‘ಗ್ಲಾಂಡರ್ಸ್’ ಸೋಂಕಿನಿಂದ ಕುದುರೆ ಮೃತ: ಮೈಸೂರು ಝೂನಲ್ಲಿ ಹೆಚ್ಚಿನ ನಿಗಾ

ಮೈಸೂರು,ಡಿಸೆಂಬರ್,22,2025 (www.justkannada.in):  ನಗರದ ‘ಮೈಸೂರು ರೇಸ್ ಕ್ಲಬ್’ ನಲ್ಲಿದ್ದ ಕುದುರೆಯೊಂದು ‘ಗ್ಲಾಂಡರ್ಸ್‌’ ರೋಗದ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ, ಕೆಲವೇ  ಮೀಟರ್ ಸಮೀಪದಲ್ಲಿರುವ ಚಾಮರಾಜೇಂದ್ರ ಮೃಗಾಲಯದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ, ಸೋಂಕು ಹರಡುವ ಭೀತಿ ಕಾರಣ, ಎರಡು ರೇಸ್‌ ಕೋರ್ಸ್ ಸುತ್ತಲಿನ ಕಿ.ಮೀ ಆವರಣವನ್ನು ಅಧಿಸೂಚಿತ ಪ್ರದೇಶವೆಂದು ಸರ್ಕಾರ ಪರಿಗಣಿಸಿದ್ದು, ಕುದುರೆ, ಕತ್ತೆ, ಹೇಸರಗತ್ತೆ ಓಡಾಟ ನಿಷೇಧಿಸಿದೆ. ಮೃಗಾಲಯದಲ್ಲಿ 6 ಜೀಬ್ರಾ ಹಾಗೂ 6 ಜಿರಾಫೆಗಳಿದ್ದು, ಅವುಗಳಿಗೆ ಸೋಂಕು ತಗುಲುವ ಸಂಭವ ಇರುವುದರಿಂದ ನಿಗಾ ವಹಿಸಲಾಗಿದೆ. ಆವರಣದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಕಾರ್ಯ ನಿತ್ಯ 3ರಿಂದ 4 ಬಾರಿ ನಡೆಯುತ್ತಿದೆ. ಕಾಂಪೌಂಡ್ ಹಾಗೂ ಪ್ರವೇಶದ್ವಾರಗಳ ಬಳಿಯೂ ಸಿಂಪಡಿಸಲಾಗುತ್ತಿದೆ.

ರೇಸ್‌ಕೋರ್ಸ್‌ನಿಂದ ಯಾವುದೇ ವಾಹನ ಒಳಬಾರದಂತೆ ಕ್ರಮ ವಹಿಸಲಾಗಿದೆ. ಪ್ರತಿ ವಾಹನವನ್ನೂ ಸ್ಯಾನಿಟೈಸ್ ಮಾಡಲಾಗುತ್ತಿದೆ. ಈಗಾಗಲೇ ವನಜೀವಿ ತಜ್ಞರ ಉನ್ನತ ಮಟ್ಟದ ಸಭೆ ನಡೆಸಿದ್ದು, ಎಸ್‌ಒಪಿ ಅನ್ವಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಪಿ.ಅನುಷಾ ಅವರು ತಿಳಿಸಿದ್ದಾರೆ.

Key words: Horse, dies, Glanders, infection, race club, Mysore Zoo