Sunday, August 23, 2026

BDA Apartments

Home Front Page ರಾಜ್ಯದಲ್ಲಿ ಲೋಡ್‌ ಗಟ್ಟಲೆ ಕೇಸರಿ ಶಾಲು ಹೇಗೆ ಬಂತು..? ವಿವಾದ ಕುರಿತು  ತನಿಖೆಗೆ ವಾಟಾಳ್ ನಾಗರಾಜ್...

ರಾಜ್ಯದಲ್ಲಿ ಲೋಡ್‌ ಗಟ್ಟಲೆ ಕೇಸರಿ ಶಾಲು ಹೇಗೆ ಬಂತು..? ವಿವಾದ ಕುರಿತು  ತನಿಖೆಗೆ ವಾಟಾಳ್ ನಾಗರಾಜ್ ಒತ್ತಾಯ

ಮೈಸೂರು,ಫೆಬ್ರವರಿ,10,2022(www.justkannada.in): ಹಿಜಾಬ್, ಕೇಸರಿ ಶಾಲು ವಿವಾದ ವಿಚಾರ ರಾಜಕೀಯ ತಿರುವು ಪಡೆದದ್ದು ಬಹಳ ನೋವಿನ ಸಂಗತಿ. ಇದು ರಾಜಕೀಯ ಸ್ವರೂಪ ಪಡೆಯೊದಕ್ಕೆ ಕಾರಣವಾದ ಬಗ್ಗೆ ತನಿಖೆ ಆಗಬೇಕು ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ವಾಟಾಳ್ ನಾಗರಾಜ್  ರಾಜ್ಯದಲ್ಲಿ ಇಷ್ಟೊಂದು ಕೇಸರಿ ಶಾಲು ಎಲ್ಲಿಂದ ಬಂತು..? ಲೋಡ್‌ ಗಟ್ಟಲೆ ಕೇಸರಿ ಶಾಲು ಹೇಗೆ ಬಂತು..? ಇದರ ಹಿಂದೆ ಯಾರ್ಯಾರಿದ್ದಾರೆ ತನಿಖೆ ಆಗಬೇಕು. ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಇವತ್ತಿನಿಂದ ನ್ಯಾಯಾಲಯದಲ್ಲಿ ಈ ಬಗ್ಗೆ ವಾದವಿವಾದ ಶುರುವಾಗುತ್ತೆ. ನ್ಯಾಯಾಲಯ ಎಲ್ಲಾ ವಿಚಾರಗಳನ್ನ ಗಮನಿಸಿ ದೇಶಕ್ಕೆ ಮಾದರಿಯಾದ ತೀರ್ಪು ನೀಡುತ್ತೆ ಅನ್ನುವ ನಂಬಿಕೆ ಇದೆ. ಹಿಜಾಬ್ ಇವತ್ತಿಂದ ಬಂದಿರೋದಲ್ಲ. ಬಹಳಷ್ಟು ವರ್ಷಗಳಿಂದ ಇದೆ. ಈಗ ಹಿಜಾಬ್ ಹಿಂದೆ ಹೋಗಲಿಕ್ಕೆ ಕಾರಣ ಏನು…? ಎಂದು ಪ್ರಶ್ನಿಸಿದರು.

ಇದೇ ವೇಳೆ ಬಿಜೆಪಿ ಶಾಸಕರಾದ ಎಂಪಿ ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್, ಬಿಜೆಪಿಯ ರೇಣುಕಾಚಾರ್ಯ ಮಹಿಳೆಯರ ಬಗ್ಗೆ ಮಾತನಾಡ್ತಾರೆ. ನಂತರ ಕ್ಷಮೆ ಕೇಳ್ತಾರೆ. ಮಹಿಳೆಯರ ಬಗ್ಗೆ ಅವಹೇಳನವಾಗಿ ಮಾತನಾಡುವ ಇಂತವರು ರಾಜೀನಾಮೆ ಕೊಡಬೇಕು. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹುಚ್ಚುಹುಚ್ಚನಾಗಿ ಮಾತನಾಡುತ್ತಾರೆ. ಹೀಗೆ ಮಾತನಾಡೋದು ಗೌರವವಲ್ಲ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು.

Key words: hijab-contorvarsy-Vatal Nagaraj