ರಾಜ್ಯಕ್ಕೆ ತಾಪ ಶಾಪ: ತಾಪಮಾನ ಕರಗದಿದ್ದಲ್ಲಿ ಕಾದಿದೆ ಗಂಡಾಂತರ

ಬೆಂಗಳೂರು:ಆ-14: ಹಿಂದೆಂದೂ ಕಂಡರಿಯದಂತಹ ರೀತಿಯಲ್ಲಿ ಜನಜೀವನ ವನ್ನು ಹಿಂಡಿಹಾಕಿರುವ ಭೀಕರ ಮಳೆ ಹಾಗೂ ನೆರೆ ಪರಿಸರ ರಾಜ್ಯಕ್ಕೆ ನೀಡಿರುವ ಎಚ್ಚರಿಕೆ ಗಂಟೆಯೇ? ಹೌದೆನ್ನುವುದು ತಜ್ಞರ ವಾದ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತಾಪಮಾನ ಪ್ರಮಾಣವನ್ನು ತಗ್ಗಿಸದಿದ್ದಲ್ಲಿ ಭವಿಷ್ಯದಲ್ಲಿ ಇನ್ನಷ್ಟು ಅಪಾಯ ನಿಶ್ಚಿತ ಎಂಬ ಮುನ್ಸೂಚನೆ ಇದಾಗಿದೆ. ತಾಪಮಾನ ಇಳಿಕೆ ಸಂಬಂಧದ ವರದಿಗಳನ್ನು ಅನುಷ್ಠಾನ ಮಾಡದೆ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ನೆರೆ ಜತೆಗೆ ಭೀಕರ ಬರಗಾಲ ಎದುರಾಗುವ ಆತಂಕ ಸೃಷ್ಟಿಯಾಗಿದೆ.

ಜಾಗತಿಕ ತಾಪಮಾನದ ಹೆಚ್ಚಳದಿಂದಾಗುತ್ತಿರುವ ಸಮಸ್ಯೆ ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2011ರಲ್ಲಿಯೇ ತಜ್ಞರಿಂದ ವರದಿ ಸಿದ್ಧಪಡಿಸಿತ್ತು. ಆದರೆ ಆ ವರದಿಯ ಅನುಷ್ಠಾನ ಮಾತ್ರ ಸರಿಯಾದ ನಿಟ್ಟಿನಲ್ಲಿ ಆಗುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯನಾಶ ಮಾಡುತ್ತ, ಅದಕ್ಕೆ ಸಮಾನವಾಗಿ ಮರಗಿಡಗಳನ್ನು ನೆಡದೇ ಇರುವುದು, ಅಂತರ್ಜಲ ಬಳಕೆ ನಿಯಂತ್ರಣಕ್ಕೆ ಸಿಗದಂತಾಗಿರುವುದು, ವಾಹನಗಳ ಸಂಖ್ಯೆ ಹೆಚ್ಚಳದಿಂದಾಗಿ ತಾಪಮಾನ ಹೆಚ್ಚುತ್ತಿದೆ.

ಪರಿಣಾಮಗಳೇನು: ತಾಪಮಾನ ಹೆಚ್ಚಳದಿಂದಾಗಿ ಮಳೆ ಇಲ್ಲದ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಮಳೆಯಾಗುತ್ತದೆ. ಪ್ರವಾಹ ಸಹ ಹೆಚ್ಚಾಗುತ್ತದೆ. ಬರ ಹೆಚ್ಚಾದರೆ, ಘಟ್ಟ ಪ್ರದೇಶದಲ್ಲಿ ಮಳೆ ಹೆಚ್ಚಳವಾಗಿ ಪ್ರವಾಹದ ಪರಿಸ್ಥಿತಿಯೂ ಹೆಚ್ಚಾಗುವ ಸಾಧ್ಯತೆಯಿದೆ.

ಹೆಚ್ಚುತ್ತಿದೆ ಮಳೆ: ರಾಜ್ಯದಲ್ಲಿ 2010ರಿಂದಲೂ ಮಳೆ ಹೆಚ್ಚಳವಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ ಮುಂದಿನ 20 ವರ್ಷಗಳಲ್ಲಿ ಕೃಷ್ಣಾ ಕಣಿವೆಯಲ್ಲಿ 10 ಹಾಗೂ ಕಾವೇರಿ ಕಣಿವೆಯಲ್ಲಿ 28 ಬಾರಿ ಪ್ರವಾಹ ಬರುವ ಸಾಧ್ಯತೆ ಇದೆ. ಆದರೆ ಉಳಿದ ಕಡೆ ಬರ ಶೇ. 10 ರಿಂದ 80ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ.

ನೀರು ಬಳಕೆಗೆ ಆದ್ಯತೆ: ರಾಜ್ಯದಲ್ಲಿ ನೀರಾವರಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡು ನಾಲೆಗಳು ಇದ್ದಿದ್ದರೆ ಪ್ರವಾಹದ ಸಂದರ್ಭದಲ್ಲಿ 70 ರಿಂದ 80 ಟಿಎಂಸಿ ನೀರನ್ನು ಕೆರೆಗಳಿಗೆ ತುಂಬಿಸಿಕೊಳ್ಳಲು ಅವಕಾಶ ಇತ್ತು. ಆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ನಡೆಸಬೇಕಾಗಿದೆ. ನಾಲೆಗಳು, ರಾಜ್ಯದಲ್ಲಿರುವ ಸುಮಾರು 36 ಸಾವಿರ ಕೆರೆಗಳು, ಅಣೆಕಟ್ಟೆಗಳು ಹೂಳು ತುಂಬಿಕೊಂಡಿವೆ. ಹೂಳು ತೆಗೆಸುವ ಕಾರ್ಯಕ್ಕೂ ಸರ್ಕಾರ ಮುಂದಾಗಬೇಕಾಗಿದೆ. ಅಂತಾರಾಜ್ಯ ವಿವಾದಗಳಿಂದ ನದಿಗಳ ಜೋಡಣೆ ಸಾಧ್ಯವಾಗುವುದಿಲ್ಲ.

ಸರ್ಕಾರ ತಪು್ಪಗಳಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಹೂಳು ತೆಗೆಸಿ ಹೆಚ್ಚಿನ ನೀರು ಹಿಡಿಯುವಂತೆ ಮಾಡುವ ಹಾಗೂ ನದಿಪಾತ್ರದಲ್ಲಿ ಆಗಿರುವ ಒತ್ತುವರಿಯನ್ನು ತೆರವು ಮಾಡಿಸಬೇಕಿದೆ. ಇಲ್ಲದಿದ್ದರೆ ಪದೇಪದೆ ಇಂತಹ ಪರಿಸ್ಥಿತಿ ಎದುರಾಗುತ್ತಲೇ ಇರುತ್ತದೆ.

| ಡಾ. ಎಚ್.ಸಿ. ಶರಚ್ಚಂದ್ರ ಪರಿಸರ ತಜ್ಞ

ತಜ್ಞರ ಸಲಹೆಗಳೇನು?

* ವಾಹನಗಳಿಂದ ಕಾರ್ಬನ್ ಮಾನಾಜಕ್ಸೆ ೖಡ್ ಹೆಚ್ಚಳವಾಗುವುದರಿಂದ, ವಾಹನಗಳ ಸಂಖ್ಯೆಗೆ ನಿಯಂತ್ರಣ ಹಾಕಬೇಕು.
* ವಿದ್ಯುತ್ ಉತ್ಪಾದನೆ, ಕಲ್ಲಿದ್ದಲು ಬಳಕೆ ಕಡಿಮೆ ಮಾಡಬೇಕು. ಹಸಿರು ಇಂಧನಕ್ಕೆ ಆದ್ಯತೆ ನೀಡಬೇಕು.
* ಭತ್ತ ಬೆಳೆಯುವಲ್ಲಿ ನೀರು ನಿಲ್ಲಿಸುವುದನ್ನು ಕಡಿಮೆ ಮಾಡಿ ಮಡ್ಗಾಸ್ಕರ್, ಶ್ರೀ ಪದ್ಧತಿಗಳನ್ನು ಹೆಚ್ಚಿಸಬೇಕು. ಒಣ ಬೇಸಾಯದ ರೀತಿಯಲ್ಲಿ ನೀರು ಬಳಕೆ ಕಡಿಮೆ ಮಾಡಬೇಕು
* ವಾಹನಗಳಿಗೆ ಹಸಿರು ಇಂಧನ ಬಳಕೆ ಹೆಚ್ಚು ಮಾಡಬೇಕು
* ಎಸಿಗಳ ಬಳಕೆಯನ್ನು ತಗ್ಗಿಸಬೇಕು
* ಅಂತರ್ಜಲ ಮರುಪೂರಣದ ವ್ಯವಸ್ಥೆ ಕಡ್ಡಾಯ ಮಾಡಬೇಕು. ಅಂತರ್ಜಲ ಬಳಕೆಗೆ ನಿಯಂತ್ರಣ ಹಾಕಬೇಕು
* ಬೋರ್​ವೆಲ್​ಗಳಿಗೂ ಸೋಲಾರ್ ಪಂಪ್​ಸೆಟ್ ಬಳಕೆ ಮಾಡಬೇಕು
* ಹನಿ ನೀರಾವರಿ ಪದ್ಧತಿಯನ್ನು ಹೆಚ್ಚು ಮಾಡಬೇಕು.
* ಎಮ್ಮೆಗಳ ಸಗಣಿಯಲ್ಲಿ ಮಿಥೇನ್ ಇರುವುದರಿಂದ, ಎಮ್ಮೆ ಸಾಕಾಣಿಕೆ ಕಡಿಮೆ ಮಾಡಬೇಕು
* ಅರಣ್ಯ ಕಡಿಮೆಯಾಗದಂತೆ ಗಮನ ಹರಿಸಬೇಕು
* ಸಮುದ್ರದ ಮೇಲೆ ಒತ್ತಡ ತರುವಂತಹ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕು.
* ನದಿಗಳ ಒತ್ತುವರಿಯನ್ನು ತೆರವು ಮಾಡುವ ಕಾರ್ಯ ಮಾಡಬೇಕು.
* ನೀರನ್ನು ಒಂದು ಸಂಪತ್ತಿನ ರೀತಿಯಲ್ಲಿ ಪರಿಗಣಿಸಬೇಕಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಮನವರಿಕೆ ಮಾಡಿಕೊಟ್ಟು ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ಕೆರೆಗಳನ್ನು ತುಂಬಿಸುವ ಕಡೆ ಗಮನ ಹರಿಸಬೇಕು.

| ಡಾ. ಶ್ರೀನಿವಾಸರೆಡ್ಡಿ ನಿರ್ದೇಶಕರು, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

20 ವರ್ಷದ ದಾಖಲೆ:

ಮೊದಲು ಒಂದು ಶತಮಾನದಲ್ಲಿ 1 ಡಿಗ್ರಿ ಹೆಚ್ಚಳವಾಗಿದ್ದ ತಾಪಮಾನ, 1988ರಿಂದೀಚೆಗೆ ಇಪ್ಪತ್ತು ವರ್ಷಗಳಲ್ಲೇ 1 ಡಿಗ್ರಿ ಹೆಚ್ಚಳವಾಗಿದೆ. 2030ರ ವೇಳೆಗೆ 4 ಡಿಗ್ರಿ ಹೆಚ್ಚಳವಾಗುವ ನಿರೀಕ್ಷೆ ಇದ್ದು, ಅದನ್ನು 2 ಡಿಗ್ರಿಗೆ ಸೀಮಿತ ಮಾಡುವ ಅಗತ್ಯವಿದೆ ಎಂಬುದನ್ನು ತಜ್ಞರು ಮನಗಂಡಿದ್ದರು. ಆದ್ದರಿಂದಲೇ ಒಂದಷ್ಟು ಸಲಹೆಯನ್ನು ನೀಡಿದ್ದರು. ರಾಜ್ಯದಲ್ಲಿ 2030ಕ್ಕೆ ಶೇ. 38 ಅರಣ್ಯ ನಾಶವಾಗುವ ಸಾಧ್ಯತೆಗಳಿವೆ. ಪ್ರತಿ ನಿತ್ಯ ನಗರ ಪ್ರದೇಶದಲ್ಲಿ 70 ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದೆ. 1036 ಮಿಲಿಯನ್ ಟನ್ ನೀರು ಮಲಿನವಾಗುತ್ತಿದೆ.

ಜಾಗತಿಕ ತಾಪಮಾನವನ್ನು ತಗ್ಗಿಸಲು ಸರ್ಕಾರ ನಡೆಸಿರುವ ಪ್ರಯತ್ನ ಇನ್ನಷ್ಟು ಹೆಚ್ಚಿಸಬೇಕು. ಇಲ್ಲದಿದ್ದರೆ ಕೃಷಿ ಉತ್ಪನ್ನಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.

| ಡಾ. ಎಂ.ಬಿ. ರಾಜೇಗೌಡ ಕೃಷಿ ಹವಾಮಾನ ತಜ್ಞ
ಕೃಪೆ:ವಿಜಯವಾಣಿ

ರಾಜ್ಯಕ್ಕೆ ತಾಪ ಶಾಪ: ತಾಪಮಾನ ಕರಗದಿದ್ದಲ್ಲಿ ಕಾದಿದೆ ಗಂಡಾಂತರ
karnataka-floods-temperature-natural-disaster-global-warming-environment