‘ಹುಲಿ ಪತ್ರಿಕೆ-2’ ಕಾದಂಬರಿ ಬಿಡುಗಡೆ ಮಾಡಿದ ಹಂಸಲೇಖ

ಬೆಂಗಳೂರು, ಜುಲೈ 01, 2021 (www.justkannada.in): ಮೈಸೂರಿನ ಯುವ ಲೇಖಕ ಅನುಷ್ ಎ ಶೆಟ್ಟಿ ಅವರು ಬರೆದಿರುವ ‘ಹುಲಿ ಪತ್ರಿಕೆ-2’ ಕಾದಂಬರಿಯನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಇಂದು ಬಿಡುಗಡೆ ಮಾಡಿದರು.

ಹಂಸಲೇಖ ಅವರ ಜನ್ಮ ದಿನದ ಅಂಗವಾಗಿ ಇತ್ತೀಚಿಗಷ್ಟೇ ಆರಂಭಿಸಲಾಗಿರುವ ‘ಶಾರದಾ ಪುಸ್ತಕಾಲಯ’ದಲ್ಲಿ ಮೊದಲ ಬಾರಿಗೆ ಲೋಕಾರ್ಪಣೆಗೊಂಡ ಕಾದಂಬರಿ ‘ಹುಲಿ ಪತ್ರಿಕೆ-2’ ಆಗಿದೆ.

‘ಹುಲಿ ಪತ್ರಿಕೆ-1’ ಸಾಕಷ್ಟು ಓದುಗರ ಗಮನ ಸೆಳೆದಿತ್ತು. ಇದರ ಮುಂದುವರಿದ ಭಾಗವೇ ‘ಹುಲಿ ಪತ್ರಿಕೆ-2’. ಇದನ್ನು ಅನುಗ್ರಹ ಪ್ರಕಾಶನ ವತಿಯಿಂದ ಪ್ರಕಟಿಸಲಾಗಿದೆ.

‘ಹುಲಿ ಪತ್ರಿಕೆ-2’ ಲೋಕಾರ್ಪಣೆ ಮಾಡಿ ಮಾತನಾಡಿದ ಹಂಸಲೇಖ, ಉದಯೋನ್ಮುಖ ಲೇಖಕ ಅನುಷ್ ಬರವಣಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಹುಲಿ ಪತ್ರಿಕೆ-1’ ಅನ್ನು ಓದಿದ್ದೆ. ಅದು ಸಾಕಷ್ಟು ಕುತೂಹಲಕಾರಿಯಾಗಿತ್ತು. ಇದರ ಮುಂದುವರಿದ ಭಾಗವಾದ ‘ಹುಲಿ ಪತ್ರಿಕೆ-2’ಕೂಡ ಅಷ್ಟೇ ಸ್ವಾರಸ್ಯಭರಿತವಾಗಿದೆ ಎಂದು ಹೇಳಿದರು.

ಕಾನ್ಕ್’ಕೇವ್ ಮೀಡಿಯಾ ಮತ್ತು ಪಬ್ಲಿಷರ್ ಈ ಪುಸ್ತಕದ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ. ಈ ಕಾದಂಬರಿ ಪ್ರತಿ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಸಿಗಲಿದ್ದು, ಜತೆಗೆ ಶಾರದಾ ಪುಸ್ತಕಾಲಯದಲ್ಲೂ ದೊರೆಯುತ್ತದೆ. www.kannadaloka.in ಮೂಲಕ ಆನ್ ಲೈನ್’ನಲ್ಲೂ ಕೊಳ್ಳಬಹುದಾಗಿದೆ. ಅಲ್ಲದೇ ಮೈಲ್ಯಾಂಗ್ ಆ್ಯಪ್ ಮೂಲಕವೂ ಇದರ ಈ ಪುಸ್ತಕವನ್ನು ಪಡೆಯಬಹುದಾಗಿದೆ.