ಐಐಎಸ್​ಸಿ ಸ್ಲೈಡಿಂಗ್ ಗೇಟ್ ಬಿದ್ದು ಸೆಕ್ಯೂರಿಟಿ ಸಾವು: ಸಂಸ್ಥೆ ವಿರುದ್ದ ಎಫ್ ಐ ಆರ್ ದಾಖಲು

ಬೆಂಗಳೂರು:ಜುಲೈ-1:(www.justkannada.in) ಭಾರತೀಯ ವಿಜ್ಞಾನ ಮಂದಿರದ (ಐಐಎಸ್​ಸಿ) ಕಾಂಪೌಂಡ್​ನ ಗೇಟ್ ಕುಸಿದು ಮೂವರು ಸೆಕ್ಯೂರಿಟಿ ಗಾರ್ಡ್​ಗಳ ಮೇಲೆ ಏಕಾಏಕಿ ಬಿದ್ದ ಪರಿಣಾಮ ಓರ್ವ ಸೆಕ್ಯೂರಿಟಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತೀವ್ರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಡಿಶಾ ಮೂಲದ ಗೌತಮ್ ಬಿಸ್ವಾಲ್(24) ಮೃತ ಭದ್ರತಾ ಸಿಬ್ಬಂದಿ. ಬಿಹಾರ ಮೂಲದ ಅನಿಲ್​ಕುಮಾರ್ ಹಾಗೂ ಒಡಿಶಾದ ವೈನಾಯಕ್ ಗಾಯಗೊಂಡಿದ್ದಾರೆ.

ಗೌತಮ್ ಎಂದಿನಂತೆ ಕೆಲಸಕ್ಕೆ ಬಂದಿದ್ದರು. ಐಐಎಸ್​ಸಿಗೆ ಕಾರೊಂದು ಬಂದಿದ್ದು, ಗೇಟ್​ನಲ್ಲಿದ್ದ ಕಾವಲುಗಾರರು ಸ್ಲೈಡಿಂಗ್ ಗೇಟ್ ಅನ್ನು ತೆಗೆದು ಕಾರು ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ. ಬಳಿಕ ಗೇಟ್ ಹಾಕುತ್ತಿದ್ದಾಗ ವಾಲಿಕೊಂಡಿದೆ. ಆಗ ಅದನ್ನು ಹಿಡಿದು ನಿಲ್ಲಿಸಲು ಕಾವಲು ಗಾರರು ಮುಂದಾಗಿದ್ದಾರೆ. ಆದರೆ, ಅತಿ ಭಾರವಿದ್ದ ಗೇಟ್ ಕಾವಲುಗಾರರ ಮೇಲೆ ಬಿದ್ದಿದೆ. ಗೌತಮ್ ತಲೆ ಮತ್ತು ಎದೆ ಮೇಲೆ ಗೇಟ್ ಬಿದ್ದಿದ್ದರಿಂದ ಪ್ರಜ್ಞೆತಪ್ಪಿದ್ದಾರೆ. ಐಐಎಸ್​ಸಿ ಮುಂಭಾಗದ ಆಟೋ ನಿಲ್ದಾಣದಲ್ಲಿದ್ದ ಚಾಲಕರು ಹಾಗೂ ದಾರಿಹೋಕರು ಬಂದು ಗೇಟನ್ನು ಎತ್ತಿದ್ದಾರೆ. ಅಷ್ಟರಲ್ಲಾಗಲೇ ಗೌತಮ್ ಅಸುನೀಗಿದ್ದಾರೆ.

ದುರಂತ ಸಂಭವಿಸಿದ ಬೆನ್ನಲ್ಲೇ ಐಐಎಸ್​ಸಿಯ ಇತರೆ ಭದ್ರತಾ ಸಿಬ್ಬಂದಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ನಿರ್ಲಕ್ಷ್ಯ ಆರೋಪದ ಮೇಲೆ ಐಐಎಸ್​ಸಿ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

ಐಐಎಸ್​ಸಿ ಸ್ಲೈಡಿಂಗ್ ಗೇಟ್ ಬಿದ್ದು ಸೆಕ್ಯೂರಿಟಿ ಸಾವು: ಸಂಸ್ಥೆ ನಿರ್ಲಕ್ಷ್ಯಕ್ಕೆ ಎಫ್ ಐ ಆರ್ ದಾಖಲು
IISc sliding gate crashes,security guard,dead, Bangalore