ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ರಕ್ತದಾನದ ಹಗರಣಗಳು.

ಬೆಂಗಳೂರು, ಫೆಬ್ರವರಿ,9, 2022 (www.justkannada.in): ಬೆಂಗಳೂರಿನಲ್ಲಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ರಕ್ತದ ಅವಶ್ಯಕತೆ ಇರುವ, ಮತ್ತು ರಕ್ತದಾನಿಗಳಿಗಾಗಿ ಹುಡುಕುತ್ತಿದ್ದು, ಮೋಸ ಹೋಗಿರುವ ಕುಟುಂಬಗಳ ಸದಸ್ಯರು ಇಂತಹ ಮೋಸಗಾರರಿಂದ ಎಚ್ಚರವಹಿಸುವಂತೆ ಕೋರಿದ್ದಾರೆ. ರಕ್ತದ ಅವಶ್ಯತೆಯಿಂದ ದಾನಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸುವ ಕುಟುಂಬಗಳ ಸದಸ್ಯರಿಗೆ ತಾವು ರಕ್ತ ನೀಡುವುದಾಗಿ ತಿಳಿಸಿ ಅಲ್ಲಿಗೆ ತೆರಳಲು ಪ್ರಯಾಣ ವೆಚ್ಚಗಳನ್ನು ನೀಡುವಂತೆ ತಿಳಿಸಿ, ದುಡ್ಡು ಪಡೆದ ನಂತರ ರಕ್ತದಾನ ಮಾಡಲು ಬರದೆ ಮರೆಯಾಗುತ್ತಿರುವ ಪ್ರಕರಣಗಳು ವರದಿಯಾಗಿವೆ.

ರಕ್ತದ ತುರ್ತು ಅವಶ್ಯಕತೆ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆಗಳನ್ನು ಪೋಸ್ಟ್ ಮಾಡುವವರು ಇಂತಹ ವಂಚಕರ ಮೋಸಕ್ಕೆ ಬಲಿಯಾಗುತ್ತಿದ್ದಾರೆ. ರಕ್ತ ಒಂದು ತುರ್ತು ಅಗತ್ಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕುಟುಂಬಸ್ಥರು ಹಣದ ಮುಖ ನೋಡುವುದಿಲ್ಲ. ಹಿಂದೆ ಮುಂದೆ ನೋಡದೆ ರಕ್ತದಾನ ಮಾಡುತ್ತೇನೆ, ಅಲ್ಲಿಗೆ ಬರಲು ಪ್ರಯಾಣ ವೆಚ್ಚಗಳನ್ನು ಆನ್‌ ಲೈನ್ ಮೂಲಕ ವರ್ಗಾಯಿಸಿ ಎಂದೊಡನೆ ಹಣ ವರ್ಗಾಯಿಸುತ್ತಾರೆ.

ಇತ್ತೀಚಿನ ಇಂತಹ ಒಂದು ಪ್ರಕರಣದಲ್ಲಿ, ತಮ್ಮ ತಂದೆಗೆ ಎರಡು ಯೂನಿಟ್‌ ಗಳಷ್ಟು ರಕ್ತದ ಅಗತ್ಯವಿದ್ದಂತಹ ಓರ್ವ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ರಕ್ತದ ಅಗತ್ಯದ ಕುರಿತು ಪೋಸ್ಟ್ ಪ್ರಕಟಿಸಿದ್ದರು. ಈ ಪೋಸ್ಟ್ ಗೆ ಸಂಬಂಧಿಸಿದಂತೆ ಆಕೆಗೆ ಅನಾಮಧೇಯ ವ್ಯಕ್ತಿಯಿಂದ ಒಂದು ದೂರವಾಣಿ ಕರೆ ಬಂತು. ಆತ ರಕ್ತದಾನ ಮಾಡಲು ಒಪ್ಪಿಕೊಂಡ. “ನಮಗೆ ತುರ್ತಾಗಿ ರಕ್ತ ಬೇಕಾಗಿತ್ತು. ಆತ ತನ್ನ ಹೆಸರು ಸಂದೀಪ್ ಎಂದು ಹೇಳಿಕೊಂಡು ಶನಿವಾರ ಬೆಳಿಗ್ಗೆ ಕರೆ ಮಾಡಿದ್ದ. ರಕ್ತ ನೀಡಲು ತನ್ನ ಸ್ನೇಹಿತನೊಬ್ಬ ಬರುವುದಾಗಿ ತಿಳಿಸಿದ. ನಾನು ಆಸ್ಪತ್ರೆಯ ವಿವರಗಳು ಮತ್ತು ಲೊಕೇಷನ್ ಶೇರ್ ಮಾಡಿದೆ. ಸಂದೀಪ್ ತನ್ನ ಓರ್ವ ಸ್ನೇಹಿತ ಮಾರತಹಳ್ಳಿಯಿಂದ ಹಾಗೂ ಮತ್ತೋರ್ವ ಸಿಲ್ಕ್ ಬೋರ್ಡ್ ಕಡೆಯಿಂದ ಬರುತ್ತಿದ್ದು, ಅದಕ್ಕೆ ಪ್ರಯಾಣ ದರ ರೂ.೭೦೦ ಒದಗಿಸುವುದಾಗಿ ಕೋರಿದ. ನಾನು ಒಪ್ಪಿಕೊಂಡು ಹಣ ವರ್ಗಾಯಿಸಿದೆ. ಹಣ ವರ್ಗಾಯಿಸಿದ ನಂತರ ಸುಮಾರು ಗಂಟೆಗಳವರೆಗೂ ಕಾದರೂ ಯಾರೂ ಬರಲಿಲ್ಲ. ನಾನು ಕರೆ ಮಾಡಲಾರಂಭಿಸಿದಾಗ ಆತ ನನ್ನ ಕರೆಗೆ ಉತ್ತರಿಸುವುದನ್ನೇ ನಿಲ್ಲಿಸಿದ, ಸ್ವಲ್ಪ ಸಮಯದ ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು,” ಎಂದು ತಿಳಿಸಿದರು.

ಆಗ ಆಕೆಗೆ ಕೊನೆಯ ಕ್ಷಣದಲ್ಲಿ ಇತರೆ ರಕ್ತದಾನಿಗಳನ್ನು ಹುಡುಕುವುದು ಬಹಳ ಕಷ್ಟವಾಯಿತಂತೆ. “ಅಂತಿಮವಾಗಿ ಮತ್ತೋರ್ವ ರಕ್ತ ದಾನಿಯನ್ನು ಹುಡುಕುವಲ್ಲಿ ಯಶಸ್ವಿಯಾದೆ. ಆದರೆ ಅದರ ಹಿಂದಿನ ಅನುಭವ ಮಾತ್ರ ತುಂಬಾ ಬೇಸರ ತಂದಿತು,” ಎಂದು ವಿವರಿಸಿದರು.

ರಕ್ತದಾನವನ್ನು ಸಂಯೋಜಿಸುವ ಒಂದು ಸಂಸ್ಥೆ ತಿಳಿಸಿದಂತೆ ಪ್ರಸ್ತುತ ಬಹುಪಾಲು ಬ್ಲಡ್ ಬ್ಯಾಂಕ್‌ ಗಳಲ್ಲಿ ರಕ್ತ ಖಾಲಿಯಾಗಿದ್ದು, ರಕ್ತ ದಾನಿಗಳನ್ನು ಹುಡುಕುವುದು ಬಹಳ ಕಷ್ಟವಾಗಿದೆಯಂತೆ. “ಆಗಾಗ ರಕ್ತದಾನ ಮಾಡುವುದನ್ನು ವಾಡಿಕೆ ಮಾಡಿಕೊಂಡಿರುವ ಕೆಲವೇ ಕೆಲವರು ಮಾತ್ರ ರಕ್ತದಾನ ಮಾಡಲು ಮುಂದಕ್ಕೆ ಬರುತ್ತಿದ್ದಾರೆ. ಆದರೆ ಅನೇಕ ಪ್ರಕರಣಗಳಲ್ಲಿ ಒಮ್ಮೆ ಓರ್ವ ರಕ್ತದಾನಿ ರಕ್ತದ ಅಗತ್ಯವಿರುವ ಕುಟುಂಬಸ್ಥರಿಗೆ ರಕ್ತದಾನ ಮಾಡುವುದಾಗಿ ವಾಗ್ದಾನ ನೀಡಿದ ನಂತರ ನಾವು ಆ ಕರೆಯನ್ನು ಮುಗಿಸುತ್ತೇವೆ, ಕೆಲವು ತಾಸುಗಳ ನಂತರ ಅದೊಂದು ಮೋಸ ಎಂದು ಗೊತ್ತಾಗುತ್ತದೆ. ಆಗ ಪುನಃ ಕೋರಿಕೆಯನ್ನು ಮುಂದುವರೆಸುತ್ತೇವೆ. ಇಂತಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಲೂ ಆಗುವುದಿಲ್ಲ,” ಎಂದು ವಿವರಿಸಿದ್ದಾರೆ.

ಪೊಲೀಸರು ಇಂತಹ ಪ್ರಕರಣಗಳಲ್ಲಿ ಸ್ವಯಂಪ್ರೇರಣೆಯಾಗಿ ಪ್ರಕರಣ ದಾಖಲಿಸಿಕೊಂಡು ಇಂತಹ ವಂಚಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆ ಮೂಲಕ ರಕ್ತದ ಅಗತ್ಯವಿದ್ದು, ರಕ್ತ ನೀಡುವುದಾಗಿ ನಂಬಿಸಿ ಮೋಸ ಮಾಡಿ, ಆ ಮೂಲಕ ಪ್ರಾಣ ಕಳೆದುಕೊಳ್ಳುವ ಪ್ರಕರಣಗಳನ್ನು ತಡೆಗಟ್ಟಬೇಕಿದೆ, ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಈ ಹಿನ್ನೆಲೆಯಲ್ಲಿ ಯಾರಾದರೂ ರಕ್ತ ನೀಡುವುದಾಗಿ ತಿಳಿಸಿ ಪ್ರಯಾಣ ವೆಚ್ಚಗಳನ್ನು ಭರಿಸಲು ಹಣ ಕೇಳಿದರೆ ದಯಮಾಡಿ ಯಾರೂ ಆ ವ್ಯಕ್ತಿ ರಕ್ತದಾನ ಮಾಡಲು ಸ್ಥಳಕ್ಕೆ ಬರುವವರೆಗೂ ಹಣ ನೀಡಬೇಡಿ ಎಂದು ಕುಟುಂಬಸ್ಥರಿಗೆ ತಿಳಿಸುತ್ತಿದ್ದೇವೆ. ರಕ್ತದಾನ ಪೂರ್ಣಗೊಂಡ ನಂತರ ಮಾತ್ರ ಮುಂದಿನ ಕೆಲಸಗಳನ್ನು ಮುಂದುವರೆಸುವಂತೆ ಅರಿವು ಮೂಡಿಸುತ್ತಿದ್ದೇವೆ,” ಎಂದು ವಿವರಿಸಿದ್ದಾರೆ.

ಸುದ್ದಿ ಮೂಲ: ಬೆಂಗಳೂರು ಮಿರರ್

Key words: Increasing-blood -donation -scandals -Bangalore