ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ: ಅರ್ಜಿ ವಿಚಾರಣೆಗೆ ಪೀಠ ರಚನೆ.

ನವದೆಹಲಿ,ಫೆಬ್ರವರಿ,22,2023(www.justkannada.in): ಹಿಜಾಬ್ ವಿವಾದ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು,  ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರ ಪರ ವಕೀಲ ಸುಪ್ರೀಂಕೋರ್ಟ್​ಗೆ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್​ಗೆ ಪಿಐಎಲ್​​  ಸಲ್ಲಿಸಿದ್ದು, ಅರ್ಜಿ ವಿಚಾರಣೆಗೆ ಪೀಠ ರಚನೆ ಮಾಡಲಾಗುವುದು ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ  ಹೇಳಿದ್ದಾರೆ.

ಕಾಲೇಜು ಆವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಕರ್ನಾಟಕ ನಿಷೇಧಿಸಿರುವ ಕುರಿತು ವಿಚಾರಣೆ ಮಾಡಲು ಸಮಯ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್​ ಹೇಳಿದೆ.

ಈ ಪ್ರಕರಣವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ವಕೀಲ ಶಾದನ್ ಫರಾಸತ್ ಪ್ರಸ್ತಾಪಿಸಿ, ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದಿಂದಾಗಿ ಹುಡುಗಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿನಿಯರು ಈಗಾಗಲೇ ಒಂದು ವರ್ಷವನ್ನು ಕಳೆದುಕೊಂಡಿದ್ದಾರೆ ಮತ್ತು ಮುಂಬರುವ ಪರೀಕ್ಷೆಗಳು ಮಾರ್ಚ್ 9 ರಂದು ಪ್ರಾರಂಭವಾಗಲಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ತ್ರಿಸದಸ್ಯ ಪೀಠವು ಶೀಘ್ರದಲ್ಲೇ ವಿಚಾರಣೆ ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ನ್ಯಾಯಾಲಯವು ಅರ್ಜಿದಾರರಿಗೆ ಭರವಸೆ ನೀಡಿದೆ.

Key words: Hijab controversy – Supreme Court –again- petition