ಮೈಸೂರು, ಸೆಪ್ಟಂಬರ್, 29,2025 (www.justkannada.in): ಪತ್ರಕರ್ತ ಕೆ.ಕೆ. ಕಾರ್ತಿಕ್ ಅವರ ಕಥೆಗಳು ಬದುಕಿನಲ್ಲಿ ಭರವಸೆ ಮೂಡಿಸುವಂತಹವು. ಜೀವನಕ್ಕೆ ಬೇಕಾದ ಮುಖ್ಯವಾದ ಕಥೆಗಳನ್ನು ಅವರು ಬರೆದಿದ್ದಾರೆ. ಸಾಹಿತ್ಯ ಮತ್ತು ಪತ್ರಿಕೋದ್ಯಮ ಸಮಾನಾಂತರವಾಗಿ ಸಂಗಮಗೊಂಡಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಮಂಸೋರೆ ಪ್ರಶಂಸಿಸಿದರು.
ನಗರದ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವಿಶೇಷ ಪ್ರತಿನಿಧಿಯಾಗಿರುವ ಪತ್ರಕರ್ತ ಕಾರ್ತಿಕ್ ಅವರ “ಕಹಾನಿ” ಇಂಗ್ಲಿಷ್ ಕೃತಿಯನ್ನು ಮಂಸೋರೆ ಬಿಡುಗಡೆಗೊಳಿಸಿ ಮಾತನಾಡಿದರು.
“ಪುಸ್ತಕದಲ್ಲಿರುವ 20 ಕಥೆಗಳಲ್ಲೂ ಭರವಸೆ ಇದೆ. ಓದುವಾಗ ಕಿರುಚಿತ್ರ ನೋಡಿದ ಅನುಭವ ಸಿಕ್ಕಿತು. ಎಲ್ಲ ಕಥೆಗಳೂ ಗಾಢವಾಗಿವೆ. ಗೊತ್ತಿಲ್ಲದ್ದನ್ನು ಬರೆಯದೇ, ವಿದ್ವತ್ ಪಾಠ ಮಾಡದೇ ನಮ್ಮ ಸುತ್ತಲಿನ ಬದುಕಿಗೆ ಚೌಕಟ್ಟು ಹಾಕಿ ನಿರೂಪಿಸಿರುವುದು ವಿಶೇಷ. ಹೊಸಬರ ಕೃತಿಗಳಲ್ಲಿ ಸಾಮಾನ್ಯವಾಗಿ ಅನುಭವದ ಕೊರತೆ ಕಾಣುವಂತೆ ಆಗುತ್ತದೆ. ಆದರೆ ಕಾರ್ತಿಕ್ ಕೃತಿಯಲ್ಲಿ ಅನುಭವ ಹೇರಳವಾಗಿದೆ. ಇಂಗ್ಲಿಷ್ ನಲ್ಲಿ ಬರೆದಿದ್ದರೂ ಕನ್ನಡದ ಭಾವಜಗತ್ತಿಗೆ ಆಳವಾಗಿ ಬೆಸೆದುಕೊಂಡಿದೆ” ಎಂದು ಅವರು ಶ್ಲಾಘಿಸಿದರು.
ವಿಧಾನಪರಿಷತ್ ಸದಸ್ಯ ಕೆ. ಶಿವಕುಮಾರ್ ಮಾತನಾಡಿ, ಸಣ್ಣಕಥೆಗಳ ಪರಂಪರೆ ಶತಮಾನಗಳಿಂದ ಮುಂದುವರಿದಿದೆ. ಪತ್ರಕರ್ತನಾಗಿ ಕಾರ್ತಿಕ್ ಕಥೆ ಬರೆದಿರುವುದು ವಿಶೇಷ. ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು ದಾಖಲಿಸಬೇಕು. ಸಾಹಿತ್ಯ-ಪತ್ರಿಕೋದ್ಯಮ ವಿಭಿನ್ನವಾದರೂ ಸಮಾಜಕ್ಕೆ ಹತ್ತಿರವಾಗಿ ಆಲೋಚನೆ ಮಾಡುವುದು ಮುಖ್ಯ. ಸಣ್ಣಕತೆ ಬರೆದಾಗ ಅಂತಃರಾಳವೇ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಮೈಸೂರು ಸಾಹಿತ್ಯ ಉತ್ಸವದ ಸಂಸ್ಥಾಪಕಿ ಹಾಗೂ ಪುಸ್ತಕ ಕ್ಲಬ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಕೃತಿಯ ಕುರಿತು ಮಾತನಾಡಿದರು.
ಮೈಸೂರು ಸಾಹಿತ್ಯ ಉತ್ಸವದ ಸಂಸ್ಥಾಪಕ ಅಧ್ಯಕ್ಷೆ ಶುಭ ಸಂಜಯ್ ಅರಸ್ ಕೃತಿ ಕುರಿತು ಮಾತನಾಡಿ, ‘ಇಲ್ಲಿನ ಕಥೆಗಳಲ್ಲಿ ನವರಸವಿದೆ. ಹಲವು ಕಥೆಗಳು ಚಿಂತನೆಗೆ ಹತ್ತಿಸುತ್ತವೆ. ಕಾಡುತ್ತವೆ’ ಎಂದರು.
ಅಪೂರ್ವ ಕಿರಣ್ ಪ್ರಾರ್ಥನೆ ಸಲ್ಲಿಸಿದರು. ಹರಿಣಿ ನಿವೇದಿತಾ ಕಾರ್ಯಕ್ರಮವನ್ನು ನಿರೂಪಿಸಿದರು.
Key words: ‘Journalist, Karthik, Kahani, English work, Film director, Mansore