ಸೈಬರ್ ಕ್ರೈಂನ ಕರಾಳ ಲೋಕ ಬಿಚ್ಚಿಟ್ಟ ಪತ್ರಕರ್ತರು: ದಿ ಡಾರ್ಕ್ ವೆಬ್ ಟೀಸರ್ ರಿಲೀಸ್.

ಬೆಂಗಳೂರು,ಜನವರಿ,24,2024(www.justkannada.in): ದಿ ಡಾರ್ಕ್ ವೆಬ್, ಸ್ಯಾಂಡಲ್ ವುಡ್  ನಲ್ಲಿ ರಿಲೀಸ್ ಗೆ ರೆಡಿಯಾಗಿರುವ ಮತ್ತೊಂದು ಹೊಸ ಸಿನಿಮಾ. ವಿಶೇಷ ಅಂದರೆ ಪತ್ರಕರ್ತರೇ ಸೇರಿ ಮಾಡಿರುವ ಸಿನಿಮಾವಿದು. ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ತಮ್ಮ ಎಂಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸೈಬರ್ ಕ್ರೈಂ ಆಧಾರಿತ ‘ದಿ ಡಾರ್ಕ್ ವೆಬ್’  ಸಿನಿಮಾ ಮಾಡಿದ್ದು ಇದೀಗ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಸೈಬರ್ ಕ್ರೈಂ ಕಥಾ ಹಂದರ ಆಧಾರಿತ ‘ದಿ ಡಾರ್ಕ್ ವೆಬ್’ ಟೀಸರ್ ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಯುವ ಪ್ರತಿಭೆ ಚೇತನ್ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ಮೇಘನಾ ಮಿಂಚಿದ್ದಾರೆ.  ಚಿತ್ರದಲ್ಲಿ ಬಹುತೇಕ ಪತ್ರಕರ್ತರೇ ಅಭಿನಯ ಮಾಡಿರೋದು ಈ ಸಿನಿಮಾದ ವಿಶೇಷ.

ಮಂಜು ಬನವಾಸೆ ಅವರು ನಿರ್ಮಾಣದ ಜೊತೆಗೆ ಪೊಲೀಸ್  ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಚಿತ್ರಕ್ಕೆ ಕಿರಣ್ ಸ್ವಾಮಿ ಅವರ ಚೊಚ್ಚಲ  ನಿರ್ದೇಶನವಿದೆ. ಚಂದ್ರಮೌಳಿ ಕ್ಯಾಮೆರಾ ವರ್ಕ್ ಮಾಡಿದ್ದು ವಿಶಾಕ್ ನಾಗಲಾಪುರ ಸಂಗೀತ ನೀಡಿದ್ದಾರೆ.

ಟೀಸರ್ ರಿಲೀಸ್ ಮಾಡುವ ಕಾರಣಕ್ಕೆ ಮಾಧ್ಯಮದ ಮುಂದೆ ಹಾಜರಾಗಿದ್ದ ಸಿನಿಮಾ ತಂಡ ಚಿತ್ರದ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಂಡರು. ನಟ, ನಿರ್ಮಾಪಕ ಮಂಜು ಬನವಾಸೆ ಮಾತನಾಡಿ, ‘ನಾವೆಲ್ಲ ಪತ್ರಕರ್ತರು, ಸಿನಿಮಾ ಕನಸು ಕಾಲೇಜು ದಿನಗಳಿಂದನೇ ಇತ್ತು. ಎಲ್ಲರೂ ಹೊಸಬರೇ ಆಗಿದ್ದರಿಂದ ತುಂಬಾ ಕಷ್ಟವಾಗಿತ್ತು. ನಾವು ಪ್ರತಿದಿನ ನೋಡುವ ಕಥೆಗಳೆ ಈ ಸಿನಿಮಾದಲ್ಲೂ ಇದೆ. ಹಣ ಜಾಸ್ತಿ ಆಗಿದೆ ಅಂತ ಸಿನಿಮಾ ಮಾಡಿಲ್ಲ, ಸಿನಿಮಾ ಹುಚ್ಚು ಹಾಗೂ ಪ್ರೀತಿಗಾಗಿ  ಈ ಸಿನಿಮಾ ಮಾಡಿದ್ದು. ನಾವು ಪ್ರತಿದಿನ ನೋಡ್ತಿದ್ದ ಕ್ರೈಮ್ ಗಳ ಬಗ್ಗೆಯೇ ಸಿನಿಮಾ ಮಾಡಿದ್ದೇವೆ’ ಎಂದರು.

ನಿರ್ದೇಶಕ ಕಿರಣ್ ಮಾತನಾಡಿ, ‘ಶೂಟಿಂಗ್ ಅನುಭವ ಬಿಚ್ಚಿಟ್ಟರು. ಸಕಲೇಶಪುರ, ಚಿಕ್ಕಮಗಳೂರು  ಸೇರಿದಂತೆ ಅನೇಕ ಕಡೆ ಶೂಟ್ ಮಾಡಿರುವುದಾಗಿ ಹೇಳಿದರು. ಇನ್ನೂ ನಾಯಕ ಚೇತನ್ ಕಾಫಿ ಡೇ ಓನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಟೀಸರ್ ಮೂಲಕ ಕುತೂಹಲ ನಿರೀಕ್ಷೆ ಹೆಚ್ಚಿರುವ ಡಾರ್ಕ್ ವೆಬ್ ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದೆ.

Key words: Journalists – The Dark Web -teaser -released