ಜಮಖಂಡಿಯಲ್ಲಿ ಭಾರತದ ಮೊಟ್ಟ ಮೊದಲ ಫ್ಲೆಕ್ಸ್ ಇಂಧನ ಕೇಂದ್ರ.

ಬೆಂಗಳೂರು, ಅಕ್ಟೋಬರ್ 27, 2022(www.justkannada.in): ಬೆಂಗಳೂರು ನಗರದಿಂದ ಸುಮಾರು ೫೦೦ ಕಿ.ಮೀ.ಗಳಷ್ಟು ದೂರದಲ್ಲಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಭಾರತದ ಮೊಟ್ಟ ಮೊದಲ ‘ಫ್ಲೆಕ್ಸ್ ಫ್ಯೂಯೆಲ್’ ಕೇಂದ್ರ ಸ್ಥಾಪನೆಯಾಗುವ ಸಾಧ್ಯತೆಗಳಿವೆ. ಈ ಕೇಂದ್ರವನ್ನು ಸ್ಥಾಪಿಸಲಿರುವ ಕಂಪನಿಯ ಮಾಹಿತಿಯ ಪ್ರಕಾರ ಈ ಫ್ಲೆಕ್ಸ್ ಇಂಧನ ಅಥವಾ ಫ್ಲೆಕ್ಸಿಬಲ್ ಫ್ಯೂಯೆಲ್ ಎಂದರೆ ಮೀಥನಾಲ್ ಅಥವಾ ಈಥನಾಲ್ ಮಿಶ್ರಿತ ಪರ್ಯಾಯ ಇಂಧನ. ಬಾಗಲಕೋಟೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಈ ಫ್ಲೆಕ್ಸ್ ಇಂಧನ ಕೇಂದ್ರ ಬಯೋ ಸಿಎಜಿ, ಈಥನಾಲ್-ಮಿಶ್ರಿತ ಇಂಧನ ಹಾಗೂ ವಿದ್ಯುತ್ ಚಾಲಿತ ವಾಹನಗಳಿಗಾಗಿ ಚಾರ್ಜಿಂಗ್ ಸೌಲಭ್ಯಗಳನ್ನು ಒದಗಿಸಲಿದೆ. ಈಗಿನ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರ ಕುಟುಂಬದವರು ನಡೆಸುತ್ತಿರುವ ವ್ಯಾಪಾರದೊಂದಿಗೆ ಸಂಪರ್ಕ ಹೊಂದಿರುವ ಟ್ರೂಆಲ್ಟ್ ಎನರ್ಜಿ ಕಂಪನಿ ಈ ಕೇಂದ್ರವನ್ನು ಸ್ಥಾಪಿಸಲಿದೆ.

ಫ್ಲೆಕ್ಸ್ ಇಂಧನದ ಇಂಜಿನ್‌ ಗಳನ್ನು ಅಭಿವೃದ್ಧಿಪಡಿಸುವಂತೆ ವಾಹನ ತಯಾರಕ ಕಂಪನಿಗಳಿಗೆ ಕೇಂದ್ರ ಸರ್ಕಾರ ನೀಡಿರುವ ಸೂಚನೆಯ ಮೇರೆಗೆ, ಟ್ರೂಆಲ್ಟ್ ಎನರ್ಜಿ ಕಂಪನಿಯು ಭಾರತದಾದ್ಯಂತ ಮುಂದಿನ ಐದು ವರ್ಷಗಳಲ್ಲಿ ೨೫೦ ಫ್ಲೆಕ್ಸ್ ಇಂಧನ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ.

ಟ್ರೂಆಲ್ಟ್ ಎನರ್ಜಿಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿಯವರು ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡುತ್ತಾ, ಕಂಪನಿಯು ಭವಿಷ್ಯಕ್ಕಾಗಿ ಸಿದ್ಧವಾಗಿರುವಂತಹ ಇಂಧನ ಕೇಂದ್ರಗಳನ್ನು ಸ್ಥಾಪಿಸುತ್ತಿರುವುದಾಗಿ ತಿಳಿಸಿದರು. “ದೇಶದಲ್ಲಿ ಜಮಖಂಡಿಯಲ್ಲಿ ಈ ರೀತಿಯ ಮೊಟ್ಟ ಮೊದಲ ಕೇಂದ್ರ ಸ್ಥಾಪನೆಯಾಗಲಿದ್ದು, ಶೀಘ್ರದಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ಈ ರೀತಿಯ ಏಳು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 14 ಕೇಂದ್ರಗಳನ್ನು ಸ್ಥಾಪಿಸಲಿದ್ದೇವೆ,” ಎಂದು ತಿಳಿಸಿದರು.

ಕಂಪನಿಯು ವಾಹನ ತಯಾರಿಕ ಕಂಪನಿಗಳಿಂದ ಫ್ಲೆಕ್ಸ್ ಇಂಧನದ ಇಂಜಿನ್‌ ವುಳ್ಳ ವಾಹನಗಳನ್ನು ಬಿಡುಗಡೆ ಮಾಡುವುದನ್ನೇ ಕಾಯುತ್ತಿದೆ. “ಜಮಖಂಡಿಯಲ್ಲಿ ಈಥನಾಲ್ ಇಂಜಿನ್‌ ಗಳನ್ನು ಅಳವಡಿಸಿರುವ 18 ಟ್ರ್ಯಾಕ್ಟರ್‌ ಗಳನ್ನು ನಾವು ಬಳಸುತ್ತಿದ್ದೇವೆ. ಇದರಿಂದಾಗಿ ರೈತರಿಗೆ ವಾರ್ಷಿಕ ರೂ.೧.೫ ಲಕ್ಷದಷ್ಟು ಇಂಧನದ ವೆಚ್ಚಗಳ ಉಳಿತಾಯವಾಗುತ್ತಿದೆ,” ಎಂದು ವಿಜಯ್ ಮಾಹಿತಿ ನೀಡಿದರು. ವಾಹನ ತಯಾರಕರಿಗೆ ಫ್ಲಕೆಸ್ ಇಂಧನ ಮೂಲಸೌಕರ್ಯದ ಕುರಿತು ಆತ್ಮವಿಶ್ವಾಸ ಬರಬೇಕು. “ಕೃಷಿ ಆಧಾರಿತ ಕೈಗಾರಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಈಥನಾಲ್ ಒದಗಿಸಲು ಸಮರ್ಥವಾಗಿದ್ದು, ನಾವು ಮೂಲಸೌಕರ್ಯವನ್ನು ಸಿದ್ಧಪಡಿಸುವ ಮೂಲಕ ಈ ಉಪಕ್ರಮವನ್ನು ಕೈಗೊಳ್ಳುತ್ತಿದ್ದೇವೆ,” ಎಂದು ವಿವರಿಸಿದರು.

ಜಮಖಂಡಿಯಲ್ಲಿ ಸ್ಥಾಪನೆಯಾಗಲಿರುವ ಟ್ರೂ ಆಲ್ಟ್ ಫ್ಲೆಕ್ಸ್ ಇಂಧನ ಕೇಂದ್ರ ಕಬ್ಬು ಆಧಾರಿತ ಬಯೋ ಸಿಎನ್‌ ಜಿ ಹಾಗೂ ಈಥನಾಲ್ ಅನ್ನು ಒಳಗೊಂಡಿರುತ್ತದೆ. ಕಬ್ಬಿನಿಂದಲೇ ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಿರುವ ಇವಿ ಚಾರ್ಜಿಂಗ್ ಘಟಕಕ್ಕೆ ವಿದ್ಯುತ್ ಸರಬರಾಜನ್ನೂ ಸಹ ಮಾಡಲಾಗುತ್ತದೆ. ೨೦೧೮ರಲ್ಲಿ ಕೇಂದ್ರ ಸರ್ಕಾರ ಬಯೋ ಇಂಧನ ನೀತಿಯನ್ನು ಪರಿಚಯಿಸಿತು.

ಆರಂಭದಲ್ಲಿ ಮಿಶ್ರಣದ ಪ್ರಮಾಣ ಶೇ.೧೦ರಷ್ಟು ಇತ್ತು. ಈಗ ಈ ಪ್ರಮಾಣವನ್ನು ಶೆ.೨೦ಕ್ಕೆ ಹೆಚ್ಚಿಸಲಾಗಿದ್ದು, ಈ ಹಿಂದೆ ೨೦೩೦ಕ್ಕೆ ನಿಗಧಿಪಡಿಸಲಾದ ಸಮಯದ ಗಡುವನ್ನು ೨೦೨೫ಕ್ಕೆ ನಿಗಧಿಪಡಿಸಲಾಗಿದೆ. ಹಿಂದಿನ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ೨೦೨೫ರ ವೇಳೆಗೆ ಪೆಟ್ರೋಲ್‌ ನೊಂದಿಗೆ ಶೇ.೨೦ರಷ್ಟು ಈಥನಾಲ್ ಅನ್ನು ಮಿಶ್ರಣ ಮಾಡುವ ಗುರಿಯನ್ನು ಸಾಧಿಸಿದರೆ, ಭಾರತ ಬರೋಬ್ಬರಿ ರೂ. ೧ ಲಕ್ಷ ಕಓಟಿ ವಿದೇಶಿ ವಿನಿಮಯವನ್ನು ಉಳಿತಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದರು.

“ಪ್ರಸ್ತುತ, ನಮ್ಮ ದೇಶ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ನಮ್ಮ ಫೋರೆಕ್ಸ್ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಒಂದು ವೇಳೆ ನಾವು ಈ ಕಚ್ಚಾ ತೈಲದ ಆಮದನ್ನು ನಿಲ್ಲಿಸಿ, ಈಥನಾಲ್ ಬಳಕೆಯನ್ನು ಆರಂಭಿಸಿದರೆ, ಅದು ರೈತರಿಗೆ ತಲುಪುತ್ತದೆ,” ಎಂದು ವಿಜಯ್ ತಿಳಿಸಿದರು. ಪ್ರಸ್ತುತ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ ಗೆ ರೂ.೧೨೦ – ರೂ.೧೨೫ರಷ್ಟಿದ್ದು, ಈಥನಾಲ್ ಬೆಲೆ ಪ್ರತಿ ಲೀಟರ್‌ಗೆ ರೂ.೬೩ ರಷ್ಟಿದೆ. ಒಂದು ಲೀಟರ್ ಪೆಟ್ರೋಲ್ ಹೋಲಿಕೆಯಲ್ಲಿ ೧.೩ ಲೀ. ಈಥನಾಲ್ ಬಳಕೆಯೊಂದಿಗೆ ಅರ್ಧ ಬೆಲೆಯಲ್ಲಿ ಅಷ್ಟೇ ಮೈಲೇಜ್ ನೀಡುತ್ತದೆ,” ಎಂದು ಮಾಹಿತಿ ನೀಡಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: India’s- first –flex- fuel- station- Jamkhandi.