ಮೈಸೂರು,ಅಕ್ಟೋಬರ್,09,2020(www.justkannada.in) : ಕೇರಳದ ಓಣಂ ಹಬ್ಬದ ಘಟನೆ ಕಣ್ಣ ಮುಂದಿದೆ. ಹಬ್ಬದ ಮುಂಚೆ ಹಾಗೂ ಹಬ್ಬದ ನಂತರ ಕೇರಳದಲ್ಲಿ ಕೋವಿಡ್ ಪರಿಸ್ಥಿತಿ ಗಮನಿಸಬೇಕಿದೆ. ಆ ಘಟನೆ ಆಧಾರವಾಗಿಟ್ಟುಕೊಂಡು ದಸರಾ ಆಚರಿಸಬೇಕಿದೆ ಎಂದು ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್ ಹೇಳಿದರು.
ಚಾಮುಂಡಿಬೆಟ್ಟ ಹಾಗೂ ಅರಮನೆ ಸ್ಥಳ ಪರಿಶೀಲನೆಯ ಬಳಿಕ ಡಾ.ಸುದರ್ಶನ್ ಮಾತನಾಡಿ, ನಾನು ಮೈಸೂರಿನವನಾಗಿದ್ದು, ಈ ಸ್ಥಳಗಳೆಲ್ಲ ನನಗೆ ಗೊತ್ತಿದೆ. ಆದರೂ, ಅಧಿಕೃತವಾಗಿ ಇಂದು ಬೆಟ್ಟ ಹಾಗೂ ಅರಮೆನೆಗೆ ಭೇಟಿ ನೀಡಿದ್ದು, ಇಲ್ಲಿಯ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹ ಮಾಡಿಕೊಂಡಿದ್ದೇವೆ. ಹೇಗೆ ಕಾರ್ಯಕ್ರಮ ರೂಪಿಸಬೇಕು ಹಾಗೂ ಎಷ್ಟು ಜನ ಸೇರಬೇಕು ಎನ್ನುವುದನ್ನ ವರದಿ ನೀಡಿತ್ತೇವೆ ಎಂದರು.
ನಾಳೆಯೇ ಸರ್ಕಾರಕ್ಕೆ ಹಾಗೂ ಆರೋಗ್ಯ ಇಲಾಖೆಗೆ ವರದಿ ನೀಡುತ್ತೇವೆ. ಕೋವಿಡ್ ಹಿನ್ನೆಲೆಯಲ್ಲಿ ಹೇಗೆ ದಸರಾ ಮಾಡಬೇಕು ಎಂಬುದು ಪ್ರಶ್ನೆಯಾಗಿದೆ. ಎಷ್ಟು ಜನ ಸೇರಬೇಕು ಎಂಬುದನ್ನ ನಾನು ಒಬ್ಬನೇ ತೀರ್ಮಾನ ಮಾಡುವುದಕ್ಕೆ ಆಗುವುದಿಲ್ಲ. ಸರ್ಕಾರದ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಚಾಮುಂಡಿಬೆಟ್ಟ, ಅರಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆ ಸಂಬಂಧಿಸಿದಂತೆ ಡಾ.ಸುದರ್ಶನ್ ನೇತೃತ್ವದ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯ ತಂಡವು ಅಕ್ಟೋಬರ್ 17 ರಂದು ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ಕುರಿತು ಮಾಹಿತಿ ಪಡೆದುಕೊಂಡಿತು. ಚಾಮುಂಡಿಬೆಟ್ಟ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರಿಂದಲೂ ಮಾಹಿತಿ ಸಂಗ್ರಹಿಸಿತು.
ಬಳಿಕ ಸಮಿತಿಯ ತಂಡದ ಸದಸ್ಯರು ಅರಮನೆಗೆ ಭೇಟಿ ನೀಡಿ, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಡಾ.ಟಿ.ಎಸ್.ಸುಬ್ರಹ್ಮಣ್ಯ ಅವರಿಂದ ಮುಂಬರುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನ ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
key words : Kerala’s-Onam-nightmare-Dr.Sudarshan’s-statement-Mysore






