ಏ. 24ರಂದು ಗ್ರಾಹಕ ಸೇವೆಯಲ್ಲಿ ಕನ್ನಡ ಅಭಿಯಾನಕ್ಕೆ ಚಾಲನೆ…

ಬೆಂಗಳೂರು,ಏಪ್ರಿಲ್,22,2021(www.justkannada.in):  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡ ಕಾಯಕ ವರ್ಷಾಚರಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 24ರಿಂದ 26ವರೆಗೆ 3 ದಿನಗಳು ಕನ್ನಡ ಕಂಠೀರವ ಡಾ.ರಾಜಕುಮಾರ ಅವರ ಹುಟ್ಟು ಹಬ್ಬದ ಪ್ರಯುಕ್ತ “ಕನ್ನಡ ಅಭಿಮಾನಿ ದಿನ’’ “ಗ್ರಾಹಕ ಸೇವೆಯಲ್ಲಿ ಕನ್ನಡ ಬಳಕೆ’’ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಿರುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ತಿಳಿಸಿದ್ದಾರೆ.jkjk

ಕನ್ನಡಿಗರೆಲ್ಲರೂ ತಮ್ಮ ತಮ್ಮ ಅಧಿಕೃತ ಜಾಲತಾಣಗಳಾದ ಟ್ವೀಟರ್, ಫೇಸ್ ಬುಕ್ ಖಾತೆಗಳಲ್ಲಿ ಪ್ರಾಧಿಕಾರದ ಹ್ಯಾಷ್ ಟ್ಯಾಗ್ ಗಳಾದ #ಕನ್ನಡಕಾಯಕವರ್ಷ2020-21 #ಕನ್ನಡಅಭಿಮಾನಿದಿನ #ಗ್ರಾಹಕಸೇವೆಯಲ್ಲಿ_ಕನ್ನಡ ಎಂಬುದಾಗಿ ಮೊದಲಿಗೆ ಹಾಕಿ ನಂತರ ನಿಮ್ಮೆದೇ ನೂತನ ಯೋಚನೆಗಳೊಂದಿಗೆ ಕನ್ನಡ ಅಭಿಮಾನಿ ದಿನದ ಪ್ರಯುಕ್ತ  ಗ್ರಾಹಕ ಸೇವೆಯಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವಂತೆ ಹಾಗೂ ಈ ಕುರಿತು ಇತರರ ಪೋಸ್ಟ್‍ ಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ನೀಡಲು ಒತ್ತಾಯಿಸುವಂತೆ ಮನವಿ ಮಾಡಿದ್ದಾರೆ.

ಡಾ.ರಾಜಕುಮಾರ್ ಅವರು ಕನ್ನಡಿಗರನ್ನು ‘ಅಭಿಮಾನಿ ದೇವರುಗಳು’ ಎಂಬ ಪರಿಭಾಷೆಯಲ್ಲಿ ಗೌರವಿಸಿದವರು. ಗೋಕಾಕ್ ಚಳುವಳಿಯ ಮುನ್ನೆಲೆಯಲ್ಲಿ ಕನ್ನಡಕ್ಕಾಗಿ ಹೋರಾಡಿದವರು. ಅಂತಹ ಮೇರು ನಟರ ಜನ್ಮದಿನದ ಪ್ರಯುಕ್ತ ಪ್ರಾಧಿಕಾರವು ಕನ್ನಡ ಕಟ್ಟುವ ಕೆಲಸವನ್ನು ಹಮ್ಮಿಕೊಂಡಿದ್ದು, ಗ್ರಾಹಕರಿಗೆ ಸ್ಥಳಿಯ ಭಾಷೆಯಲ್ಲಿ ಎಲ್ಲಾ ಸೇವೆಗಳು ದೊರೆಯಬೇಕೆಂಬ ಮಹಾತ್ಮಕಾಂಕ್ಷೆ ಪ್ರಾಧಿಕಾರದ್ದಾಗಿದೆ. ಜೊತೆಗೆ ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವ ಹಕ್ಕಿನ ಕುರಿತು ಕನ್ನಡಿಗರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಗ್ರಾಹಕ ಸೇವೆಯಲ್ಲಿ ಕನ್ನಡ ಅಭಿಯಾನವನ್ನು ಕೇವಲ ಭಾಷೆಯ ಬಳಕೆ ದೃಷ್ಟಿಯಿಂದ ಮಾತ್ರ ನೋಡದೆ, ಎಲ್ಲೆಡೆ ಕನ್ನಡದ ಬಳಕೆ ಎಂದರೆ ‘ಕನ್ನಡಿಗರಿಗೆ ಹೊಸ ಉದ್ಯೋಗಗಳ ಸೃಷ್ಠಿ’ಯ ಹಿನ್ನೆಲೆಯಲ್ಲೂ ಕೂಡ ಗಮನಿಸಬೇಕಿದೆ.Kannada campaign-kannada kayaka varsha-Kannada Development Authority-TS Nagabarana

ಕೋವಿಡ್ ಸಾಂಕ್ರಾಮಿಕ ರೋಗವು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸದರಿ ಅಭಿಯಾನವನ್ನು ಈ ಹಿಂದಿನ ಅಭಿಯಾನಗಳಂತೆ ಖುದ್ದು ಭೇಟಿಯ ಹಕ್ಕೊತ್ತಾಯವನ್ನು ಮಾಡದೆ, ಜಾಲಸಂಪರ್ಕದ ಮೂಲಕ ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ಅಭಿಯಾನದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರುಗಳು, ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳು, ಮತಕ್ಷೇತ್ರ ಕನ್ನಡ ಜಾಗೃತಿ ಸಮಿತಿ ಸದಸ್ಯರುಗಳು, ಕನ್ನಡ ಕಾಯಕಪಡೆ ಸದಸ್ಯರುಗಳು ಮತ್ತಿತರರು ರಾಜ್ಯಾದ್ಯಂತ ಪಾಲ್ಗೊಳ್ಳಲಿದ್ದಾರೆ ಹಾಗೂ ನಿರಂತರ ಅಭಿಯಾನವನ್ನು ಮುಂದುವರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Key words: Kannada campaign-kannada kayaka varsha-Kannada Development Authority-TS Nagabarana