ಶೇ 63ರಷ್ಟು ಭ್ರಷ್ಟಾಚಾರ ಹೇಳಿಕೆ ವಿವಾದ: ಸ್ಪಷ್ಟನೆ ಕೊಟ್ಟು ಬೇಸರ ವ್ಯಕ್ತಪಡಿಸಿದ ನ್ಯಾ. ಬಿ. ವೀರಪ್ಪ

ಬೆಂಗಳೂರು,ಡಿಸೆಂಬರ್,5,2025 (www.justkannada.in): ಕರ್ನಾಟಕ ರಾಜ್ಯದಲ್ಲಿ ‘ಶೇ. 63ರಷ್ಟು ಭ್ರಷ್ಟಾಚಾರವಿದೆ’ ಎಂಬ ಹೇಳಿಕೆ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಈ ಹೇಳಿಕೆ ಬಗ್ಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಇಂದು ಸ್ಪಷ್ಟೀಕರಣ ನೀಡಿದ್ದಾರೆ.

ನಾನು ಮಾತನಾಡುವಾಗ ಯಾವ ಸರ್ಕಾರ ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂದು ಬಿ. ವೀರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಯಾವ ಸರ್ಕಾರವನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಿಲ್ಲ. ಇಂಡಿಯಾ ಕರೆಪ್ಷನ್ ಸರ್ವೆಯಲ್ಲಿ ಇದ್ದ ಮಾಹಿತಿಯನ್ನು ಮಾತ್ರ ಹೇಳಿದ್ದೇನೆ. 2019 ರಲ್ಲಿ ನಡೆದಿದ್ದ ಸರ್ವೆಯ ಪ್ರಕಾರ, ಆಗ ಶೇ. 63ರಷ್ಟು ಭ್ರಷ್ಟಾಚಾರ ಇದೆ ಎಂದು ವರದಿಯಾಗಿತ್ತು. ನಾನು ಅದನ್ನು ಮಾತ್ರ ಹೇಳಿದ್ದೇನೆ ಎಂದು ಬಿ.ವೀರಪ್ಪ ಅವರು ಸ್ಪಷ್ಟಪಡಿಸಿದರು.

ನನ್ನ ಹೇಳಿಕೆಯನ್ನು ತಿರುಚಲಾಗಿದೆ. ರಾಜಕೀಯ ನಾಯಕರು ಇದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ. ನನ್ನ ಹೇಳಿಕೆಯನ್ನು ಈ ರೀತಿ ಬಳಕೆ ಮಾಡಿಕೊಂಡಿರುವುದು ನನಗೆ ನಿಜಕ್ಕೂ ನೋವು ತಂದಿದೆ. ಆರಂಭದಿಂದಲೂ ಎಲ್ಲಾ ಸರ್ಕಾರಗಳು ಕೂಡ ಭ್ರಷ್ಟಾಚಾರದಲ್ಲಿ ಇವೆ. ನಾನು ಯಾವುದೇ ಒಂದು ನಿರ್ದಿಷ್ಟ ಸರ್ಕಾರ ಅಂತಾ ಗುರಿಯಾಗಿಸಿ ಹೇಳಿಲ್ಲ.  ನನ್ನ ಹೇಳಿಕೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಬೇಡಿ ಎಂದು ರಾಜಕಾರಣಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಮನವಿ ಮಾಡಿದ್ದಾರೆ.

Key words: 63% corruption, statement, Justice, B. Veerappa