ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆಪ್ಟೆಂಬರ್ 13,2023(www.justkannada.in): ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ದಕ್ಷಿಣ ಭಾರತ  ರಾಜ್ಯಗಳ ಪೋಲೀಸ್ ಮಹಾನಿದೇರ್ಶಕರ ಸಮನ್ವಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಹಗಲಿರುಳು ಎನ್ನದೇ ಕಾರ್ಯನಿರ್ವಹಿಸುವ ಪೋಲಿಸ್ ಪಡೆಗಳ ಕಾರ್ಯವನ್ನು  ಶ್ಲಾಘಿಸಿದರು.

ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ  ನಿಟ್ಟಿನಲ್ಲಿ ಪೋಲಿಸರು ಕ್ರಿಯಾತ್ಮಕವಾಗಿರಬೇಕು. ಕಳೆದ ಹಲವು ವರ್ಷಗಳಲ್ಲಿ ಸೈಬರ್ ದಾಳಿಗಳು ವಿವಿಧ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಆನ್ ಲೈನ್ ಮೂಲಕ ಮೋಸ ಮಾಡುವುದು ಅಧಿಕವಾಗಿದೆ. ಇದು ವ್ಯಕ್ತಿಗತವಾಗಿ ಹಾನಿಯಲ್ಲದೇ ರಾಷ್ಟ್ರೀಯ ಭದ್ರತೆಗೂ ಅಪಾಯಕಾರಿಯಾಗಿದೆ ಎಂದರು.

ಅತ್ಯಾಧುನಿಕ ವಿಧಿವಿಜ್ಞಾನ ಸಾಧನಗಳು ಸೈಬರ್ ಅಪರಾಧಿಗಳನ್ನು ಮಟ್ಟಹಾಕಲು ಸಹಾಯಕವಾಗಿವೆ. 2003 ರಲ್ಲಿ ಸೈಬರ್ ಅಪರಾಧಗಳ ಪೋಲೀಸ್ ಠಾಣೆಯನ್ನು ತೆರೆದ ಮೊದಲ ರಾಜ್ಯ ಕರ್ನಾಟಕ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸೈಬರ್ ಅಪರಾಧ ತಡೆಗಾಗಿ ಸಿಇಎನ್ ಪೋಲಿಸ್ ಠಾಣೆಗಳನ್ನು ರಾಜ್ಯ ಹೊಂದಿದೆ. ಇಂಥ ಪ್ರಕರಣಗಳನ್ನು ನಿರ್ವಹಿಸಲೆಂದೇ ಸೈಬರ್ ಠಾಣೆಯ ಪೋಲಿಸ್ ಅಧಿಕಾರಿಗಳು ವಿಶೇಷ ತರಬೇತಿ ಪಡೆದಿದ್ದಾರೆ ಎಂದರು.

ಆಂತರಿಕ ಭದ್ರತೆ

ನಮ್ಮ ದೇಶದ ಬುನಾದಿ ಹಾಗೂ ಸಮಾಜದ ಸಂರಚನೆಗೆ ಸವಾಲಾಗಿರುವ ಆಂತರಿಕ ಭದ್ರತಾ ವಿಷಯಗಳು  ತಮ್ಮ ಸಂಪೂರ್ಣ ಗಮನ ಮತ್ತು  ಸಹಯೋಗ ಅಗತ್ಯ ಎಂದರು. ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾರ್ವಜನಿಕ ವ್ಯವಸ್ಥೆ ಹಾಗೂ ತಮ್ಮ ಪ್ರದೇಶದ ಪ್ರತಿಯೊಬ್ಬರ ಸುರಕ್ಷತೆ ಹಾಗೂ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಪೋಲೀಸರಿಂದ ಅಚಲ  ಬದ್ಧತೆ, ಸಮರ್ಪಣೆ ಹಾಗೂ ಕರ್ತವ್ಯಪರತೆಯನ್ನು ನಿರೀಕ್ಷಿಸಲಾಗುತ್ತದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ಪೋಲಿಸ್ ತಂತ್ರಗಾರಿಕೆಯಲ್ಲಿ ನಿರಂತರ ಮಾರ್ಪಾಡು ಅಗತ್ಯ.

ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಪರಾಧಿ ಚಟುವಟಿಕೆಗಳಿಂದ ಹಿಡಿದು ಡಿಜಿಟಲ್ ವಲಯದ ಬೆದರಿಕೆಗಳನ್ನೂ ದೇಶ ಎದುರಿಸುತ್ತಿದೆ. ಆಧುನಿಕ ಸಮಾಜದ ಸಂಕೀರ್ಣತೆಗಳೂ ಕೂಡ ಹೊಸ ಮಾದರಿಯ ಅಪರಾಧಗಳನ್ನು ಹೆಚ್ಚಿಸಿವೆ. ಇದರಿಂದಾಗಿ ಪೋಲಿಸ್ ತಂತ್ರಗಾರಿಕೆಯಲ್ಲಿಯೂ ನಿರಂತರವಾಗಿ ಮಾರ್ಪಾಡು ತರಬೇಕಾದ ಅವಶ್ಯಕತೆ ಇದೆ ಎಂದರು.

ಕಾನೂನು ಪಾಲಕರಾಗಿ ತಾವುಗಳು ಸಮಾಜದ ಸ್ವಾಸ್ವ್ಥವನ್ನು ಹಾಳು ಮಾಡುವವರಿಂದ, ಶಾಂತಿ ಕದಡುವವರಿಗಿಂತ ಒಂದು ಹೆಜ್ಜೆ ಮುಂದಿರಿರಬೇಕಲ್ಲದೇ ಶೀಘ್ರವಾಗಿ ಹೊಂದಿಕೊಂಡು ನವೀನ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಮಾದಕವಸ್ತು ನಿಯಂತ್ರಣ

ಮಾದಕವಸ್ತು ನಿಯಂತ್ರಣದಲ್ಲಿ ಕರ್ನಾಟಕ ರಾಜ್ಯ ಪೋಲಿಸ್ ಅತ್ಯುತ್ತಮ ಕೆಲಸ ಮಾಡಿದ್ದು ಅಂತರರಾಷ್ಟ್ರೀಯ ಮಾದಕವಸ್ತು ಜಾಲವನ್ನು ಪತ್ತೆ ಹಚ್ಚಲಾಗಿದೆ. ಡಾರ್ಕ್‍ವೆಬ್ ಮೂಲಕ ನಡೆಸುವ ಡ್ರಗ್ಸ್ ಜಾಲವನ್ನೂ ಕೂಡ ಬೇಧಿಸಲಾಗಿದೆ ಎಂದರು.  ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲಾಗಿದ್ದರೂ, ಕರ್ನಾಟಕದ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ನಡುವೆ  ಈ ಸಮಸ್ಯೆಯನ್ನು ಮಟ್ಟಹಾಕಲು ಹೆಚ್ಚಿನ ಸಹಕಾರ ಅಗತ್ಯ  ಎಂದು ಸಿದ‍್ಧರಾಮಯ್ಯ ತಿಳಿಸಿದರು.

ಭಯೋತ್ಪಾದನೆ ನಿಗ್ರಹ.

ಭಯೋತ್ಪದನಾ ಚಟುವಟಿಕೆಗಳು ರಾಜ್ಯದಲ್ಲಿಯೂ ನಡೆದಿದ್ದು, ಇವುಗಳ ನಿಗ್ರಹಕ್ಕೆ ಮಾಹಿತಿ ಸಂಗ್ರಹಣೆ, ಸಮನ್ವಯ, ಸಹಕಾರ ಹಾಗೂ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮ ಅಗತ್ಯ ಎಂದರು.

ಅಂತರ ರಾಜ್ಯಗಳ ಸಮನ್ವಯ.

ಅಂತರ ರಾಜ್ಯ ಅಪರಾಧಿಗಳು ಹಾಗೂ ಗ್ಯಾಂಗ್ ಗಳ ಮೇಲೆ ನಿಗಾ ಅಗತ್ಯವೆಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಈ ಕುರಿತು ವಿವಿಧ ರಾಜ್ಯಗಳ ನಡುವೆ ಸಮನ್ವಯ ಹಾಗೂ ಸಹಕಾರವಿದ್ದರೆ  ಅಪರಾಧಿಗಳನ್ನು ಮಟ್ಟಹಾಕುವುದು ಸುಲಭ ಎಂದರು.

ತೀವ್ರಗಾಮಿಗಳ ಪ್ರತ್ಯೇಕತೆಗೆ ಕ್ರಮ

ಜೈಲುಗಳಲ್ಲಿ ತೀವ್ರಗಾಮಿಗಳ ಪ್ರತ್ಯೇಕತೆಗೆ ಕ್ರಮ ಕೈಗೊಳ್ಳುವುದು ಅವಶ್ಯಕ. ಪೋಲಿಸ್ ಅಧಿಕಾರಿಗಳಿಗೆ  ತಂತ್ರಜ್ಞಾನದ ಬಳಕೆ, ತರಬೇತಿ, ಸಾಮಥ್ರ್ಯ ವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ದಕ್ಷಿಣ ಭಾರತ ರಾಜ್ಯಗಳ ಡಿಜಿಪಿಗಳ ಸಮ್ಮೇಳನದಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದೇನೆ. ಈ ಸಮ್ಮೇಳನ ಅಪರಾಧ ಪತ್ತೆ ಮತ್ತು ಅಪರಾಧ ನಿಯಂತ್ರಣದಲ್ಲಿ ದಕ್ಷಿಣ ಭಾರತ ರಾಜ್ಯಗಳ ನಡುವೆ ಇನ್ನಷ್ಟು ಹೆಚ್ಚಿನ ಸಹಕಾರ ಮತ್ತು ಸಮನ್ವಯ ಏರ್ಪಡಿಸಿಕೊಳ್ಳಲು ನೆರವಾಗುತ್ತದೆ ಎನ್ನುವ ನಂಬಿಕೆ ನನಗಿದೆ. ಅಪರಾಧ ಜಗತ್ತಿಗೆ ಗಡಿಗಳಿಲ್ಲ. ಮಿತಿಯೂ ಇಲ್ಲ. ಅಪರಾಧಗಳನ್ನು ಸಮರ್ಪವಾಗಿ ನಿಗ್ರಹಿಸಲು ನಾನಾ  ರಾಜ್ಯಗಳ ನಡುವೆ ಮಾಹಿತಿ, ಸಂಪನ್ಮೂಲ ಮತ್ತು ತಂತ್ರಗಾರಿಕೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಅಪರಾಧ ಜಗತ್ತಿಗೆ ಗಡಿಗಳು ಇಲ್ಲದಿರುವಾಗ ಇದನ್ನು ನಿಗ್ರಹಿಸುವುದರಲ್ಲೂ ಭದ್ರತಾ ಪಡೆಗಳು, ತನಿಖಾ ಸಂಸ್ಥೆಗಳ ನಡುವೆ ಗಡಿಗಳು ಇರಬಾರದು ಎಂದರು.

ದಕ್ಷಿಣ ಭಾರತ ತನ್ನ ಸಾಂಸ್ಕೃತಿಕ ವೈವಿಧ್ಯತೆ, ಭಿನ್ನ ಭಾಷೆಗಳು ಮತ್ತು ಭೌಗೋಳಿಕತೆ ಕಾರಣದಿಂದ ಅಪರಾಧ ನಿಗ್ರಹದಲ್ಲಿ ಹಲವು ಸವಾಲುಗಳನ್ನು ಮುಂದಿಡುತ್ತಿದೆ. ಮಾದಕ ವಸ್ತು ಕಳ್ಳಸಾಗಣೆ, ಮಾನವ ಕಳ್ಳ ಸಾಗಣೆ, ಸಂಘಟಿತ ಅಪರಾಧ, ಸೈಬರ್ ಕ್ರೈಂ ಸಮಾಜದ ಮತ್ತು ಸಮುದಾಯದ ಶಾಂತಿ ಮತ್ತು ಸುರಕ್ಷತೆಗೆ ಅಪಾಯವನ್ನು ತಂದೊಡ್ಡುತ್ತಿದೆ. ಈ ಅಪರಾಧಗಳೆಲ್ಲಾ ರಾಜ್ಯಗಳ ಗಡಿ ದಾಟಿಯೂ ಕಾರ್ಯಾಚರಣೆ ಮಾಡುತ್ತಿರುವುದರಿಂದ ಇವುಗಳ ನಿಗ್ರಹದಲ್ಲೂ ಅಂತರ ರಾಜ್ಯ ಪೊಲೀಸ್ ತಂಡಗಳ ನಡುವೆ ಸಮನ್ವಯ ಮತ್ತು ಸಹಕಾರ ಅಗತ್ಯ. ಜಂಟಿ ಕಾರ್ಯಾಚರಣೆಗಳು ಅಪರಾಧಿಗಳ ಬಲಕುಂದಿಸಲು ಸಹಕಾರಿಯಾಗಬಹುದು. ವಿವಿಧ ಕಾನೂನು ರಕ್ಷಣೆಯ ಸಂಸ್ಥೆಗಳು ನಿರಂತರವಾಗಿ ಅಪರಾಧಿಗಳನ್ನು ಮಟ್ಟಹಾಕಲು ಜೊತೆಯಾಗಿ ಕೆಲಸ ಮಾಡುತ್ತಿವೆ ಎಂಬ ವಿಷಯವೇ ಅವರನ್ನು ಎದೆಗುಂದಿಸಬಹುದು. ಇದರೊಂದಿಗೆ ಅಂತರರಾಜ್ಯ ಸಮನ್ವಯವು ಅಪರಾಧ ತಡೆಗಟ್ಟುವಲ್ಲಿನ ಉತ್ತಮ ಹಾಗೂ ವಿನೂತನ ಮಾದರಿಗಳನ್ನು ಹಂಚಿಕೊಳ್ಳಲು ವೇದಿಕೆಯಾಗಲಿದೆ . ಪ್ರತಿ ರಾಜ್ಯವೂ ನಿರ್ದಿಷ್ಟ ಅಪರಾಧವನ್ನು ತಡೆಗಟ್ಟಲು ಒಂದು ಯಶಸ್ವಿ ಮಾದರಿಯ ಕಾರ್ಯತಂತ್ರವನ್ನು ರೂಪಿಸಿರಬಹುದು ಎಂದು ಸಿದ್ಧರಾಮಯ್ಯ ತಿಳಿಸಿದರು.

ಈ ವೇಳೆ ಗೃಹ ಸಚಿವರಾದ ಜಿ.ಪರಮೇಶ್ವರ್ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಉಪಸ್ಥಿತರಿದ್ದರು.

Key words: Investigating -agencies – one step -ahead of criminals- CM -Siddaramaiah