ಕುಂಭಮೇಳ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗೆ ಸೂಚನೆ –ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವತಿ.

ಮಂಡ್ಯ,ಸೆಪ್ಟಂಬರ್,7,2022(www.justkannada.in): ಕೆ.ಆರ್.ಪೇಟೆ ತಾಲ್ಲೂಕು ಅಂಬಿಗರಹಳ್ಳಿ ಹತ್ತಿರ ತ್ರಿವೇಣಿ ಸಂಗಮದಲ್ಲಿ ಕುಂಭವೇಳ ಅ.13 ರಿಂದ 16 ರವರೆಗೆ  ಅದ್ಧೂರಿಯಾಗಿ  ನಡೆಯಲಿದೆ. ಈ ಬೃಹತ್ ಕುಂಭಮೇಳ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ರವರು ತಿಳಿಸಿದರು.

ಜಿಲ್ಲಾಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ  ಕೆ.ಆರ್.ಪೇಟೆ ತಾಲ್ಲೂಕು ಅಂಬಿಗರಹಳ್ಳಿ ಹತ್ತಿರ ತ್ರಿವೇಣಿ ಸಂಗಮದಲ್ಲಿ ಕುಂಭವೇಳ ಆಚರಿಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಮೂರು ನದಿಗಳ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ಪೂಜೆ ಹಾಗೂ ಬಾಗಿನ ಸಮರ್ಪಣೆ ಮಾಡಲಾಗುತ್ತದೆ. ಸಾಧು ಸಂತರು ಹಾಗೂ ಗಣ್ಯರಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ ಎಂದರು.

ಮೂಲ ಸೌಕರ್ಯಗಳಾದ ರಸ್ತೆ, ಶೌಚಾಲಯ, ವಾಹನ ನಿಲ್ದಾಣ, ಕುಡಿಯುವ ನೀರು, ಉಪಾಹಾರ, ನೈರ್ಮಲ್ಯ, ತಂಗುದಾಣಗಳು, ವೈದ್ಯಕೀಯ ಸೇವೆಗಳು ಮತ್ತು ತುರ್ತಚಕಿತ್ಸೆ, ಅಗ್ನಶಾಮಕದಳ, ರಕ್ಷಣಾ ಕಾರ್ಯ, ವಿದ್ಯುತ್ ದೀಪಾಲಂಕಾರ, ಮಾಹಿತಿ ಕೇಂದ್ರ ಗಳ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಿ ಎಂದರು.

ಅಪರ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಎಲ್ ನಾಗರಾಜು ರವರು ಮಾತನಾಡಿ ಅಕ್ಟೋಬರ್ .6 ರಂದು ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ವಿಶೇಷವಾಗಿ ಜ್ಯೋತಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗುತ್ತದೆ. ಮಹದೇಶ್ವರ ಜ್ಯೋತಿ ಯಾತ್ರೆ ಮೈಸೂರು, ಚಾಮರಾಜನಗರ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ  ಕೆ.ಆರ್ ಪೇಟೆಯ  ತ್ರಿವೇಣಿ ಸಂಗಮಕ್ಕೆ ಜ್ಯೋತಿ ರಥ ಬರಲಿದೆ ಎಂದರು.

ಜ್ಯೋತಿ ಯಾತ್ರೆ ಸಂಚರಿಸುವ ಮೂರು ಮಾರ್ಗಗಳಿಗೆ ಸಂಬಂಧಿಸಿದಂತೆ ಮಾರ್ಗ ಅಧಿಕಾರಿಗಳನ್ನು ನೇಮಿಸಲಾಗಿದೆ. ರಥ ಸಂಚರಿಸುವ ಮಾರ್ಗದಲ್ಲಿ  ಭಕ್ತರು ನೀಡುವ ದವಸ ಧಾನ್ಯಗಳನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಸ್ಥಳೀಯ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಗಂಗಾರತಿ, ಸಾಧು ಸಂತರ ಧಾರ್ಮಿಕ ಸಭೆ ಮಾಡಲಾಗುವುದು ಎಂದರು.

ಸಭೆಯಲ್ಲಿ  ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ  ಶಿವಾನಂದಮೂರ್ತಿ,ಉಪವಿಭಾಗಾಧಿಕಾರಿ ಆರ್.ಐಶ್ವರ್ಯ , ಜಿ ಪಂ. ಉಪಕಾರ್ಯದರ್ಶಿ ಸರಸ್ವತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Instructions – preparations – KumbhMela –program- Mandya DC -S. Ashwati