ಕರ್ನಾಟಕದಲ್ಲೊಂದು ಜೈ ಭೀಮ್ ಕತೆ….

ಮೈಸೂರು,ನವೆಂಬರ್,12,2021(www.justkannada.in): ನಾವೆಷ್ಟೇ ಬ್ಯಾಡ ಬ್ಯಾಡ ಅಂದ್ರೂ ನಮ್ ಮಾಳದ ಗುಡಿಸಲಿಗೆಲ್ಲಾ ಬೆಂಕಿ ಇಟ್ರು ಸ್ವಾಮಿ, ತಡೆಯಲು ಹೋದ ನಮ್ಮ ಮೇಲೆ ಹಲ್ಲೆ ನಡೆಸಿದ್ರು…ನೂಕಿದ್ರು, ತಳ್ಳಾಡಿದ್ರು… ನಮ್ಮ ಗಂಡಂದ್ರಿನ್ನ ಲಾರಿ ಹತ್ತಿಸ್ಕೊಂಡು ಕರಕ್ಕೊಂಡು ಹೋದ್ರು. ಕುಡಿಯೋ ನೀರಿಗೆಲ್ಲಾ ವಿಷ ಬೆರಸವ್ರೆ, ಮಕ್ಳಿಗೆ ಹಿಟ್ಟಿಲ್ಲ. ಮೂರು ದಿನದಿಂದ ಬಯಲಲ್ಲೆ ಮಲಗ್ತಾ ಇದೀವಿ. ಆನೆ ಹಂದಿಗಳ ಕಾಟ ಬೇರೆ…’’

-ಎರಡು ದಶಕ ಕಳೆದರೂ, ಸೋಲಿಗ ಸಮುದಾಯದ ಗಿರಿಜನ ಹೆಣ್ಣುಮಕ್ಕಳು ಅಂದು ಮೈಸೂರು ಪತ್ರಕರ್ತರ ಮುಂದಿಟ್ಟ ಈ ನೋವಿನ ಆರ್ತನಾದವ ಮರೆಯುವುದು ಹೇಗೆ ? ಇತ್ತೀಚೆಗೆ ನೋಡಿದ ‘ಜೈ ಭೀಮ್’ ಸಿನಿಮಾ ಹಾಗೂ ಅಲ್ಲಿನ ಗಿರಿಜನರ ನೋವಿನ ಕಥಾನಕ, ನಮ್ಮ ನಾಗರಹೊಳೆಯ ಗಿರಿಜನರು ಈಗಲೂ ಅನುಭವಿಸುತ್ತಿರುವ ಕಷ್ಟ ಕೋಟಲೆಯನ್ನು ಮುನ್ನೆಲೆಗೆ ತಂತು.

ಮೈಸೂರು ಜಿಲ್ಲೆ ಎಚ್. ಡಿ. ಕೋಟೆ ತಾಲೂಕಿನ ಮಜ್ಜನಗುಪ್ಪೆ ಮಾಳದಲ್ಲಿ ಗುಡಿಸಲು ಹಾಕಿಕೊಂಡಿದ್ದ ಬುಡಕಟ್ಟು ಸೋಲಿಗ ಸಮುದಾಯದ 19 ಗುಡಿಸಲುಗಳನ್ನು 2000ನೇ ಇಸ್ವಿ ಆಗಸ್ಟ್  ಮೊದಲ ವಾರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಮಾನುಷವಾಗಿ ತೆರವುಗೊಳಿಸಿದ್ದರು. ‘‘ನೀವಿರುವ ಮಾಳ ನಿಮ್ಮದಲ್ಲ. ಅದು ನಮ್ಮದು, ಅಂದರೆ ಅರಣ್ಯ ಇಲಾಖೆಗೆ ಸೇರಿದ್ದು. ನೀವೇಕೆ ಇಲ್ಲಿ ಬಂದು ಶೆಡ್ ಹಾಕಿಕೊಂಡು ವಾಸಿಸುತ್ತಿರುವಿರಿ?’’ ಎಂಬ ಇಲಾಖೆ ಅಧಿಕಾರಿಗಳ ದರ್ಪದ ಮಾತಿನ ಮುಂದೆ, ನಾಗರಹೊಳೆ ಕಾಡಿನ ಮಕ್ಕಳು ಅಸಹಾಯಕರಾಗಿದ್ದರು. ಕಾಡಿನೊಳಗಿಂದ ಕಾಡಂಚಿಗೆ ಓಡಿಸಿ, ಬಳಿಕ ಆ ನೆಲವೂ ನಿಮ್ಮದಲ್ಲ ಎಂದರೆ, ಅವರಿಗಾದರೂ ಅಸಹಾಯಕತೆ ಬಿಟ್ಟು ಇನ್ನೇನು ಇರಲು ಸಾಧ್ಯ?

ನಿಮಗೆ ಹೀಗೆಲ್ಲಾ ಹೇಳಿದರೆ ಗೊತ್ತಾಗುವುದಿಲ್ಲ,’’ ಎಂಬ ಬೆದರಿಕೆಯ ಮಾತಿಗೆ ಗಿರಿಜನರು ಹೆದರಿದ್ದರು. ಸಮೀಪದಲ್ಲಿಯೇ ತಮ್ಮ ಮೇಲೆ ಕ್ರೌರ್ಯವೊಂದು ದಾಳಿಯಿಡಲಿದೆ ಎಂಬುದು ಅವರಿಗೆ ಗೊತ್ತಿತ್ತೆನೊ. ಅಂತೆಯೇ ಅದೊಂದು ದಿನ ಮಟ ಮಟ ಮಧ್ಯಾಹ್ನವೇ ಮಾಳಕ್ಕೆ ನುಗ್ಗಿದ ಅರಣ್ಯ ಇಲಾಖೆ ಅಧಿಕಾರಿಗಳು, ಅಲ್ಲಿದ್ದ ಗುಡಿಸಲುಗಳನ್ನು ಕಿತ್ತುಹಾಕಿ, ಅದಕ್ಕೆಲ್ಲಾ ಬೆಂಕಿ ಇಟ್ಟರು. ಹೊಸ ಸಿನಿಮಾ ಜೈ ಭೀಮ್‌ನಲ್ಲಿ ಪೊಲೀಸರು, ಇರುಳರ ಹಾಡಿಗೆ ನುಗ್ಗಿ ನಡೆಸಿದ ಕ್ರೌರ್ಯದಂತೆಯೇ, ಅಂದು ಮೈಸೂರು ಜಿಲ್ಲೆಯ ಸೋಲಿಗರ ಮಾಳದಲ್ಲಿ ಹಿಂಸೆ ನರ್ತಿಸಿತ್ತು !

ಘನಘೋರವಾದ ಈ ಕೃತ್ಯಕ್ಕೆ ಕಾರಣ ಏನು ಗೊತ್ತೆ? 1972ರ ವನ್ಯಜೀವಿ ಕಾಯಿದೆ ಜಾರಿಗೆ ಬಂದ ಬಳಿಕ ಮೈಸೂರು ಜಿಲ್ಲೆಯಲ್ಲಿರುವ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿರುವ ಗಿರಿಜನರನ್ನು ಅರಣ್ಯ ಇಲಾಖೆ ಬಲವಂತವಾಗಿ ಹೊರಹಾಕಲಾರಂಭಿಸಿತು. ಕಾಡಿನ ಮಕ್ಕಳು ನಾವು, ಹೋಗುವುದಾದರೂ ಎಲ್ಲಿಗೆ ಎಂದು ಪ್ರಶ್ನಿಸಿದಾಗ, ಕಾಡಂಚಿನಲ್ಲಿ ಭೂಮಿ ಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ಈ ಮಾತನ್ನು ನಂಬಿಯೇ ಕಾಡಿನೊಳಗಿದ್ದ 19 ಸೋಲಿಗರ ಕುಟುಂಬಗಳು, ಕಾಡಂಚಿನಲ್ಲಿದ್ದ ಒಂದು ಪ್ರದೇಶಕ್ಕೆ ಬಂದರು. ವರುಷದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿಂದಲೂ ಓಡಿಸಿದಾಗ, ಮಜ್ಜನಗುಪ್ಪೆ ಮಾಳಕ್ಕೆ ಬಂದು ಗೂಡು ಕಟ್ಟಿಕೊಂಡು, ಅಲ್ಲಿಯೇ ಇದ್ದ ಗಿಡಗಂಟಿಗಳನ್ನು ಕಿತ್ತು ಕೃಷಿ ಮಾಡಲಾರಂಭಿಸಿದರು. ಸ್ವಲ್ಪದಿನದ ಬಳಿಕ ಅರಣ್ಯ ಇಲಾಖೆ ಅದಕ್ಕೂ ಕೊಕ್ಕೆ ಹಾಕಿತು, ನೀವು ಮಜ್ಜನಗುಪ್ಪೆ ಮಾಳದಲ್ಲೂ ಇರುವಂತಿಲ್ಲ ಎಂದು ರ್ಮಾನು ಹೊರಡಿಸಿತು. ಅವರು ಹೋಗುವುದಾದರೂ ಎಲ್ಲಿಗೆ ? ಬಳಿಕ ನಡೆದಿದ್ದೆ ಹಾಡಿಗೆ ಬೆಂಕಿ ಮತ್ತು ಹಿಂಸೆ.

ಇತ್ತೀಚಿಗಷ್ಟೇ ತೆರೆಕಂಡು, ಎಲ್ಲೆಡೆ ಸದ್ದು ಮಾಡುತ್ತಿರುವ ಜೈ ಭೀಮ್ ಸಿನಿಮಾ ತಮಿಳುನಾಡಿನ ಬುಡಕಟ್ಟು ಸಮುದಾಯ ಇರುಳರ ಮೇಲೆ ಪೊಲೀಸರು ಸುಳ್ಳು ಕೇಸು ಹಾಕಿ ಹಿಂಸಿಸಿದ ನೈಜ ಘಟನೆ ಆಧರಿಸಿದ ಕಥೆ. ಹೆಚ್ಚು ಕಡಿಮೆ ಈ ಕಥೆ ನಡೆದ 1990ರ ದಶಕದ ಆಸುಪಾಸಿನಲ್ಲಿಯೇ, ಕರ್ನಾಟಕದ ನೆಲದಲ್ಲಿಯೂ ಇಲ್ಲಿನ ಗಿರಿಜನರ ಮೇಲೂ, ಅವರ ಹಕ್ಕಿನ ಸೂರಿಗಾಗಿ ಹಿಂಸೆ ನಡೆದಿದೆ. ಸಿನಿಮಾದ್ದು ಒಂದೆರಡು ಕುಟುಂಬದ ಕಥೆಯಾದರೆ, ಇಲ್ಲಿಯದು ಸಾವಿರಾರು ಆದಿವಾಸಿ ಕುಟುಂಬಗಳ ವ್ಯಥೆ. ಮಜ್ಜನಗುಪ್ಪೆಯಲ್ಲಿ ನಡೆದ ದೈಹಿಕ ಹಿಂಸೆ ಎಲ್ಲ ಕಡೆ ನಡೆಯದಿದ್ದರೂ, ಮೂರು ದಶಕದಿಂದ ಅವರಿಗೆ ನೀಡುತ್ತಿರುವ ಮಾನಸಿಕ ಹಿಂಸೆ ಮಾತ್ರ ಅದಕ್ಕಿಂತಲೂ ಘೋರ. ಶತ ಶತಮಾನಗಳಿಂದ ಕಾಡಿನಲ್ಲಿದ್ದ  ಗಿರಿಜನರನ್ನು ಕಾಡಿನಿಂದ ಹೊರದಬ್ಬಿ, ಅವರಲ್ಲಿ ಬಹುತೇಕರಿಗೆ ಇನ್ನೂ ಪುನರ್ವಸತಿಯನ್ನೇ ಕಲ್ಪಿಸಿಲ್ಲ. ಸೂರು ಮತ್ತು ಗೇಣಿಗಾಗಿ ಇಲ್ಲಿನ ಗಿರಿಜನರು ನಡೆಸುತ್ತಿರುವ ಹೋರಾಟ, ಯಾರಾದರೂ ನಿರ್ಮಿಸಿದರೆ ಜೈ ಭೀಮ್‌ನಂಥ ಸಿನಿಮಾಗೆ ದೊಡ್ಡ ವಸ್ತುವೇ ಆಗುತ್ತದೆ !

ಕೃಪೆ-internet

ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳ 450 ಹಾಡಿಗಳು ಸೇರಿದಂತೆ ಕರ್ನಾಟಕದ ಪಶ್ಚಿಮಘಟ್ಟ ಸಾಲಿನ 9 ಜಿಲ್ಲೆಗಳಲ್ಲಿ  ಸುಮಾರು 1300 ಹಾಡಿಗಳಿವೆ. ಇಲ್ಲೆಲ್ಲಾ ಸೋಲಿಗರು, ಜೇನು ಕುರುಬರು, ಬೆಟ್ಟ ಕುರುಬರು, ಎರವರು, ಇರುಳಿಗರು, ಮಲೆ ಕುಡಿಯರು, ಕೊರಗರು, ಹಸಲರು, ಸಿದ್ದಿಗಳು ಸೇರಿದಂತೆ ಹತ್ತಾರು ರೀತಿಯ ಬುಡಕಟ್ಟು ಸಮುದಾಯಗಳಿವೆ. ಇವರೆಲ್ಲರೂ ತಮ್ಮ ಜೀವನೋಪಾಯಕ್ಕಾಗಿ ತಲೆ ತಲಾಂತರದಿಂದಲೂ ಅರಣ್ಯವನ್ನೆ ಅವಲಂಬಿಸಿದ್ದಾರೆ. ಬುಡಕಟ್ಟು ಜನರು ವಾಸಿಸುವ ಈ ವಸತಿ ಪ್ರದೇಶಗಳನ್ನು ಹಾಡಿ, ಪೋಡಿ, ಮಾಳ, ದೊಡ್ಡಿ ಎಂದೆಲ್ಲಾ ಕರೆಯಲಾಗುತ್ತದೆ. ಆದರೆ, ಈ ಯಾವುದೇ ವಸತಿ ಪ್ರದೇಶಗಳು ಕಂದಾಯ ಇಲಾಖೆಯಿಂದ ಮಾನ್ಯತೆ ಪಡೆದಿಲ್ಲ. ಹಾಗಾಗಿ, ಸರಕಾರದ ಮೂಲ ಸೌಕರ್ಯಗಳಿಂದಲೂ ಇವೆಲ್ಲವೂ ವಂಚಿತ.

ಈ ಪೈಕಿ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಹೊರಹಾಕಿದ ಗಿರಿಜನರ ವ್ಯಥೆಯನ್ನಷ್ಟೇ ನಾನಿಲ್ಲಿ ದಾಖಲಿಸಿರುವೆ. ಇದಲ್ಲೆವೂ ಶುರುವಾಗುವುದು 1990ರ ದಶಕದಲ್ಲಿ. 1972ರ ವನ್ಯಜೀವಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾದ ಅರಣ್ಯ ಇಲಾಖೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ನರ ಮನುಷ್ಯರು ವಾಸಿಸುವಂತಿಲ್ಲ ಎಂಬ ನಿಯಮ ಮುಂದಿಟ್ಟುಕೊಂಡು, ಕಾಡಿನೊಳಗಿದ್ದ  ಸುಮಾರು 5 ಸಾವಿರ ಕುಟುಂಬಗಳನ್ನು, ಯಾವುದೇ ಪುನರ್ವಸತಿ ನೀಡದೇ, ಕಾಡಿನಿಂದ ಹೊರದಬ್ಬಿತು. ಇಲಾಖೆ ಹೀಗೆ ಮಾಡುವಂತಿರಲಿಲ್ಲ.

ರಾಷ್ಟ್ರೀಯ ಉದ್ಯಾನದಿಂದ ಹೊರಹಾಕಿದ ಗಿರಿಜನರಿಗೆ ಒಂದು ಪುಟ್ಟಮನೆ, ಒಂದಿಷ್ಟು ಕಂದಾಯ ಭೂಮಿ ಸೇರಿದಂತೆ ಬದುಕಲು ಬೇಕಾದ ಕನಿಷ್ಠ ಅವಶ್ಯಕತೆ ಹಾಗೂ ಸೌಲಭ್ಯಗಳನ್ನು  ಒಳಗೊಂಡ ಒಂದು ಪ್ಯಾಕೇಜ್ ಅನ್ನು ಸರಕಾರ ಘೋಷಿಸಿತ್ತು. ಆದರೆ, ಈ ಪ್ಯಾಕೇಜ್ ಬಹುತೇಕರಿಗೆ ಸಿಗಲೇ ಇಲ್ಲ. ಇದರಿಂದ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು(ಎನ್‌ಜಿಒ) ಸಿಟ್ಟಿಗೆದ್ದವು. ಗಿರಿಜನರ ನಡುವೆ ಕೆಲಸ ಮಾಡುತ್ತಿದ್ದ ಎನ್‌ಜಿಒಗಳ ನೇತೃತ್ವದಲ್ಲಿ ಗಿರಿಜನರ ಪುನರ್ವಸತಿಗಾಗಿ ಹೋರಾಟ ಶುರುವಾಯಿತು. ‘‘ಕಾಡು ನಮ್ಮದು, ಕಾಡಿನ ಸಂಪನ್ಮೂಲ ನಮ್ಮ ಹಕ್ಕು, ನಾವು ಕಾಡಿನ ಮಕ್ಕಳು’’ ಎಂಬ ಘೋಷಣೆಯಡಿ ಕಾಡಿಗೆ ನುಗ್ಗುವ ಪ್ರಯತ್ನವೂ ನಡೆಯಿತು.

ಈ ನಡುವೆ 1999ರಲ್ಲಿ, ಗಿರಿಜನರಿಗೆ ಪುನರ್ವಸತಿ ನೀಡದೇ ಅವರನ್ನು ಕಾಡಿನಿಂದ ಹೊರದಬ್ಬಿರುವುದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂದು ಡೀಡ್ ಮತ್ತು ಬುಡಕಟ್ಟು ಕೃಷಿಕರ ಸಂಘ ಎಂಬ ಎನ್‌ಜಿಒಗಳು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದವು. ಅರಣ್ಯದಿಂದ ಹೊರದಬ್ಬಿರುವ 5 ಸಾವಿರ ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿ ಎಂಬ ಬೇಡಿಕೆ ಮುಂದಿಟ್ಟಿತು. ಇಷ್ಟೊಂದು ಜನರನ್ನು ಹೊರದಬ್ಬಿಲ್ಲ ಎಂದು ಇಲಾಖೆ ವರಾತ ತೆಗೆಯಿತು. ಇದರ ಸತ್ಯಾಸತ್ಯತೆ ಅರಿಯುವ ಉದ್ದೇಶದಿಂದ ಕೋರ್ಟ್, ತಾನೇ ಒಂದು ಸ್ವತಂತ್ರವಾದ ಸಮಿತಿ ರಚಿಸಿತು. ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ಮುಜಾರ್ ಅಸಾದಿ ನೇತೃತ್ವದ ಈ ಸಮಿತಿ ವರುಷಗಳ ಕಾಲ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಮೈಸೂರು ಮತ್ತು ಕೊಡಗು ಜಿಲ್ಲೆಯ 3418 ಆದಿವಾಸಿ ಕುಟುಂಬಗಳಿಗೆ ಸರಕಾರ ಪುನರ್ವಸತಿ ಕಲ್ಪಿಸಬೇಕು ಎಂದು ಶಿಫಾರಸು ಮಾಡಿತು.

ಇಷ್ಟು ಮಾತ್ರವಲ್ಲ, ಆದಿವಾಸಿಗಳು ಕನಿಷ್ಠ ಘನತೆಯಿಂದ ಕೂಡಿದ ಬದುಕು ಸಾಗಿಸಲು ಪೂರಕವಾದ 30ಕ್ಕೂ ಹೆಚ್ಚು ಶಿಫಾರಸುಗಳನ್ನೂ ಪ್ರೊ.ಅಸಾದಿ ಸಮಿತಿ ಪಟ್ಟಿ ಮಾಡಿದೆ. ಈ ಎಲ್ಲ ಅಧ್ಯಯನ, ವಾದ-ವಿವಾದವನ್ನು ಆಲಿಸಿದ ಹೈಕೋರ್ಟ್ 2009ರಲ್ಲಿ, ಎಲ್ಲ ಆದಿವಾಸಿ ಕುಟುಂಬಗಳಿಗೆ ಸರಕಾರ ಪುನರ್ವಸತಿ ಕಲ್ಪಿಸಬೇಕು ಎಂದು ಮಹತ್ವದ ತೀರ್ಪು ನೀಡಿದೆ. ಬೆನ್ನಲ್ಲೆ ಪ್ರೊ.ಅಸಾದಿ ಸಮಿತಿ ಮಾಡಿರುವ ಎಲ್ಲ ಶಿಫಾರಸುಗಳನ್ನು ಜಾರಿಗೊಳಿಸುವುದಾಗಿ ರಾಜ್ಯ ಸರಕಾರವೂ ಒಪ್ಪಿಕೊಂಡಿತು. ಹೈ ತೀರ್ಪು ಪ್ರಕಟಗೊಂಡು 13 ವರುಷಗಳೇ ಆಗಿವೆ. ಆದರೂ, ಸರಕಾರ ತಾನು ಒಪ್ಪಿಕೊಂಡಿರುವ 3418 ಕುಟುಂಬಗಳಿಗೆ ಇನ್ನೂ ನ್ಯಾಯಯುತವಾಗಿ ಪುನರ್ವಸತಿ ಕಲ್ಪಿಸಿಲ್ಲ.

ಇದೆಲ್ಲದರ ನಡುವೆ ಕೇಂದ್ರ ಸರಕಾರ 2006ರಲ್ಲಿ ಅರಣ್ಯ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿದೆ. ಇದರ ಪ್ರಕಾರ, ಆದಿವಾಸಿಗಳಿಗೆ, ಅರಣ್ಯದಲ್ಲಿ ನೆಲೆಸುವ ಹಕ್ಕಿದೆ. ಜೀವನ ನಿರ್ವಹಣೆಗೆ ಕಾಡಿನೊಳಗೆ ಗೆಡ್ಡೆ ಗೆಣಸು, ಜೇನು ಸಂಗ್ರಹಿಸುವ ಸಾಮುದಾಯಿಕ ಹಕ್ಕೂ ಒಲಿದಿದೆ. ಕಾಡಿನೊಳಗೆ ದೇವಾಲಯ, ಸ್ಮಶಾನ, ಕೆರೆಕಟ್ಟೆ ಬಳಸುವ ಪಾರಂಪರಿಕ ಹಕ್ಕಿನ ಒಡೆತನವೂ ಅವರಿಗಿದೆ. ಹಾಗಾಗಿ, ನಾವು ಕಾಡಿನಿಂದ ಹೊರಬರುವುದಿಲ್ಲ ಎಂದು ಆದಿವಾಸಿಗಳು ಪಟ್ಟು ಹಿಡಿದು, ಅದರ ಹಕ್ಕಿಗಾಗಿಯೂ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದೆಲ್ಲವೂ ಇನ್ನೂ ಕಾಗದದಲ್ಲಿದೆ. ಜಾರಿಗೆ ಬಂದಿಲ್ಲ. ಆದರೂ ಮೈಸೂರು ಭಾಗದ ಆದಿವಾಸಿಗಳು ಬಂಡಾಯವೆದ್ದಿಲ್ಲ. ಗಾಂಧಿ ಮಾರ್ಗದಲ್ಲಿಯೇ ಶಾಂತಿಯುತವಾಗಿಯೇ ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ, ಅವರ ಸುದೀರ್ಘ ಹೋರಾಟ, ಅಲ್ಲಿನ ಬಡತನ, ಅನುಭವಿಸುತ್ತಿರುವ ರೋಗ-ರುಜಿನ, ಹಸಿವಿನಿಂದಾಗುತ್ತಿರುವ ಸಾವು-ನೋವು, ಜೀವಂತವಿರುವ ವೌಢ್ಯ, ಕುಡಿತದಂಥ ಕೆಟ್ಟ ಚಟ-ಹಾಡಿಯ ಯಾವ ಸಂಗತಿಯೂ ಹೊರಜಗತ್ತಿಗೆ ಗೊತ್ತಾಗುತ್ತಿಲ್ಲ. ಇದೆಲ್ಲವೂ ಬದುಕಿನ ಕರ್ಮ ಎಂದೇ ಆದಿವಾಸಿಗಳು ಬದುಕು ಸಾಗಿಸುತ್ತಿದ್ದಾರೆ.  ಇದೆಲ್ಲದರ ಅರ್ಥ ಏನೂ ಆಗಿಯೇ ಇಲ್ಲ ಎಂದೇನಿಲ್ಲ. ಒಂದಿಷ್ಟು ಎನ್‌ಜಿಒಗಳು ಹೋರಾಟ ಹಾಗೂ ಕೆಲವು ಅಧಿಕಾರಿಗಳಿಂದ 600 ಆದಿವಾಸಿ ಕುಟುಂಬಗಳಿಗೆ ಪುನರ್ವಸತಿಯ ಹಕ್ಕು ಸಿಕ್ಕಿದೆ. ಸಿಗದೇ ಇರುವ ಕುಟುಂಬಗಳ ಪಟ್ಟಿಯ ಸಂಖ್ಯೆ 5 ಸಾವಿರಕ್ಕೂ ಅಧಿಕ. ಎರಡು ದಶಕಗಳ ಹಿಂದೆ ಅರಣ್ಯ ಇಲಾಖೆ ದೌರ್ಜನ್ಯಕ್ಕೆ ತುತ್ತಾದ ಮಜ್ಜನಗುಪ್ಪೆಯ ಅಸಹಾಯಕ ಸೋಲಿಗರೂ ಈ ಪಟ್ಟಿಯಲ್ಲಿದ್ದಾರೆ. ಭೂಮಿ ಕೊಡಿಸಿ ಎಂದು ಹೈಕೋರ್ಟ್‌ಗೆ ಪತ್ರ ಬರೆದು, ಅದರ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಇವರೆಲ್ಲರೂ ‘ಜೈ ಭೀಮ್’ ಎಂದು ಹೇಳುವುದು ಯಾವಾಗ?

-ಚೀ ಜ ರಾಜೀವ

ಕೃಪೆ : ವಿಜಯ ಕರ್ನಾಟಕ