ಸುಳ್ಳು ಸುದ್ದಿಗಳಿಂದ ಮನಸ್ಸಿಗೆ ನೋವಾಗಿದೆ: ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ ಎಂದ ಶರ್ಮಿಳಾ ಮಾಂಡ್ರೆ

ಬೆಂಗಳೂರು, ಸೆಪ್ಟೆಂಬರ್ 05, 2020 (www.justkannada.in): ಡ್ರಗ್ ಮಾಫಿಯಾ ಸೇರಿದಂತೆ ತಮ್ಮ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ ನೀಡಿದ್ದಾರೆ.

ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ. ಈ ಸಂಬಂಧಪಟ್ಟಂತೆ ಸಾಕಷ್ಟು ಸುಳ್ಳುಸುದ್ದಿಗಳು ಹರಿದಾಡುತ್ತಿವೆ. ಇಲ್ಲದ ಅಪವಾದಗಳನ್ನು ನನ್ನ ಮೇಲೆ ಹೇರುತ್ತಿರುವುದರಿಂದ ಮನಸ್ಸಿಗೆ ಸಾಕಷ್ಟು ನೋವಾಗುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಕುರಿತಂತೆ ಶರ್ಮಿಳಾ ಹೆಸರು ಕೂಡಾ ಕೇಳಿಬಂದಿತ್ತು. ಲಾಕ್ ಡೌನ್ ವೇಳೆ ಕಾರು ಅಪಘಾತವಾದಾಗ ಶರ್ಮಿಳಾ ಜತೆ ಡ್ರಗ್ ಪೆಡ್ಲರ್ ಇದ್ದರು ಎಂಬಿತ್ಯಾದಿ ವಿಚಾರಗಳು ಓಡಾಡುತ್ತಿವೆ. ಮಾಧ್ಯಮಗಳು ತಮ್ಮ ಟಿಆರ್ ಪಿಗಾಗಿ ಇಲ್ಲ ಸಲ್ಲದ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ದೂರಿದ್ದಾರೆ.

ಮೇಲಿನ ಯಾವುದೇ ಆರೋಪಗಳಲ್ಲಿ ಹುರುಳಿಲ್ಲ. ಇಲ್ಲಸಲ್ಲದ ಸುದ್ದಿಗಳನ್ನು ಪ್ರಸಾರ ಮಾಡುವ ವಾಹಿನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.