ಹುಕ್ಕಾಬಾರ್ ನಿಷೇಧ: ಶಾಲೆಗಳಿಂದ 100 ಮೀ. ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟಕ್ಕೆ ನಿರ್ಬಂಧ , ದಂಡ ಹೆಚ್ಚಳ.

ಬೆಂಗಳೂರು, ಫೆಬ್ರವರಿ 21,2024(www.justkannada.in):  ಬಾರ್ ರೆಸ್ಟೋರೆಂಟ್ ಹಾಗೂ ಇತರೆ ಕಡೆಗಳಲ್ಲಿ ಹುಕ್ಕಾ ಬಾರ್​ ನಿಷೇಧಿಸಲಾಗಿದ್ದು , ಶಾಲೆಗಳಿಂದ 100 ಮೀ. ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟಕ್ಕೆ ನಿರ್ಬಂಧ ವಿಧಿಸಿ, ಜೊತೆಗೆ ದಂಡದ ಪ್ರಮಾಣವನ್ನ ಹೆಚ್ಚಳ ಮಾಡಲಾಗಿದೆ.

ಸಿಗರೇಟ್ ​​ಗಳ ಮತ್ತು ಇತರೆ ತಂಬಾಕು  ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) (ಕರ್ನಾಟಕ ತಿದ್ದುಪಡಿ) ವಿಧೇಯಕ ಇಂದು  ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.

ಈ ಹಿನ್ನೆಲೆಯಲ್ಲಿ ಶಾಲೆಗಳಿಂದ  100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡದ ಪ್ರಮಾಣ 100 ರೂ. ರಿಂದ 1000 ರೂ. ಗೆ ಏರಿಕೆ ಮಾಡಲಾಗಿದೆ.

ಇನ್ನು ಸಿಗರೇಟು ಮಾರಾಟದ ವಯೋಮಿತಿ 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲಾಗಿದ್ದು, 21 ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಮಾಡುವುದನ್ನು ನಿಷೇಧಿಸುವ ಮಸೂದೆಗೂ ಅಂಗೀಕಾರ ನೀಡಲಾಗಿದೆ.

ಹಾಗೆಯೇ ಯಾವುದೇ ಬಾರ್ ರೆಸ್ಟೋರೆಂಟ್ ಹಾಗೂ ಇತರೆ ಕಡೆಗಳಲ್ಲಿ ಹುಕ್ಕಾ ಬಾರ್​ ನಿಷೇಧಿಸಲಾಗಿದೆ. ಹುಕ್ಕಾ ಬಾರ್ ಅನಧಿಕೃತವಾಗಿ‌ ನಡೆಸಿದರೆ ಒಂದು ವರ್ಷಕ್ಕೆ ಕಡಿಮೆ ಇಲ್ಲದಂತೆ ಹಾಗೂ 3 ವರ್ಷಕ್ಕೆ ವಿಸ್ತರಣೆ ಮಾಡುವ ಜೈಲು ಶಿಕ್ಷೆ ಮತ್ತು 50 ಸಾವಿರದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ.

Key words: Hookahbar ban- 100m –schools-Ban – cigarettes