ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದ ಕೊರೊನಾ: ಕಠಿಣ ನಿಯಮ ಜಾರಿಗೆ ತಂದ ತಿ.ನರಸೀಪುರ ತಾಲೂಕು ಆಡಳಿತ

ಮೈಸೂರು, ಮೇ 23, 2021 (www.justkannada.in): ಮೈಸೂರು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿದ ಸೋಂಕು ಹಿನ್ನೆಲೆಯಲ್ಲಿ ಟಿ ನರಸೀಪುರ ತಾಲ್ಲೂಕು ಆಡಳಿತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

ತಹಶಿಲ್ದಾರ್ ಡಿ ನಾಗೇಶ್‌ರಿಂದ ಹೊಸ ನಿಯಮಗಳ ಕುರಿತು ಆದೇಶ ಹೊರಡಿಸಿದ್ದಾರೆ. 23.05.2021 ರಿಂದ 07.06.2021 ರವರೆಗೆ ತಾಲ್ಲೂಕಿನಲ್ಲಿ ಹಲವು ನಿರ್ಬಂಧ ಹೇರಲಾಗಿದೆ. ಆಸ್ಪತ್ರೆ, ಮೆಡಿಕಲ್ ಸ್ಟೋರ್, ಹಾಲಿನ ಕೇಂದ್ರಗಳನ್ನು ಹೊರತಪಡಿಸಿ ನಿಯಮ ಜಾರಿಯಲ್ಲಿರಲಿದೆ.

ಹಣ್ಣು ಮತ್ತು ತರಕಾರಿಗಳನ್ನು ಕೃಷಿ ಉತ್ಪನ ಮಾರುಕಟ್ಟೆಗಳಿಗೆ ತಾಲ್ಲೂಕು ಆಡಳಿತದಿಂದ ಸಮಯ ನಿಗದಿ ಮಾಡಲಾಗಿದೆ.

ಬೆಳಗ್ಗೆ 7 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಅನುಮತಿ ನಿರಾಕರಿಸಲಾಗಿದೆ. ಹಣ್ಣು ಮತ್ತು ತರಕಾರಿಗಳನ್ನು ತಳ್ಳುವ ಗಾಡಿಯ ಮೂಲಕ ಮನೆ ಬಾಗಿಲಿಗೆ ಮಾರಟ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ತಾಲ್ಲೂಕಿನ ಎಲ್ಲಾ ಪೆಟ್ರೋಲ್‌ ಬಂಕ್‌ಗಳು ಸಾರ್ವಜನಿಕರಿಗೆ ಬೆಳಗ್ಗೆ 6 ರಿಂದ ಬೆಳಗ್ಗೆ 9 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಬೆಳಗ್ಗೆ 9 ಗಂಟೆ ನಂತರ ತುರ್ತು ವಾಹನ, ಸರ್ಕಾರಿ ಮತ್ತು ಸರ್ಕಾರಿ ಸಿಬ್ಬಂದಿಗಳು ಇಲಾಖೆಯ ಗುರುತಿನ ಚೀಟಿ ತೋರಿಸಿದ್ದಲ್ಲಿ ಮಾತ್ರ ಪೆಟ್ರೋಲ್ ಹಾಕಲು ತಹಸೀಲ್ದಾರ್ ಸೂಚನೆ ನೀಡಿದ್ದಾರೆ.

ಎಲ್ಲಾ ಬ್ಯಾಂಕ್‌ಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುವುದು, ಕೃಷಿ ಉತ್ಪನಕ್ಕೆ ಸಂಬಂಧಿಸಿದಂತೆ ರಾಸಾಯನಿಕ ಮತ್ತು ರಸಗೊಬ್ಬರಗಳ ಅಂಗಡಿಗಳು ಬೆಳಗ್ಗೆ 7 ಗಂಟೆಯಿಂದ ಬೆಳಗ್ಗೆ 9 ರವರೆಗೆ ಮಾತ್ರ ಅವಕಾಶ, ತಾಲ್ಲೂಕಿನ ಎಲ್ಲಾ ಫೈನಾನ್ಸ್ ಕಂಪನಿಗಳು ಕಡ್ಡಾಯವಾಗಿ ತೆರೆಯದಂತೆ ನಿರ್ಬಂಧ ಹೇರಲಾಗಿದೆ.