ಕಬಿನಿ ಜಲಾಶಯದ ಒಳ ಮತ್ತು ಹೊರ ಹರಿವು ಹೆಚ್ಚಳ: ಸೇತುವೆ ಮುಳುಗಡೆ….

ಮೈಸೂರು,ಆ,6,2020(www.justkannada.in): ಕಳೆದ ಎರಡು ದಿನಗಳಿಂದ  ರಾಜ್ಯದಲ್ಲಿ  ಉತ್ತಮ ಮಳೆಯಾಗುತ್ತಿದ್ದು ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಈ ನಡುವೆ ಕೇರಳದ ವೈನಾಡು ಭಾಗದಲ್ಲೂ ಮಳೆರಾಯ ಬಿರುಸುಗೊಂಡಿದ್ದು. ಈ ಹಿನ್ನೆಲೆ ಕಬಿನಿ ಜಲಾಶಯದ ಒಳ, ಹೊರ ಹರಿವು ಹೆಚ್ಚಳವಾಗಿದೆ.jk-logo-justkannada-logo

ಕಬಿನಿ ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಇದ್ದು, ಪ್ರಸ್ತುತ ಇಂದಿನ ಮಟ್ಟ 2280.87 ಅಡಿ ತುಂಬಿದೆ. ಜಲಾಶಯದ ಗರಿಷ್ಠ ಸಾಮರ್ಥ್ಯ 19.52 ಟಿಎಂಸಿಯಾದರೇ ಇಂದು ಜಲಾಶಯದಲ್ಲಿ 17 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು 35,056 ಕ್ಯೂಸೆಕ್ ಇದ್ದು 50,000 ಕ್ಯೂಸೆಕ್ ನೀರು ಜಲಾಶಯದಿಂದ ಹೊರಹೋಗುತ್ತಿದೆ. ಹೀಗಾಗಿ ಪ್ರವಾಹ ಭೀತಿ ಎದುರಾಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿಲಾಗಿದೆ.

ಕಬಿನಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಹಿನ್ನೆಲೆ ಬಿದರಳ್ಳಿ ಹಾಗೂ ಮಾದಾಪುರ ಸೇತುವೆಗಳು ಮುಳುಗಡೆಯಾಗಿವೆ. ಇದರಿಂದಾಗಿ ಹೆಚ್‌ಡಿ.ಕೋಟೆ ಹಾಗೂ ಸರಗೂರು ಮಾರ್ಗದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಹೆಚ್.ಡಿ.ಕೋಟೆ-ಮಾದಾಪುರ ಸೇತುವೆ ಮುಳುಗಡೆಯಾದ ಹಿನ್ನೆಲೆ ಹೆಚ್. ‌ಡಿ.ಕೋಟೆ, ನಂಜನಗೂಡು ತಾಲ್ಲೂಕಿನ ಹಲವು ಗ್ರಾಮಗಳ ಸಂಚಾರಕ್ಕೆ ತೊಂದರೆಯಾಗಿದೆ.

ಮಾದಾಪುರ, ಚೆಕ್ಕೂರು, ಬೆಳ್ತೂರು, ಕೂಳ್ಯ, ಅಡ್ಡಳ್ಳಿ, ನಂಜನಗೂಡು ಸಂಪರ್ಕಿಸುವ ಸೇತುವೆ ಇದಾಗಿದ್ದು,  ಈಗಾಗಲೇ ಸೇತುವೆ ಮೇಲೆ ನದಿಯ ನೀರು ಹರಿಯುತ್ತಿದೆ. ಇನ್ನು ನೀರು ಹರಿವು ನೋಡಲು ಸುತ್ತಮುತ್ತಲ ಗ್ರಾಮದ ಜನ ಸೇರುತ್ತಿದ್ದರೇ, ಅಪಾಯದ ಸ್ಥಳದಲ್ಲಿ ಮಕ್ಕಳು ಮೋಜಿನಾಟಕ್ಕೆ ಮುಂದಾಗಿದ್ದಾರೆ.  ಆದರೆ ಆಯಕಟ್ಟಿನ ಸ್ಥಳಗಳಲ್ಲಿ ಅಧಿಕಾರಿಗಳು ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Key words: Increase -inner – outer -flow – Kabini reservoir.