ಉದ್ದನೆಯ ವೀಕೆಂಡ್ ಹೋಗಬೇಕೆನಿಸಿದೆಯೇ? ಹಾಗಾದ್ರೆ 2023ರಲ್ಲಿ ನಿಮಗೆ ಸಿಗಲಿದೆ ಸಾಕಷ್ಟು ಅವಕಾಶಗಳು..

ಬೆಂಗಳೂರು, ನವೆಂಬರ್ 22,2022 (www.justkannada.in): ಕಳೆದ ಎರಡು ವರ್ಷಗಳು, ಅಂದರೆ ೨೦೨೦ ರಿಂದ ೨೦೨೧ರ ಅಂತ್ಯದವರೆಗೂ ಕೋವಿಡ್ ಕರಾಳತೆಯಿಂದಾಗಿ ವೀಕ್‌ ಎಂಡ್ ಮಜಾ ಮಸ್ತಿಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ ವಾರಾಂತ್ಯದಲ್ಲಿ ಚಾರಣ, ಪ್ರವಾಸ, ಇತ್ಯಾದಿಗಳಿಗೆ ತೆರಳುವವರಿಗೆ ಬೇಸರವೋ ಬೇಸರ. ಅದರಲ್ಲೂ ಬೆಂಗಳೂರಿನ ಟೆಕ್ಕಿಗಳಿಗಂತೂ ವರ್ಕ್ ಫ್ರಮ್ ಹೋಂ ಕೆಲಸದಿಂದ ಬೇಸತ್ತು ಹೋಗಿದ್ದಾರೆ.

ಈ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ನಗರದ ಟೆಕ್ಕಿ ಸಮರ್ಥ್ ಅವರು, “ಕಳೆದ ಎರಡು ವರ್ಷಗಳಿಂದ ನಮ್ಮ ಪೈಕಿ ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಆದರೆ ಈ ವರ್ಷ, ಅಂದರೆ ೨೦೨೨ರ ಆರಂಭದಿಂದಲೇ ಬಹುಪಾಲು ಕಂಪನಿಗಳು ತಮ್ಮ ಉದ್ಯೋಗಿಗಳು ಕಚೇರಿಗೆ ಹಿಂದಿರುಗಬೇಕೆಂದು ಆದೇಶಿಸಿ, ಅನಸುರಿಸಿದೆ. ಹಾಗಾಗಿ, ಪುನಃ ಕಚೇರಿಗೆ ತೆರಳಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಉತ್ಸಾಹ ದೊರೆಯಲು ರಜೆಗಳು ಅಗತ್ಯವಾಗಿದೆ. ತಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಕೆಲಸದಿಂದ ಒಂದು ವಿರಾಮ ಪಡೆದಯುವುದು ಅತ್ಯಗತ್ಯ,” ಎಂದರು.
ಇದು ಸಮರ್ಥ್ ಒಬ್ಬರದ್ದೇ ಕಚೇರಿ ಕತೆಯಲ್ಲ; ಬದಲಿಗೆ ಕಚೇರಿಗಳಿಗೆ ಮರಳಿರುವ ಅನೇಕ ಉದ್ಯೋಗಿಗಳ ಅಭಿಪ್ರಾಯವೂ ಆಗಿದೆ. ಇದೀಗ ರಜೆಗಳು ಹಾಗೂ ದೀರ್ಘ ವಾರಾಂತ್ಯಗಳ ರಜೆಗಳ ಬೇಡಿಕೆ ಮತ್ತೊಮ್ಮೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ೨೦೨೩ರ ರಜೆಗಳ ಪಟ್ಟಿಯನ್ನು ಸೋಮವಾರದಂದು ಬಿಡುಗಡೆಗೊಳಿಸಿತು. ಈ ರಜೆಗಳ ಪಟ್ಟಿಯನ್ನು ಗಮನಿಸಿದಾಗ ಕಚೇರಿಗೆ ಹೋಗುವ ಉದ್ಯೋಗಿಗಳಿಗೆ, ಮುಂಚಿತವಾಗಿಯೇ ಪ್ರವಾಸಗಳನ್ನು ನಿಗಧಪಡಿಸಿಕೊಳ್ಳುವವರಿಗೆ ೨೦೨೩ರಲ್ಲಿ ಒಂದು ಉತ್ತಮ ಸುದ್ದಿ ಇದೆ.
ಮೊದಲಿಗೆ ೨೦೨೩ರ ಆರಂಭದಲ್ಲಿ, ಅಂದರೆ ಜನವರಿ ತಿಂಗಳಲ್ಲಿ ಗಣರಾಜ್ಯೋತ್ಸವ ದಿನ ಗುರುವಾರ ಬಂದಿದ್ದು, ಶುಕ್ರವಾರ ಒಂದು ದಿನ ರಜೆ ಪಡೆದರೆ, ೨೬ ರಿಂದ ೨೯ರವರೆಗೆ ನಾಲ್ಕು ದಿನಗಳ ವಾರಾಂತ್ಯದ ಮೋಜು-ಮಸ್ತಿ ಲಭಿಸುತ್ತದೆ.
ಈ ವರ್ಷ, ರಾಜ್ಯ ಸರ್ಕಾರ ಮಹಾಶಿವರಾತ್ರಿ ಹಬ್ಬದ ರಜವನ್ನು ಫೆಬ್ರವರಿ ೧೮ (ಶನಿವಾರ) ಘೋಷಿಸಿದೆ. ಆದರೆ ಸಂಕ್ರಾಂತಿ (ಜನವರಿ ೧೫) ಮಾತ್ರ ಭಾನುವಾರ ಇದೆ. ಇದಾದ ನಂತರ ದೊಡ್ಡ ಹಬ್ಬ ಯುಗಾದಿ ಮಾರ್ಚ್ ೨೨, (ಬುಧವಾರ) ಬಂದಿದ್ದು, ವಾರದ ಮಧ್ಯದಲ್ಲಿ ಉದ್ಯೋಗಿಗಳಿಗೆ ಒಂದು ವಿರಾಮ ದೊರೆಯಲಿದೆ.
ಏಪ್ರಿಲ್ ತಿಂಗಳಲ್ಲಿ ಮಹಾವೀರ್ ಜಯಂತಿ (ಸೋಮವಾರ, ಏಪ್ರಿಲ್ ೩), ಗುಡ್ ಫ್ರೈ ಡೇ (ಏಪ್ರಿಲ್ ೭) ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ (ಏಪ್ರಿಲ್ ೧೪) ಮೂರು ದಿನಗಳ ರಜೆ ಇದೆ. ಅಂಬೇಡ್ಕರ್ ಜಯಂತಿ ರಜೆ ಶುಕ್ರವಾರವಿದೆ. ಕಾರ್ಮಿಕರ ದಿನಾಚರಣೆ (ಮೇ ೧) ಸೋಮವಾರವಿದೆ.
ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನ ಮಂಗಳವಾರವಿದ್ದು, ಸೋಮವಾರ ಒಂದು ದಿನ ರಜೆ ತೆಗೆದುಕೊಂಡರೆ ಆಗಸ್ಟ್ ೧೨ (ಶುಕ್ರವಾರ) ರಿಂದ ಆಗಸ್ಟ್ ೧೫ರವರೆಗೆ ರಜೆಗಳು ದೊರೆಯುತ್ತವೆ.
ಈ ಬಾರಿ ಅನೇಕ ಸಾರ್ವಜನಿಕ ರಜಾ ದಿನಗಳು ಸೋಮವಾರವೇ ಬಂದಿದೆ. ಗಣೇಶ ಚತುರ್ಥಿ (ಸೆಪ್ಟೆಂಬರ್ ೧೮), ಗಾಂಧಿ ಜಯಂತಿ (ಅಕ್ಟೋಬರ್ ೨), ಆಯುಧ ಪೂಜೆ (ಅಕ್ಟೋಬರ್ ೨೩) ಹಾಗೂ ಕ್ರಿಸ್‌ಮಸ್ (ಡಿಸೆಂಬರ್ ೨೫).
ದಸರಾ ಹಬ್ಬದ ರಜೆಗಳು ಅಕ್ಟೋಬರ್ ೨೧ (ಶನಿವಾರ)ದಿಂದ ಅಕ್ಟೋಬರ್ ೨೪ (ಮಂಗಳವಾರ)ರವರೆಗೆ ಇದೆ. ಇದಾದ ಒಂದು ವಾರದ ನಂತರ, ನವೆಂಬರ್ ೧ (ಕನ್ನಡ ರಾಜ್ಯೋತ್ಸವ, ಬುಧವಾರ). ಈ ಬಾರಿ ದೀಪಾವಳಿ, ನರಕ ಚತುರ್ದಷಿ ಭಾನುವಾರವಿದೆ. ಬಲಿಪಾಡ್ಯಮಿ (ನವೆಂಬರ್ ೧೪, ಮಂಗಳವಾರ).
೨೦೨೩ರಲ್ಲಿ ಕೆಲವು ಹಬ್ಬಗಳು/ ರಜೆಗಳು, ಭಾನುವಾರಗಳು ಅಥವಾ ಎರಡನೇ ಶನಿವಾರಗಳಂದೂ ಸಹ ಬಂದಿದೆ. ಸಂಕ್ರಾಂತಿ (ಭಾನುವಾರ), ಬಸವ ಜಯಂತಿ/ ಅಕ್ಷಯ ತೃತೀಯ (ಏಪ್ರಿಲ್ ೨೩, ಭಾನುವಾರ) ಹಾಗೂ ನರಕ ಚತುರ್ದಷಿ (ಭಾನುವಾರ). ರಮ್ಜಾನ್ (ಏಪ್ರಿಲ್ ೨೨), ಮಹಾಲಯ ಅಮಾವಾಸ್ಯೆ (ಅಕ್ಟೋಬರ್ ೧೪), ಹಾಗೂ ವಾಲ್ಮೀಕಿ ಜಯಂತಿ (ಅಕ್ಟೋಬರ್ ೨೮) ಶನಿವಾರಗಳಂದು ಬಂದಿವೆ.
“ಆದರೆ ವಾರಾಂತ್ಯದಲ್ಲಿ ಹೆಚ್ಚು ರಜೆಗಳು ದೊರೆತಾಗ ಮುಂಚಿತವಾಗಿಯೇ ಯೋಜಿಸಿ, ಪ್ರವಾಸ ಹೋಗಲು ಅನುಕೂಲವಾಗುತ್ತದೆ,” ಎನ್ನುವುದು ಟೆಕ್ಕಿ ಸಮರ್ಥ್ ಅವರ ಅಭಿಪ್ರಾಯವಾಗಿದೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

key words: holiday-2023-trip-plan