justkannada.in news ) : ನ್ಯಾಷನಲ್ ಹೈವೇ ಯೋಜನೆ ಜಾರಿಗೆ ಕೊಡಗಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಯೋಜನೆ ಜಾರಿ ಮುಂಚೂಣಿಯಲ್ಲಿರುವ ಸಂಸದ ಪ್ರತಾಪಸಿಂಹ ಅವರಿಗೆ ಬಾಲಕಿಯೊಬ್ಬಳು ಪತ್ರ ಬರೆದಿದ್ದು, ಇದಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಕೊಡಗಿನ ಬಾಲಕಿ ಬರೆದ ಪತ್ರದ ಪೋಸ್ಟ್ ಅವನ್ನು ಸಂಸದ ಪ್ರತಾಪಸಿಂಹ ತಮ್ಮ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿದ್ದು, ಕಾರ್ಯ ಒತ್ತಡದ ಕಾರಣ ಮುಂದಿನ ಒಂದೆರೆಡು ದಿನಗಳಲ್ಲಿ ಈ ಪತ್ರಕ್ಕೆ ಉತ್ತರಿಸುವೆ ಎಂದು ಭರವಸೆ ನೀಡಿದ್ದಾರೆ.
ಈ ನಡುವೆ ಕೊಡಗಿನ ಬಾಲಕಿ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಬಾಲಕಿ ಮಾತಿಗೆ ಬೆಂಬಲ ವ್ಯಕ್ತಪಡಿಸಿದ್ದು, ಕೊಡಗಿನ ಪರಿಸರ ಸಂರಕ್ಷಣೆಯ ಕಳಕಳಿಗೆ ಜೈ ಎಂದಿದ್ದಾರೆ.

kodagu-girl-letter-mp-prathap.simha-mysore

ಸಂಸದರಿಗೆ ಬಾಲಕಿ ಬರೆದ ಪತ್ರದ ಒಟ್ಟಾರೆ ಸಾರಂಶ ಹೀಗಿದೆ…..

ಡಿಯರ್ ಪ್ರತಾಪ್ ಅಂಕಲ್ …..ಎಂದು ಪತ್ರ ಆರಂಭಿಸಿರುವ ಬಾಲಕಿ, ನೀವೆನಾ ನಮ್ಮ ಸಂಸದರು. 2005 ರ ತನಕ ಪ್ರವಾಸೋದ್ಯಮವೇ ಇರಲಿಲ್ಲ. ಆದರೂ ಆಗೆಲ್ಲಾ ನಾವು ಚೆನ್ನಾಗಿಯೇ ಇದ್ದೆವು. ಆದರೆ ಈಗ ನೀವು ಜಾರಿಗೆ ತರಲು ಉದ್ದೇಶಿಸಿರುವ ಯೋಜನೆಗಳು ನಮ್ಮನ್ನು ಸಾಯಿಸುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾಳೆ.

ನೀವು ಒಬ್ಬ ಹೆಣ್ಣು ಮಗುವಿನ ತಂದೆ, ಅದೇ ರೀತಿ ನಾನು ಒಬ್ಬ ತಂದೆಯಾ ಮಗಳು. ಅಂಕಲ್ ನೀವು ತರಲು ಉದ್ದೇಶಿಸಿರುವ ನ್ಯಾಷನಲ್ ಹೈವೇ ಯೋಜನೆಯಿಂದ ಕೊಡಗಿನಲ್ಲಿ ದೆಹಲಿಯ ಗುಪ್ತಾ ಅಂಕಲ್ ಗೆ ರೆಸಾರ್ಟ್ ಆರಂಭಿಸಲು ಸಹಾಯವಾಗುತ್ತದೆ. ಇದು ವೆಸ್ಟ್ ಬೆಮಗಾಲ್ ನ ಶ್ಯಾಮ್ ಅಂಕಲ್ ಗೆ ಉದ್ಯೋಗ ನೀಡುತ್ತದೆ. ಅದೇ ರೀತಿ ಕೊಡಗಿನಲ್ಲಿ ನೀವು ಜಾರಿಗೆ ತರಲು ಮುಂದಾಗಿರುವ ರೈಲ್ವೆ ಯೋಜನೆಯಿಂದ ಕೇರಳದ ಇಬ್ರಾಹಿಂ ಅಂಕಲ್ ಗೆ ಕೊಡಗಿನಲ್ಲಿ ರೆಸ್ಟೋರೆಂಟ್ ತೆರೆಯಲು ಅನುಕೂಲವಾಗುತ್ತದೆ. ಇದು ಕೇರಳದ ಮನೋಹರ್ ಅಂಕಲ್ ಗೆ ಉದ್ಯೋಗ ನೀಡುತ್ತದೆ. ಅದೇ ರೀತಿ ಕೊಡಗಿನ ರಸ್ತೆ ಅಗಲೀಕರಣದ ನಿಮ್ಮ ಯೋಜನೆ ಜಾರಿಯಿಂದ ಕೇರಳದ ಜೋಸೆಫ್ ಅಂಕಲ್ ಗೆ ಬೇಕರಿ ತೆರೆಯಲು ಸಹಕಾರಿಯಾಗುತ್ತದೆ. ಇದು ಯಥಾಪ್ರಕಾರ ಕೇರಳದ ಮೊಹ್ಮದ್ ಕುನ್ನಿ ಅಂಕಲ್ ಗೆ ಉದ್ಯೋಗ ನೀಡುತ್ತದೆ.

kodagu-girl-letter-mp-prathap.simha-mysore

ಈಗ ಹೇಳಿ ಕೊಡಗಿನವರಿಗೆ ನಿಮ್ಮ ಈ ರಾಷ್ಟ್ರೀಯ ಹೆದ್ದಾರಿ, ರಸ್ತೆ ಅಗಲೀಕರಣ, ರೈಲು ಯೋಜನೆಗಳಿಂದ ಏನು ಪ್ರಯೋಜನ. ಪ್ರವಾಸೋದ್ಯಮದ ನೆಪದಲ್ಲಿ ಶೇ. 18 ರಷ್ಟು ಮಂದಿಗೆ ಈ ನಿಮ್ಮ ಯೋಜನೆ ಅನುಕೂಲವಾಗಬಹುದು. ಆದರೆ ಈ ಯೋಜನೆ ಜಾರಿಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಅರಿವಿದೆಯಾ..? ನಿಮಗೆ. ಈಗಾಗಲೇ ಕೊಡಗಿನಲ್ಲಿ ಮಳೆಯ ಪ್ರಮಾಣ 220 ಇಂಚುಗಳಿಂದ 170 ಇಂಚಿಗೆ ಕುಸಿದಿದೆ. ಈ ಪರಿಣಾಮ ಕಾಡು ಸದ್ಯದಲ್ಲೇ ಕಣ್ಮರೆಯಾಗಲಿದೆ.

ಕೇವಲ 18 ರಷ್ಟು ಜನರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ , ಕೊಡಗಿನಲ್ಲಿ ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಶೇ 82 ರಷ್ಟು ಜನರ ಜೀವನ ಬಲಿ ಕೊಡದಿರಿ. ಕೊಡಗಿನ ಪರಿಸರದ ಸಮತೋಲನ ಹಾಳು ಮಾಡಬೇಡಿ. ಆ ಮೂಲಕ ನಾನು ಮತ್ತು ನಿಮ್ಮ ಮಗಳು ಮುಂದೆಯೂ ಕಾವೇರಿ ನೀರು ಕುಡಿಯುವಂತಾಗಲಿ ಎಂದು ಆ ಬಾಲಕಿ ಪತ್ರದಲ್ಲಿ ವಿನಂತಿಸಿಕೊಂಡಿದ್ದಾಳೆ.

key words : kodagu-girl-letter-mp-prathap.simha-mysore