ಬಸಿರಿನಲ್ಲಿ ಉಸಿರು ಚೆಲ್ಲಿದ ಹಸಿರು ಚೆಲುವೆ, ಇದಕ್ಯಾರು ಹೊಣೆ..?

 

ಚಾಮರಾಜನಗರ:  ಸುಮಾರು ಆರು ತಿಂಗಳ ಹಿಂದೆ ಹಿರಿಯ ಸ್ನೇಹಿತರಾದ ಗೋವಿಂದರಾಜು, ನಾಗೇಶ್ ಅವರೊಂದಿಗೆ ನನ್ನೂರು ಸಮೀಪದ ಬಿ.ಆರ್.ಹಿಲ್ಸ್ ತಪ್ಪಲಿನಲ್ಲಿರುವ ಆಮೆಕೆರೆ ಜಲಾಶಯದ ಕಡೆ ತಿರುಗಾಟಕ್ಕೆ ಹೋಗಿದ್ವಿ. ಗಂಟೆಗಟ್ಟಲೆ ಅಲ್ಲಿ ಹರಟಿದ ನಂತರ ವಾಪಸ್ಸಾಗಿದ್ವಿ.

ಹೀಗೆ ಹಿಂದಿರುಗಿ ಬರುವಾಗ ಜೊತೆಯಲ್ಲಿದ್ದ ನಾಗೇಶ್, ‘ಸಾ ಸಾ ಕಾರ್ ನಿಲ್ಸಿ’ ಎಂದು ಕೂಗಿಕೊಂಡ್ರು. ತಕ್ಷಣವೇ ಕಾರು ನಿಲ್ಲಿಸಿದ್ದೆ. ಯಾಕೆ ಏನಾಯ್ತು ಅಂತ ಕೇಳ್ದಾಗ, ಅಲ್ನೋಡಿ ಸಾರ್ ಮುಂದ್ಗಡೆ, ಹಸಿರು ಗೊದ್ದ(ಓತಿಕ್ಯಾತ) ಹೆಂಗದೆ, ಬಾಳ ಡಿಫರೆಂಟಾಗಿದೆ ಅಲ್ವ? ನಾನು ಇಂತ ಗೊದ್ದಾನ ಇದುವರೆಗೆ ನೋಡೇ ಇಲ್ಲ ಎಂದು ಉದ್ಗರಿಸಿದ್ರು.

ಚಿಕ್ಕಂದಿನಿಂದಲೂ ಕಾಡಿನೊಂದಿಗೆ ನಂಟು ಬೆಸೆದುಕೊಂಡೇ ಬೆಳೆದಿದ್ದ ನಾನು, ಅದು ಗೊದ್ದ ಅಲ್ಲ ಸರ್, ಗೋಸುಂಬೆ(ಊಸರವಳ್ಳಿ). ಗೊದ್ದ ತುಂಬಾ ವೇಗವಾಗಿ ಓಡುತ್ತೆ. ಆದ್ರೆ ಇದು ತುಂಬಾ ನಿಧಾನ. ಇದರ ಕಾಲುಗಳು ತುಂಬಾ ನೀಳವಾಗಿರುತ್ತೆ. ನಡೆದಾಡುವಾಗ ಬಳುಕಾಡುತ್ತೆ. ಡಾಂಬರು ರಸ್ತೆಯಲ್ಲಂತೂ ಇದರ ನಡೆದಾಟ ನೋಡೋದೇ ಒಂದು ಚೆಂದ. ಗರಿಕೆ ಇರುವ ನೆಲ ಸಿಕ್ಕರೆ ತುಂಬಾ ಬೇಗ ಓಡಿಬಿಡುತ್ತೆ. ಇದು ಅವಸಾನದ ಅಂಚಿನಲ್ಲಿರುವ ಸರೀಸೃಪ.

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಒಂದು ಮೂಢನಂಬಿಕೆ ಇದೆ. ಅದು ನಗರ ಪ್ರದೇಶವನ್ನೂ ವ್ಯಾಪಿಸಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಪ್ರತಿ ಅಮಾವಾಸ್ಯೆ ಬಂದಾಗ ಗೋಸುಂಬೆ ಕೊಂದು ಅದರ ಹನಿ ಎಣ್ಣೆಯನ್ನು ಇಡ್ಲಿ, ದೋಸೆ ಮಾಡುವ ಹಿಟ್ಟಿನೊಂದಿಗೆ ಬೆರೆಸಿದ್ರೆ ವ್ಯಾಪಾರ ಚೆನ್ನಾಗಿ ಆಗುತ್ತೆ ಅನ್ನೋದು ಹೋಟೆಲ್ ಮಾಲೀಕರ ಕೆಟ್ಟ ಮನಸ್ಥಿತಿ. ಅದು ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ಕೆಲವರಿಗೆ ವಾಸಿಯಾಗದ ಹೊಟ್ಟೆನೋವು ಬಂತೆಂದ್ರೆ ‘ಯಾರೋ ಮದ್ದಿಕ್ಕಿದ್ದಾರೆ’ ಅಂತ ಚಿಕ್ಕವರಿದ್ದಾಗ ಮನೆಯ ಹಿರಿಯರು ಹೇಳ್ತಾ ಇದ್ರು. ಆ ಕಾರಣಕ್ಕೆ ಗೋಸುಂಬೆಗಳನ್ನು ಅತಿಯಾಗಿ ಕೊಲ್ಲುತ್ತಿದ್ದರಿಂದ ಅದರ ಸಂತತಿ ಕಡಿಮೆ ಆಗಿರಬಹುದೇನೊ ಎಂದೂ,
ಊಸರವಳ್ಳಿ ನಾಲಿಗೆ ತುಂಬಾ ಉದ್ದ ಇರುತ್ತೆ. ಹುಳ, ಚಿಟ್ಟೆಗಳನ್ನು ದೂರದಲ್ಲೇ ಕುಳಿತು ಅಲ್ಲಿಂದಲೇ ನಾಲಿಗೆ ಚಾಚಿ ಹಿಡಿಯುತ್ತೆ ಅಂತಲೂ, ಆಗಾಗ್ಗೆ ತನ್ನ ಬಣ್ಣವನ್ನು ಬದಲಾಯಿಸುತ್ತ ಇರುತ್ತೆ ಅಂತಲೂ ಹೇಳಿ ಅವರ ಮುಂದೆ ಗೋಸುಂಬೆ ಬಗ್ಗೆ ಇವನಿಗೆ ವಿಪರೀತ ನಾಲೆಡ್ಜ್ ಇದೆ ಎನ್ನುವಂತೆ ಕೊಚ್ಚಿಕೊಂಡಿದ್ದೆ.

ಕಾರಿನಿಂದ ಇಳಿದವನೇ ವಿವಿಧ ಭಂಗಿಗಳಲ್ಲಿ ಆ ಹಸಿರು ಬಣ್ಣದ ಹೊಳೆವ ಊಸರವಳ್ಳಿ ಚಿತ್ರವನ್ನು ಕ್ಲಿಕ್ಕಿಸಿದ್ದೆ. ಅದನ್ನು ಈವರೆಗೂ ನನ್ನಲ್ಲೇ ಇಟ್ಕೊಂಡಿದ್ದೆ. ಅಂದಿನಿಂದ ಆಗಾಗ್ಗೆ ಆ ಭಾಗದಲ್ಲಿ ಓಡಾಟ ಮಾಡುವಾಗ ಜೊತೆಯಲ್ಲಿದ್ದ ಸ್ನೇಹಿತರಿಗೆ ‘ಈ ಫೋಟೋ ಇಲ್ಲೇ ತೆಗೆದಿದ್ದು’ ಎಂದು ಗೋಸುಂಬೆಯ ಚಿತ್ರ ತೋರಿಸುತ್ತಿದ್ದೆ. ಸಾಲದೆಂಬಂತೆ ಅದೇ ಸ್ಥಳದಲ್ಲಿ ಐದರಿಂದ ಆರು ಬಾರಿ ಗೋಸುಂಬೆಯನ್ನು ನೋಡಿದ್ದೆ. ಜೊತೆಯಲ್ಲಿ ಇರುತ್ತಿದ್ದ ಸ್ನೇಹಿತರಿಗೂ ‘ನೋಡಿಲ್ಲಿ ಇದು ನನ್ ಫ್ರೆಂಡ್. ನಾನು ಬರೋ ದಿನವೆಲ್ಲ ಅದು ನಂಗೆ ಕಾಣಿಸಿಕೊಳ್ಳುತ್ತೆ’ ಎನ್ನುತ್ತಿದ್ದೆ.
ಆದ್ರೆ ಇಂದು ಬೆಳಿಗ್ಗೆ ಆ ಕಡೆ ವಾಯುವಿಹಾರಕ್ಕೆ ಹೋಗಿದ್ದ ಸ್ನೇಹಿತ ಮುತ್ತುರಾಜ್ ಫೋಟೋವೊಂದನ್ನು ಕಳಿಸಿ, ‘ನಿನ್ ಸ್ನೇಹಿತ ಹೋಗ್ಬಿಟ್ಟ ಮಗ’ ಎಂದ! ಗಾಬರಿಯಿಂದ ಫೋಟೋ ಡೌನ್‌ಲೋಡ್ ಮಾಡಿದರೆ ಅದು ನನ್ನ ನೆಚ್ಚಿನ ಗೋಸುಂಬೆ@ಊಸರವಳ್ಳಿ ಚಿತ್ರ.

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಊಸರವಳ್ಳಿ ರಾತ್ರಿಯಲ್ಲಿ ಯಾವುದೋ ವಾಹನದ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾಗಿತ್ತು. ರುಂಡ ಮುಂಡಗಳು ಬೇರ್ಪಡೆಯಾಗಿದ್ದವು. ಬಹುಶಃ ಆ ಹಸಿರು ಚೆಲುವೆ ತುಂಬು ಬಸುರಿ ಇದ್ದಿರಬೇಕು. ಹೊಟ್ಟೆಯೊಳಗಿಂದ ನಾಲ್ಕೈದು ಮೊಟ್ಟೆ ಗಳು ಹೊರಬಂದಿದ್ದವು. ಅದನ್ನ ನೋಡಿ ಬೆಳಿಗ್ಗೆಯೇ ಬೇಸರವಾಯ್ತು.

ಮೊದಲೇ ಅಳಿವಿನಂಚಿನಲ್ಲಿರುವ ಈ ಸರೀಸೃಪವನ್ನು ಎದುರು ಕಂಡರೆ ರಕ್ಷಣೆ ಮಾಡ್ಬೇಕು, ಆದ್ರೆ ನಿರಾಯಾಸವಾಗಿ ವಾಹನ ಹತ್ತಿಸಿದ್ದಾರಲ್ಲ ಎಂದು ಬೇಸರವಾಯಿತು. ಆರು ತಿಂಗಳ ಹಿಂದೆ ನಾಚುತ್ತಲೇ ಗಿಡದ ಮರೆಯಲ್ಲಿ ಅವಿತು ಕ್ಯಾಮೆರಾಗೆ ಪೋಸು ಕೊಟ್ಟಿದ್ದ ಹಸಿರು ಚೆಲುವೆ ಇನ್ನಿಲ್ಲವೆಂಬುದೇ ಬೇಸರದ ಸಂಗತಿ.

ಕೃಪೆ : ಗೌಡಹಳ್ಳಿ ಮಹೇಶ್ (ಫೇಸ್ ಬುಕ್ ಪುಟ)

key words : Karnataka-chamaraja Nagara-chameleons-forest-green