ಅಕ್ಕ ಪಡೆಗೆ ಸಚಿವ ಕೆ.ಹೆಚ್ ಮುನಿಯಪ್ಪ ಚಾಲನೆ

ಬೆಂಗಳೂರು ಗ್ರಾಮಾಂತರ ಜನವರಿ,9,2026 (www.justkannada.in): ಮಹಿಳೆಯರು ಮತ್ತು ಮಕ್ಕಳಲ್ಲಿ ಕಾನೂನು ಅರಿವು, ಜಾಗೃತಿ ಶಿಕ್ಷಣ ನೀಡುವುದರ ಜೊತೆಗೆ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ/ನೆರವು ನೀಡುವ ಉದ್ದೇಶದಿಂದ ಅಕ್ಕ ಪಡೆ ಯೋಜನೆ ಜಾರಿಯಾಗಿದ್ದು ಇಂದು ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಮಟ್ಟದ ಅಕ್ಕ ಪಡೆ ಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಉದ್ದೇಶವಾಗಿದೆ. ಸಹಾನುಭೂತಿ ಮತ್ತು ಸಮುದಾಯ ಸೇವೆಯಲ್ಲಿ ಚಾಲಿತವಾಗಿರುವ ಅಕ್ಕ ಪಡೆ ಸಮಾಜದಲ್ಲಿ ಸ್ಪಂದಿಸುವ ಸುರಕ್ಷತಾ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯಲ್ಲಿ 4 ಮಹಿಳಾ ಗೃಹರಕ್ಷಕರನ್ನೊಳಗೊಂಡ ಅಕ್ಕಿ ಪಡೆಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಎಸ್ಪಿ ಚಂದ್ರಕಾಂತ್ ಎಂ.ವಿ, ಎಎಸ್ಪಿ ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಮುದ್ದಣ್ಣ, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಅಕ್ಕ ಪಡೆ ಉದ್ದೇಶ

ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಹಸ್ತ ಮತ್ತು ರಕ್ಷಣೆ ಒದಗಿಸುವುದು. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವುದಾಗಿದೆ. ಶಿಕ್ಷಣದ ಮೂಲಕ ಹಕ್ಕುಗಳು, ಕಾನೂನುಗಳು, ಸುರಕ್ಷತಾ ಕ್ರಮಗಳು ಮತ್ತು ಲಭ್ಯವಿರುವ ಬೆಂಬಲ ವ್ಯವಸ್ಥೆಗಳ ಬಗ್ಗೆ, ಜಾಗೃತಿ ಮೂಡಿಸುವುದು ಮತ್ತು ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆದು, ಕಾನೂನಿನ ರಕ್ಷಣೆಯೊಂದಿಗೆ ಭಯಮುಕ್ತ ವಾತಾವರಣ ಸೃಷ್ಟಿಸುವುದು ಅಕ್ಕ ಪಡೆಯ ಉದ್ದೇಶವಾಗಿದೆ.

ಪ್ರಮುಖ ಚಟುವಟಿಕೆಗಳು

ತರಬೇತಿ ಪಡೆದ ಅಕ್ಕ ಪಡೆ ತಂಡಗಳು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗಾಟ ಮತ್ತು ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಸಂಕಷ್ಟದ ಕರೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತವೆ. ಲಿಂಗ ಸಮಾನತೆ, ಮಕ್ಕಳ ರಕ್ಷಣೆ, ಕಾನೂನು ಹಕ್ಕುಗಳು, ಸಹಾಯವಾಣಿಗಳು ಮತ್ತು ವರದಿ ಮಾಡುವ ಕಾರ್ಯವಿಧಾನಗಳಂತಹ ವಿಷಯಗಳ ಕುರಿತು ಶಾಲೆ, ಕಾಲೇಜು, ಮಾರುಕಟ್ಟೆ ಮತ್ತು ನೆರೆಹೊರೆಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ. ಅಕ್ಕ ಪಡೆಯು, ಮಕ್ಕಳ ಕಲ್ಯಾಣ ಸಮಿತಿಗಳು, ಮಹಿಳಾ ಸಹಾಯವಾಣಿಗಳು, ಸರ್ಕಾರೇತರ ಸಂಸ್ಥೆಗಳು, ಕಾನೂನು ನೆರವು ಮತ್ತು ಆಶ್ರಯ ತಾಣಗಳೊಂದಿಗೆ ಸುಗಮ ಸಂಪರ್ಕ ಕಲ್ಪಿಸಿ ಸಮಾಲೋಚನೆ ಬೆಂಬಲವನ್ನು ನೀಡುತ್ತದೆ. ವಿಶ್ವಾಸ ವರ್ಧನೆ, ಸಮುದಾಯದಲ್ಲಿ ಸ್ನೇಹಪರ ಮತ್ತು ವಿಶ್ವಾಸಾರ್ಹ ಸ್ಥಿತಿಯನ್ನು ಸ್ಥಾಪಿಸುವುದು, ಸಂತ್ರಸ್ತೆಯರು ಮತ್ತು ಕುಟುಂಬಗಳು ಭಯವಿಲ್ಲದೆ ಸಹಾಯ ಪಡೆಯಲು ಪ್ರೋತ್ಸಾಹಿಸುತ್ತದೆ.

ಉದ್ದೇಶಿತ ಫಲಾನುಭವಿಗಳು

ಮಹಿಳೆ ಮತ್ತು ಮಕ್ಕಳಿಗೆ ಕಿರುಕುಳ, ಕೌಟುಂಬಿಕ ಹಿಂಸೆ, ಯಾವುದೇ ರೀತಿಯ ದೌರ್ಜನ್ಯವನ್ನು ಎದುರಿಸುತ್ತಿರುವ ಮಹಿಳೆಯರು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳು. ನಿರ್ಲಕ್ಷ್ಯ, ಕಳ್ಳಸಾಗಣೆ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಬಾಲಭಿಕ್ಷಾಟನೆ, ಮಾದಕ ದ್ರವ್ಯ ಅಥವಾ ನಿಂದನೆಗೆ ಒಳಗಾದ ಮಕ್ಕಳು, ಜಾಗೃತಿ ಮತ್ತು ಶಿಕ್ಷಣದ ಮೂಲಕ ಇಡೀ ಸಮಾಜವು ಈ ಯೋಜನೆಯ ಫಲಾನುಭವಿಯಾಗಿದ್ದಾರೆ.

ಅಕ್ಕ ಪಡೆ ವ್ಯಾಪ್ತಿ

ಜಿಲ್ಲಾ ಮಟ್ಟದಲ್ಲಿ ಮಹಿಳಾ ಗೃಹ ರಕ್ಷಕರನ್ನೊಳಗೊಂಡ ಅಕ್ಕ ಪಡೆ ತಂಡವು ಸ್ಥಳೀಯ ಪೊಲೀಸರ ನಿಕಟ ಸಹಯೋಗದೊಂದಿಗೆ ಬೆಳಿಗ್ಗೆ 07 ರಿಂದ ರಾತ್ರಿ 08 ಗಂಟೆಯವರೆಗೆ ಎರಡು ಪಾಳಿಗಳಲ್ಲಿ ಅಂದರೆ, ಬೆಳಿಗ್ಗೆ 07 ರಿಂದ ಮಧ್ಯಾಹ್ನ 02 ಗಂಟೆ ಮತ್ತು ಮಧ್ಯಾಹ್ನ 02 ರಿಂದ ರಾತ್ರಿ 08 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ.

ತಂಡದ ಸದಸ್ಯರನ್ನು ಶಾಲೆ, ಕಾಲೇಜು, ಬಾಲಕಿಯರ, ಮಹಿಳಾ ಹಾಸ್ಟೆಲ್, ಬಸ್, ರೈಲ್ವೆ ನಿಲ್ದಾಣಗಳು, ಸ್ಥಳೀಯ ಮಾರುಕಟ್ಟೆ, ಪ್ರೇಕ್ಷಣಿಯ ಸ್ಥಳಗಳು ಪವಿತ್ರ ಸ್ಥಳಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗುತ್ತದೆ.

ಪಡೆಯ ಪಾತ್ರ ಮತ್ತು ಜವಾಬ್ದಾರಿಗಳು

ಮಹಿಳಾ ಕಿರುಕುಳ ಪ್ರಕರಣಗಳ ಬಗ್ಗೆ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ವರದಿ ಮಾಡುವುದು. ಮಹಿಳೆ ಮತ್ತು ಮಕ್ಕಳಿಗೆ ಸ್ವರಕ್ಷಣೆ ಕಾರ್ಯವಿಧಾನದ ತರಬೇತಿ ನೀಡುವುದು. ಮಹಿಳೆಯರ ಕಿರುಕುಳ ಮತ್ತು ಈವ್-ಟೀಸಿಂಗ್ ತಡೆಗಟ್ಟಲು ಶಾಲೆ, ಕಾಲೇಜು, ಉದ್ಯಾನವನ, ಸಿನಿಮಾ ಮಂದಿರ, ಸ್ಥಳೀಯ ಮಾರುಕಟ್ಟೆಗಳಿಗೆ ನಿಯಮಿತವಾಗಿ ಭೇಟಿ ನೀಡುವುದು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಹಾಗೂ ಅಪರಿಚಿತರ ಬಗ್ಗೆ ಎಚ್ಚರದಿಂದಿರುವುದರ ಬಗ್ಗೆ ಜಾಗೃತಿ ಮೂಡಿಸುವುದು. POSCO, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ, ಮಾದಕ ವಸ್ತುಗಳ ದುರುಪಯೋಗದ ಬಗ್ಗೆ ಜಾಗೃತಿ ಮೂಡಿಸುವುದು. ಮಾದಕ ದ್ರವ್ಯಗಳು ಮತ್ತು ಮಾದಕ ದ್ರವ್ಯಗಳ ದುರುಪಯೋಗ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು. ಸಂಚಾರ ನಿಯಮಗಳು ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು. ಸಹಾಯವಾಣಿಗಳು 1098, 181, 112 ಇತ್ಯಾದಿ ಬಗ್ಗೆ ಜಾಗೃತಿ ಮೂಡಿಸುವುದು. ಸೈಬ‌ರ್ ಅಪರಾಧಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು. ಶಾಲೆ, ಕಾಲೇಜು, ಹುಡುಗಿಯರು ಮತ್ತು ಉದ್ಯೋಗಸ್ಥ ಮಹಿಳೆಯರ ನಿಲಯಗಳ ಆವರಣದಲ್ಲಿ ದುಷ್ಕರ್ಮಿಗಳ ಮೇಲೆ ನಿಗಾ ಇರಿಸುವುದು. ಸಿಗ್ನಲ್‌ ನ ಬಳಿ ಮಕ್ಕಳ ಭಿಕ್ಷಾಟನೆಯನ್ನು ತಡೆಗಟ್ಟುವುದು. ಕಳ್ಳಸಾಗಾಣೆಯಿಂದ ರಕ್ಷಿಸಲ್ಪಟ್ಟ ಮಹಿಳೆಯರು ಮತ್ತು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದು. ಸಹಾಯವಾಣಿಗಳಿಂದ ಬರುವ ಎಲ್ಲಾ ತುರ್ತು ಕರೆಗಳಿಗೆ ಸ್ಪಂದಿಸುವುದು ಮತ್ತು ಸೂಕ್ತ ಶಿಷ್ಟಾಚಾರದೊಂದಿಗೆ ಸಂತ್ರಸ್ತೆಯರನ್ನು ರಕ್ಷಿಸುವುದು.

ಜಿಲ್ಲೆಯ ಸೂಕ್ಷ್ಮ ಪ್ರದೇಶಗಳು

ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ, ಪೋಕ್ಸ್ ಪ್ರಕರಣಗಳು ದೇವನಹಳ್ಳಿ ತಾಲ್ಲೂಕಿನ ವಿಜಯಪುರ, ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು, ತೂಬಗೆರೆ, ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ, ನಿಡಗಟ್ಟ, ನೆಲಮಂಗಲ ತಾಲ್ಲೂಕಿನ ಜರಿಗೇನಹಳ್ಳಿ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಸೂಕ್ಷ್ಮ ಪ್ರಕರಣಗಳೆಂದು ಗುರುತಿಸಲಾಗಿದೆ.

Key words: Minister, K.H. Muniyappa, launches, Akka pade