ಮೈಸೂರು,ಸೆಪ್ಟಂಬರ್,29,2025 (www.justkannada.in): ‘ಜಸ್ಟ್ ಕನ್ನಡ ಡಾಟ್ ಇನ್’ 15ನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ಸಂಭ್ರಮದ ಪೂರ್ವಭಾವಿಯಾಗಿ ಸರಳವಾಗಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕುವೆಂಪುನಗರದ ಜಸ್ಟ್ ಕನ್ನಡ ಕಚೇರಿಯಲ್ಲಿ ಹಿರಿಯ ಪತ್ರಕರ್ತ ಹಾಗೂ ವಿಧಾನಪರಿಷತ್ ಸದಸ್ಯ ಕೆ. ಶಿವಕುಮಾರ್ ಹಾಗೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ಅವರು ‘ಜಸ್ಟ್ ಕನ್ನಡ ಡಾಟ್ ಇನ್’ 15ನೇ ವರ್ಷ ಸಂಭ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಶಿವಕುಮಾರ್, ನನ್ನ ಪ್ರಕಾರ ಇದು ಕನ್ನಡಿಗರಿಗೆ ಹಬ್ಬ. ಜಸ್ಟ್ ಕನ್ನಡ ಈ ಮಟ್ಟಕ್ಕೆ ಬೆಳೆದಿದ್ದು ಬಹಳ ಹೆಮ್ಮೆಯ ವಿಚಾರ. ನಮಗೆ ಏನೇ ವಿಚಾರ ಬೇಕಿದ್ದರೂ ಮೊದಲು ಜಸ್ಟ್ ಕನ್ನಡ ನೋಡುತ್ತೇವೆ. ಬೆಳಗ್ಗೆ ಎದ್ದು ಹೇಗೆ ಪತ್ರಿಕೆಗಳನ್ನ ಓದುತ್ತೇವೋ ಹಾಗೆಯೇ ಜಸ್ಟ್ ಕನ್ನಡಕ್ಕೂ ಅಡಿಕ್ಟ್ ಆಗಿದ್ದೇವೆ. ಹಾಗಾಗಿ ಇಂತಹ ಪೋರ್ಟಲ್ ಗಳು ವ್ಯವಸ್ಥಿತವಾಗಿ ಬೆಳೆಯಬೇಕು ಎಂದರೆ ಜಗತ್ತಿನಾದ್ಯಂತ ಇರುವ ಎಲ್ಲಾ ಕನ್ನಡಿಗರು ಪ್ರೋತ್ಸಾಹಿಸಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ಪತ್ರಿಕೆಯ ಹೆಸರಿನಲ್ಲಿ ಪೋರ್ಟಲ್ ನಡೆಸುವುದು ಬೇರೆ. ಆದರೇ ಇಂಡಿಪೆಂಡೆಂಟ್ ಆಗಿ ಪೋರ್ಟಲ್ ನಡೆಸುವುದು ಬೇರೆ. ಜಸ್ಟ್ ಕನ್ನಡ ಎಂದರೇ ಒಂದು ಬ್ರ್ಯಾಂಡ್. ಹಾಗಾಗಿ ಕನ್ನಡಿಗರು ಜಸ್ಟ್ ಕನ್ನಡವನ್ನ ಹೆಚ್ಚು ಶೇರ್ ಮಾಡಬೇಕು. ಇದು ಬರೀ ಜಸ್ಟ್ ಕನ್ನಡ ಅಲ್ಲ ಗ್ಲೋಬಲ್ ಕನ್ನಡ. 25ನೇ ವರ್ಷಕ್ಕೆ ಜಸ್ಟ್ ಕನ್ನಡ ಲೀಡಿಂಗ್ ಪೋರ್ಟಲ್ ಆಗಿರಬೇಕು. ಇಲ್ಲದಿದ್ದರೆ ಅದು ಕನ್ನಡಕ್ಕೆ ಅವಮಾನ ಮಾಡಿದಂತೆ ಹಾಗೂ ಒಬ್ಬ ಪತ್ರಕರ್ತನಿಗೂ ಅನ್ಯಾಯ ಮಾಡಿದ ಹಾಗೆ ಎಂದು ಶಿವಕುಮಾರ್ ಹೇಳಿದರು.
ನಂತರ ಮಾತನಾಡಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ಅವರು, ಜಸ್ಟ್ ಕನ್ನಡ 15 ವರ್ಷ ಪೂರೈಸಿದೆ ಅಂದರೆ ಅದು ಕಷ್ಟಸಾಧ್ಯ. ವಿಶ್ಯುವಲ್ ಮೀಡಿಯಾಗೆ ಜಸ್ಟ್ ಕನ್ನಡ ಸ್ಪರ್ಧೆ ಒಡ್ಡುತ್ತಿದೆ. ಮೊಬೈಲ್ ನಲ್ಲಿ ಎಷ್ಟೇ ಸುದ್ದಿಗಳು ಬಂದರೂ ನಾನು ಮೊದಲು ಕ್ಲಿಕ್ ಮಾಡುವುದೇ ಜಸ್ಟ್ ಕನ್ನಡ. ಆ ರೀತಿಯಾಗಿ ನಮ್ಮ ಜಸ್ಟ್ ಕನ್ನಡ ಸಂಬಂಧ ಬೆಳೆದಿದೆ. ತುಂಬಾ ವರ್ಷಗಳಿಂದ ನಾನು ಜಸ್ಟ್ ಕನ್ನಡ ಓದುತ್ತಿದ್ದೇನೆ. ಈ ಸಂದರ್ಭದಲ್ಲಿ ಜಸ್ಟ್ ಕನ್ನಡ ಹಾಗೂ ಟೀಂ ಗೆ ಶುಭ ಕೋರುತ್ತೇನೆ. ಇದು ಹೀಗೆ ಮುಂದುವರೆಯಲಿ, ಜೊತೆಗೆ ಸವಾಲುಗಳನ್ನ ಮೆಟ್ಟಿನಿಲ್ಲಲಿ. ಶಿವಕುಮಾರ್ ಹೇಳಿದಂತೆ ಜಸ್ಟ್ ಕನ್ನಡ ಇಂಡಿಯಾಗೆ ನಂಬರ್ ಒನ್ ಪೋರ್ಟಲ್ ಆಗಲಿ. ಹೊರ ದೇಶಗಳಿಲ್ಲಿರುವ ಕನ್ನಡಿಗರಿಗೂ ಜಸ್ಟ್ ಕನ್ನಡ ತಲುಪಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ರಾಜೀವ್, ಹಿರಿಯ ವಕೀಲ ಅ.ಮ ಭಾಸ್ಕರ್, ಯಶ್ಟೇಲ್ ಸ್ಥಾಪಕ ಮಂಜುನಾಥ್, ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಉಪಾಧ್ಯಕ್ಷ ರವಿ ಪಾಂಡವಪುರ, ಪತ್ರಕರ್ತ ಓಂಕಾರ್, ಪತ್ರಕರ್ತರಾದ ಕೆ.ಬಿ ರಮೇಶ್ ನಾಯಕ, ಆನಂದ್, ಕ್ಯಾಮರಾ ಮ್ಯಾನ್ ಗಳಾದ ಶ್ರೀಧರ್, ವಿನಯ್ ರಾಹುಲ್, ರಕ್ಷಿತ್, ಯಶ್ಟೇಲ್ ವಾಹಿನಿ ವಿಡಿಯೋ ಎಡಿಟರ್ ವಾಸಿಮ್ ಮತ್ತಿತರರು ಉಪಸ್ಥಿತರಿದ್ದರು.
Key words: Mysore, JustKannada.in, 15th Anniversary, poster, released