ಸಚಿವ ಸಂಪುಟದಿಂದ ಗೃಹಸಚಿವ ಅರಗ ಜ್ಞಾನೇಂದ್ರ ವಜಾಗೊಳಿಸುವಂತೆ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಆಗ್ರಹ.

ಮೈಸೂರು,ಆಗಸ್ಟ್,27,2021(www.justkannada.in):  ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಜನ ಪ್ರದೇಶಕ್ಕೆ ಹೋಗಬಾರದಿತ್ತು ಎಂಬ ಹೇಳಿಕೆ ಹಾಗೂ ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂಬ ಹೇಳಿಕೆಯನ್ನು ಗಮನಿಸಿದರೆ ಅರಗ ಜ್ಞಾನೇಂದ್ರ ಅವರು ಸಚಿವರಾಗಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿರುವುದರಿಂದ ಈ ಕೂಡಲೇ  ಅವರನ್ನ ಮುಖ್ಯಮಂತ್ರಿಗಳು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಆಗ್ರಹಿಸಿದ್ದಾರೆ.

ಈ ಕುರಿತು  ಮಾಧ್ಯಮ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್,  ಸಚಿವರ ಹೇಳಿಕೆಯಿಂದ ಮಹಿಳೆಯರ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಗೃಹ ಸಚಿವರಾಗಿ ನಿದ್ರೆ ಬರುತ್ತಿಲ್ಲ ಎಂಬ ಹೇಳಿಕೆ ಗೃಹ ಇಲಾಖೆಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸಿದೆ. ಧೈರ್ಯ, ಸಹಸ, ಮಾನವೀಯತೆ, ಇಡೀ ಸಮಾಜ ನೆಮ್ಮದಿಯಿಂದ ಬದುಕಲು ಸ್ಪೂರ್ತಿದಾಯಕವಾಗಿ ಗೃಹ ಸಚಿವರು ನಡೆದು ಕೊಳ್ಳಬೇಕಿತ್ತು. ಗೃಹಸಚಿವರ ಹೇಳಿಕೆಗಳು ಸಮಾಜದಲ್ಲಿ ಭಯ ಬರುವಂತೆ ಮಾಡಿದೆ. ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎನ್ನುವ ಅವರ ಹೇಳಿಕೆ ಅಪ್ರಬುದ್ಧ, ಬಾಲಿಶ ಹೇಳಿಕೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಚಾರ ಎಂದು ಕಿಡಿಕಾರಿದ್ದಾರೆ.

ಶೂಟೌಟ್ , ಗ್ಯಾಂಗ್ ರೇಪ್ ಪ್ರಕರಣದ ಬಳಿಕ ವಿಶ್ವವಿಖ್ಯಾತ ಮೈಸೂರಿಗೆ ಕಳಂಕ ಬಂದಂತಾಗಿದೆ. ಮಹಾರಾಜರ ಕಾಲದಿಂದಲೂ ಶಿಕ್ಷಣ, ಆರೋಗ್ಯ ಹಾಗೂ ಪ್ರವಾಸೋದ್ಯಮಕ್ಕೆ ದೇಶದ ಭೂಪಟದಲ್ಲಿ ವಿಶೇಷವಾದ ಸ್ಥಾನವಿದೆ. ಪ್ರವಾಸೋದ್ಯಮ ಲಕ್ಷಾಂತರ ಕುಟುಂಬಗಳು ಅವಲಂಬಿಸಿದೆ. ಇಂಥ ಘಟನೆಗಳಿಂದ ಮೈಸೂರಿನಲ್ಲಿ ಭಯ ಭೀತಿಗೆ ಒಳಗಾಗಿದ್ದಾರೆ. ಬಿಜೆಪಿ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇವತ್ತು ಕೂಡ ಬೆಳಗಾವಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಬೆಳಕಿಗೆ ಬಂದಿರುವುದು ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಸರ್ಕಾರವಿದ್ದಾಗ ಒಂದು ಸಣ್ಣ ಘಟನೆಯನ್ನು ಕೂಡ ಪ್ರಚೋದಿಸಿ ನಾವು ಮಹಿಳೆಯರ ಪರ ಎಂದು ಹೇಳುತ್ತಿದ್ದವರು. ನಾನು ಇಂದು ಜವಾಬ್ದಾರಿ ಸ್ಥಾನದಲ್ಲಿದ್ದೇನೆ ಎಂಬ ಅವರ ಇಬ್ಬಗೆ ನೀತಿಯನ್ನು ಸ್ಪಷ್ಟಪಡಿಸಿದೆ. ಮಹಿಳೆಯರ ಬಗ್ಗೆ ಶೋಭಾ ಕರಂದ್ಲಾಜೆಯವರಿಗೆ ಯಾವುದೇ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಮಾನವೀಯತೆಯ ಪದದ ಅರ್ಥವೇ ಬಿಜೆಪಿಗೆ ಗೊತ್ತಿಲ್ಲ ಎಂದು ಎಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.

Key words: KPCC -spokesperson- HA Venkatesh -demanded -home minister -Araga Gnanendra – Resignation