ಅಂತರ್ಜಾತಿ ದಂಪತಿಗಳು: ಕರ್ನಾಟಕದಲ್ಲಿ ಹಣಕಾಸಿನ ಪ್ರೋತ್ಸಾಹಧನದ ಕ್ಲೇಮ್‌ ಗಳಲ್ಲಿ ಇಳಿಕೆ.

ಬೆಂಗಳೂರು, ಸೆಪ್ಟೆಂಬರ್ 26, 2022 (www.justkannada.in): ರಾಜ್ಯ ಸರ್ಕಾರದ ವತಿಯಿಂದ ಅಂತರ್ಜಾತಿ ವಿವಾಹವಾಗಿರುವ ದಂಪತಿಗಳಿಗೆ ನೀಡುವ ಆರ್ಥಿಕ ಪ್ರೋತ್ಸಾಹಧನ ಕೋರಿಕೆಗಳು ಕಳೆದ ಮೂರು ವರ್ಷಗಳಿಂದ ಇಳಿಕೆಯಾಗಿವೆ. ಈ ಯೋಜನೆಯು, ದಂಪತಿಗಳಿಬ್ಬರ ಪೈಕಿ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಸೇರಿದವರಿಗೆ ಅನ್ವಯಿಸುತ್ತವೆ.

ಕಾರ್ಯಕರ್ತರ ಪ್ರಕಾರ, ಬಲಗೊಳ್ಳುತ್ತಿರುವ ಜಾತಿ ಪದ್ಧತಿಗಳು, ಸರ್ಕಾರದ ಕಾರ್ಯಕ್ರಮಗಳ ಕುರಿತು ಅರಿವಿನ ಕೊರತೆ ಹಾಗೂ ಕೋವಿಡ್ ಸಾಂಕ್ರಾಮಿಕಗಳಿಂದಾಗಿ ಈ ಯೋಜನೆಯ ಲಾಭಗಳ ಬೇಡಿಕೆ ಇಳಿಕೆಯಾಗಲು ಕಾರಣಗಳಂತೆ.

೨೦೧೮ರಲ್ಲಿ ಈ ಯೋಜನೆಯಲ್ಲಿ ಆಸಕ್ತಿ ಉತ್ತುಂಗದಲ್ಲಿತ್ತು. ಆಗ ಈ ೫,೨೭೩ ಜೋಡಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದರು. ಅದರ ಮುಂದಿನ ವರ್ಷ ಫಲಾನುಭವಿಗಳ ಪ್ರಮಾಣ ೪.೮%ರಷ್ಟು ಇಳಿಕೆಯಾಯಿತು. ೨೦೧೯ರ ಹೋಲಿಕೆಯಲ್ಲಿ, ೨೦೨೦ರಲ್ಲಿ ಫಲಾನುಭವಿಗಳ ಪ್ರಮಾಣ ೧೭%ರಷ್ಟು ಇಳಿಕೆಯಾಯಿತು. ಕಳೆದ ಡಿಸೆಂಬರ್ ತಿಂಗಳಲ್ಲಿ ಈ ಯೋಜನೆಯಡಿ ಅರ್ಹತೆ ಪಡೆದ ವಿವಾಹಗಳ ಸಂಖ್ಯೆ ಕೇವಲ ೨,೮೫೦. ಈ ಯೋಜನೆಯಡಿ, ವರ ಎಸ್‌ಸಿ/ಎಸ್‌ಟಿ ವರ್ಗದವರಾಗಿದ್ದರೆ ರೂ.೨.೫ ಲಕ್ಷ ಹಾಗೂ ವಧು ದಲಿತ ಸಮುದಾಯಕ್ಕೆ ಸೇರಿದ್ದರೆ ರೂ.೩ ಲಕ್ಷ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಅಂತರ್ಜಾತಿ ವಿವಾಹದ ಪ್ರಕರಣಗಳಲ್ಲಿ ವಧು ಅಥವಾ ವರ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ್ದು ಕುಟುಂಬಗಳ ವಿರೋಧದಿಂದಾಗಿ ಪ್ರತ್ಯೇಕವಾಗಿ ಜೀವಿಸುವಂತಹ ಪರಿಸ್ಥಿತಿಗಳು ಎದುರಾಗುವಂತಹ ಜೋಡಿಗಳಿಗೆ ಸಾಮಾಜಿಕ ಸ್ಥಿರತೆಯನ್ನು ಒದಗಿಸುವ ಉದ್ದೇಶದಿಂದ ಅವರಿಗೆ ಪ್ರೋತ್ಸಾಹಧನ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಉದಾಹರಣೆಗೆ ದಲಿತ ಕಾರ್ಯಕರ್ತರಾದ ವಿ.ಎಲ್. ನರಸಿಂಹಮೂರ್ತಿ ಮೂರು ವರ್ಷಗಳ ಹಿಂದೆ ಇತರೆ ಜಾತಿಯ ಹುಡುಗಿಯನ್ನು ವಿವಾಹವಾದರು. ಈಗಲೂ ಅವರ ವಿರುದ್ಧದ ಸಾಮಾಜಿಕ ಬಹಿಷ್ಕಾರ ಮುಂದುವರೆದಿದೆ. “ನನ್ನ ಮಡದಿಯ ಕುಟುಂಬದವರು ಆಕೆಯೊಂದಿಗೆ ಈಗಲೂ ಮಾತನಾಡುವುದಿಲ್ಲ,” ಎಂದು ಅವರು ತಮ್ಮ ನೋವನ್ನು ಹಂಚಿಕೊಂಡರು. ಕೆಲವು ಪ್ರಕರಣಗಳಲ್ಲಿ ವಿವಾಹದ ಹಲವು ವರ್ಷಗಳ ನಂತರವೂ ಸಹ ಅಂತರ್ಜಾತಿ ವಿವಾಹವಾದ ದಂಪತಿಗಳು ಕಿರುಕುಳಕ್ಕೆ ಒಳಗಾಗಬೇಕಾಗಿದೆ ಹಾಗೂ ಇನ್ನೂ ಕೆಲವು ಪ್ರಕರಣಗಳಲ್ಲಿ ಮರ್ಯಾದೆ ಹತ್ಯೆಯ ಸಂತ್ರಸ್ತರಾಗಿರುವ ಪ್ರಕರಣಗಳೂ ಇವೆ.

ಈ ಉಪಕ್ರಮವನ್ನು ಜನರು ಸ್ವಾಗತಿಸಿದ್ದರೂ ಸಹ ಅದರ ಜನಪ್ರಿಯತೆ ಸಾಮಾಜಿಕ ವಾಸ್ತವತೆಗಳಿಂದಾಗಿ ಇಳಿಕೆಯಾಗಿದೆ ಎನ್ನುವುದು ದಲಿತ ಕಾರ್ಯಕರ್ತ ಮಳವಳ್ಳಿ ಶಂಕರ್ ಅವರ ಅಭಿಪ್ರಾಯ. “ಇಂಟೆರ್‌ನೆಟ್ ಕ್ರಾಂತಿಯಿಂದಾಗಿ ಅಂತರ್ಜಾತಿ ವಿವಾಹಗಳು ಹೆಚ್ಚು ನಿರ್ಧಿಷ್ಟಗೊಂಡಿವೆ. ಅಂತರ್ಜಾಲತಾಣಗಳಲ್ಲಿ ನಿರ್ಧಿಷ್ಟವಾದ ಜಾತಿಗಳ ವಿವಾಹ ಆ್ಯಪ್‌ ಗಳು ಹಾಗೂ ವೆಬ್‌ ಸೈಟ್‌ಗಳು ಹೊರಹೊಮ್ಮಿವೆ,” ಎನ್ನುತ್ತಾರೆ ಶಂಕರ್. ಜಾತಿ, ಧರ್ಮಗಳ ಕುರಿತು ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಬೆಳವಣಿಗಳಿಂದಾಗಿ ಜನರು ನೈತಿಕತೆಗಿಂತ ಹೆಚ್ಚಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅಭ್ಯಾಸಗಳೆಡೆಗೆ ವಾಲುತ್ತಿದ್ದಾರೆ, ಎನ್ನುತ್ತಾರೆ.

ಆರ್ಥಿಕ ಪ್ರೋತ್ಸಾಹ ಒದಗಿಸುವುದರ ಜೊತೆಗೆ, ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಹಾಗೂ ಸಾಮಾಜಿಕ ಒಪ್ಪಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನಗಳಾಗಬೇಕಿದೆ.

ಜೋಡಿಗಳು ದೂರುಗಳನ್ನು ದಾಖಲಿಸಿದಾಗ ಅವರವರ ಕುಟುಂಬಗಳಿಂದ ಎದುರಾಗಬಹುದಾದ ಕಿರುಕುಳದ ವಿರುದ್ಧ ಪೋಲಿಸ್ ರಕ್ಷಣೆಯನ್ನು ಕಲ್ಪಿಸಬೇಕಿದೆ. “ಅಂತರ್ಜಾತಿ ವಿವಾಹವಾಗುವ ದಂಪತಿಗಳ ನೆರವಿಗಾಗಿ, ಪೋಲಿಸರು ಮೊದಲಿಗೆ ಎಫ್‌ ಐಆರ್‌ ಗಳನ್ನು ದಾಖಲಿಸಿಕೊಳ್ಳಬೇಕು, ಹಾಗೂ ತಪ್ಪದೇ ಅಪರಾಧಿಗಳನ್ನು ಬಂಧಿಸಬೇಕು ಹಾಗೂ ಅಗತ್ಯವಿದ್ದರೆ ರಕ್ಷಣೆಯನ್ನು ಒದಗಿಸಬೇಕು,” ಎನ್ನುತ್ತಾರೆ ಕರ್ನಾಟಕ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ರವಿ ವರ್ಮಾ ಕುಮಾರ್. ಹೀಗಾದಾಗ ಮರ್ಯಾದಾ ಹತ್ಯೆಗಳು ಸಾಕಷ್ಟು ಕಡಿಮೆಯಾಗಬಹುದು, ಎನ್ನುವುದು ಅವರ ಅನಿಸಿಕೆಯಾಗಿದೆ.

ಜಾತಿಗಳ ನಡುವಿನ ಬಿರುಕುಗಳು ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಇಂತಹ ವಿವಾಹಗಳಿಂದಾಗಿ ಎದುರಾಗಬಹುದಾದ ವ್ಯತ್ಯಾಸಗಳ ಕುರಿತು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಪಾತ್ರವಹಿಸುವುದು ಹೆಚ್ಚು ಮುಖ್ಯ. “ಬಹುಪಾಲು ಕೆಲಸದ ಸ್ಥಳಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಕನಿಷ್ಠ ಜಾತಿ ತಾರತಮ್ಯತೆಗಳು ಹಾಗೂ ವೈಷಮ್ಯಗಳು ತಪ್ಪು ಎನ್ನುವ ಭಾವನೆಯಾದರೂ ಇದೆ. ವಿವಾಹಗಳಿಗೆ ಸಂಬಂಧಪಟ್ಟಂತೆ, ಈಗಲೂ ಜಾತಿಯೇ ಪ್ರಾಥಮಿಕ ಅಂಶವಾಗಿ ಮುಂದುವರೆದಿದೆ,” ಎನ್ನುತ್ತಾರೆ ನರಸಿಂಹಮೂರ್ತಿ. ಸರ್ಕಾರ ಈ ಸಂಬಂಧ ಆಲೋಚಿಸುವುದಾದರೆ, “ಮೊದಲಿಗೆ ಅಂತರ್ಜಾತಿ ವಿವಾಹವಾಗುವ ದಂಪತಿಗಳಿಗೆ ಸುರಕ್ಷತೆಯನ್ನು ಕಲ್ಪಿಸುವ ಕಡೆ ಹೆಚ್ಚು ಗಮನಕೇಂದ್ರೀಕರಿಸಬೇಕು,” ಎಂದರು.

“ಇಲಾಖೆಯು ಪ್ರವೃತ್ತಿಯನ್ನು ಪ್ರತ್ಯೇಕವಾಗಿ ಅಧ್ಯಯನ ನಡೆಸಿಲ್ಲ. ಎಲ್ಲಾ ಯೋಜನೆಗಳನ್ನೂ ಸಹ ಪರಿಷ್ಕರಿಸುವಂತೆ ನಾವು ಯೋಜನಾ ಇಲಾಖೆಯನ್ನು ಕೋರಿದ್ದೇವೆ. ಒಮ್ಮೆ ನಮಗೆ ವರದಿ ಲಭಿಸಿದ ನಂತರ ಈ ಕುರಿತು ಪ್ರಗತಿ ತಿಳಿಯುತ್ತದೆ,” ಎನ್ನುತ್ತಾರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಪಿ. “ಇಲಾಖೆಗೆ ಈ ವರ್ಷ ಈಗಾಗಲೇ ಅನೇಕ ಅರ್ಜಿಗಳು ಬಂದಿವೆ. ನಾವು ಔಟ್‌ ರೀಚ್ ಚಟುವಟಿಕೆಗಳನ್ನು ಕೈಗೊಂಡಿದ್ದೇವೆ. ಇಂತಹ ಚಟುವಟಿಕೆಗಳಿಗಾಗಿ ಸರ್ಕಾರದ ಏಜೆನ್ಸಿ ಎಂಸಿಎದೊಂದಿಗೆ ನಾವು ಚರ್ಚಿಸುತ್ತಿದ್ದೇವೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Interracial-couple-Decline – claims – financial -incentives – Karnataka.