ಸೆಸ್ಕ್‌ ಕಚೇರಿಯಲ್ಲಿ ಸಂಭ್ರಮದ ‘ಕನ್ನಡ ಉತ್ಸವ’: ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿ

ಮೈಸೂರು, ಜನವರಿ,29, 2026 (www.justkannada.in): ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ) ಪ್ರಧಾನ ಕಚೇರಿಯಲ್ಲಿ ನಡೆದ ಕನ್ನಡ ಉತ್ಸವ-2025 ಕಾರ್ಯಕ್ರಮ ನಿಗಮ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪ್ರತಿಭೆ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ವಿಜಯನಗರ ಎರಡನೇ ಹಂತದಲ್ಲಿರುವ ನಿಗಮ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಭ್ರಮದಿಂದ ಭಾಗವಹಿಸುವ ಮೂಲಕ ಹಾಡುಗಾರಿಕೆ, ನೃತ್ಯ, ಕಿರು ನಾಟಕ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಆ ಮೂಲಕ ದಿನನಿತ್ಯದ ಕೆಲಸದ ಒತ್ತಡದ ನಡುವೆ ಕೆಲಕಾಲ ಸಂಭ್ರಮಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ನಿಗಮ ಕಚೇರಿಯಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಒಲೆ ರಹಿತವಾಗಿ ಹಲವು ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಕನ್ನಡ ಉತ್ಸವದ ಪ್ರಯುಕ್ತ ನಡೆಸಿದ ರಂಗೋಲಿ ಸ್ಪರ್ಧೆ, ಕೇರಂ, ರಸಪ್ರಶ್ನೆ, ಮೊಬೈಲ್‌ ಫೋಟೋಗ್ರಫಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕನ್ನಡ ಉತ್ಸವದ ಅಂಗವಾಗಿ ನಡೆದ ಕಾರ್ಯಕ್ರಮಗಳು ಅರ್ಥಪೂರ್ಣವಾಗಿತ್ತು. ಕನ್ನಡವನ್ನು ಕೇವಲ ನವೆಂಬರ್ ತಿಂಗಳಿಗೆ ಮೀಸಲಿಡದೆ, ಪ್ರತಿನಿತ್ಯ  ಆಚರಿಸುತ್ತೇವೆ ಎಂಬುದನ್ನು ಈ ಮೂಲಕ ತೋರಿಸಲಾಗಿದೆ. ಕನ್ನಡ ನಮ್ಮ ಮಾತೃಭಾಷೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಕೆಲಸದ ಒತ್ತಡದ ನಡುವೆ ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸುವುದನ್ನೇ ಮರೆತಿದ್ದೇವೆ ಎಂದ ಅವರು, ಈ ಎಲ್ಲ ಚಟುವಟಿಕೆಗಳ ಜೊತೆಗೆ ಕಚೇರಿ ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ, ನಿಗಮದ ಪ್ರಗತಿಗೆ ಎಲ್ಲರೂ ಸಹಕರಿಸಬೇಕಿದೆ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಸೆಸ್ಕ್‌ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಮುಖ್ಯ ಪ್ರಧಾನ ವ್ಯವಸ್ಥಾಪಕರು(ತಾಂತ್ರಿಕ) ಶರಣಮ್ಮ ಎಸ್‌. ಜಂಗಿನ, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಮುಖ್ಯ ಲೆಕ್ಕ ಪರಿಶೋಧಕಿ ನಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕರಾದ ಡಾ.ಬಿ.ಆರ್.‌ ರೂಪಾ, ಎಲ್‌. ಲೋಕೇಶ್‌, ಎಚ್‌.ಆರ್.‌ ದಿನೇಶ್‌, ಟಿ. ರಾಮಸ್ವಾಮಿ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Key words: Kannada Festival, CESC office, Officers, staff