ಕೇಂದ್ರ ಸಚಿವ ಹೆಚ್.ಡಿಕೆಗೆ ನಿಂದನೆ ಆರೋಪ: ನಟ ದರ್ಶನ್ ಮಹಿಳಾ ಅಭಿಮಾನಿ ವಿರುದ್ದ ದೂರು

ಮಂಡ್ಯ,ಜೂನ್,21,2024 (www.justkannada.in):  ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಕೈಗಾರಿಕಾ ಸಚಿವ ಎಚ್​. ಡಿ ಕುಮಾರಸ್ವಾಮಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ನಟ ದರ್ಶನ್  ಅವರ ಮಹಿಳಾ ಅಭಿಮಾನಿ ವಿರುದ್ಧ  ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ  ದರ್ಶನ್ ಅಭಿಮಾನಿ  ಮಂಗಳ ಎಂಬಾಕೆ ಮೇಲೆ ಜೆಡಿಎಸ್  ತಾಲೂಕು ಘಟಕದ ಅಧ್ಯಕ್ಷ ಜಾನಕೀರಾಮ್ ಅವರು ದೂರು  ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಟ ದರ್ಶನ್ ಬಂಧನ ಬಳಿಕ ವಿಡಿಯೋ ಮಾಡಿದ್ದ ಮಂಗಳ ಎಂಬಾಕೆ ಕುಮಾರಸ್ವಾಮಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು  ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ದರ್ಶನ್ ವಿರುದ್ದ ಕೊಲೆ ಅಪರಾಧ ಬರುವಂತೆ ಕುಮಾರಸ್ವಾಮಿ ಮಾಡಿದ್ದಾನೆ. ದುಡ್ಡು ಕೊಟ್ಟು ದರ್ಶನ್ ವಿರುದ್ದ ಧಿಕ್ಕಾರ ಕೂಗಿಸ್ತೀಯಾ? ಸುಮಲತಾ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸೋಕೆ ಚಾನ್ಸ್ ಕೊಟ್ಟಿರೋದಕ್ಕೆ ಡಿ ಬಾಸ್ ವಿರುದ್ದ ಸ್ಕೆಚ್ ಆಗ್ತೀಯಾ? ಸುಮಲತಾ‌ರಿಂದ ಭಿಕ್ಷೆ ಹಾಕಿಸಕೊಂಡಿದ್ದೀಯಾ ಎಂದು ಏಕವಚನದಲ್ಲಿ ಮಹಿಳಾ ಅಭಿಮಾನಿ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿತ್ತು.

Key words: JDS, Complaint, actor Darshan , fan