ಡಿ.7 ರಂದು ಕೆಎಸ್ ಸಿಎಗೆ ಚುನಾವಣೆ ನಡೆಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು,ನವೆಂಬರ್,22,2025 (www.justkannada.in):  ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ಸ್(ಕೆಎಸ್ಸಿಎ)ಗೆ ಡಿಸೆಂಬರ್ 7 ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮತದಾನ ನಡೆಸಿ ಫಲಿತಾಂಶ ಪ್ರಕಟಿಸಬೇಕು ಎಂದು ಹೈಕೋರ್ಟ್ ಕೆಎಸ್ಸಿಎ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಚುನಾವಣಾ ದಿನಾಂಕವನ್ನು ನವೆಂಬರ್ 30ರ ಬದಲಿಗೆ  ಡಿಸೆಂಬರ್ 30ಕ್ಕೆ ಮುಂದೂಡಿದ ಚುನಾವಣಾಧಿಕಾರಿಯೂ ಆಗಿರುವ ನಿವೃತ್ತ ಐಎಎಸ್ ಅಧಿಕಾರಿ ನವೆಂಬರ್ 17ರಂದು ಹೊರಡಿಸಿದ್ದ ಪತ್ರ ರದ್ದು ಕೋರಿ ಕೆಎಸ್ ಸಿಎಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಈಗಾಗಲೇ ನಿಗದಿ ಪಡಿಸಿದ್ದ ದಿನಾಂಕದಂದು ಚುನಾವಣೆ ನಡೆಸಲು ನಿರ್ದೇಶನ ಕೋರಿ ಕೆಎಸ್ ಸಿಎಯ ಸದಸ್ಯ ಬಿ.ಕೆ.ರವಿ ಎಂಬುವರು ಅರ್ಜಿ ಸಲ್ಲಿಸಿದ್ದರು.

ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು  ಅವರಿದ್ದ ನ್ಯಾಯಪೀಠ, ಚುನಾವಣೆಯನ್ನು ನವೆಂಬರ್ 30ರ ಬದಲಿಗೆ  ಡಿಸೆಂಬರ್ 30ಕ್ಕೆ ಮುಂದೂಡಿ ನವೆಂಬರ್ 17ರಂದು ಹೊರಡಿಸಿದ್ದ ಪತ್ರವನ್ನು ರದ್ದುಪಡಿಸಿ ಆದೇಶಿಸಿದೆ.

ಅಲ್ಲದೆ, ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಸುಭಾಶ್ ಬಿ.ಆಡಿ ಅವರ ಮೇಲ್ವಿಚಾರಣೆಯಲ್ಲಿ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿದೆ.

ಪ್ರಸ್ತುತ ಜಾರಿಯಲ್ಲಿರುವ ಬೈಲಾದ ಅಂಶಗಳ ಕುರಿತ ವಿವಿಧ ವ್ಯಾಖ್ಯಾನಗಳ ಕುರಿತಂತೆ ಪ್ರಭಾವಕ್ಕೊಳಗಾಗದೆ ಪ್ರಸ್ತುತ ಇರುವ ಬೈಲಾ ನಿಯಮಗಳ ಅನುಸಾರವಾಗಿ ಚುನಾವಣೆ ನಡೆಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಕೆಎಸ್ ಸಿಎಗೆ ನಡೆಯುವ ಚುನಾವಣೆಗೆ ಈಗಾಗಲೇ ನಾಮಪತ್ರಗಳು ಸಲ್ಲಿಕೆಮಾಡಿರುವುದರಿಂದ ಅದರಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಆದರೆ, ಚುನಾವಣೆಗಾಗಿ ಅರ್ಜಿ ಸಲ್ಲಿಸಿರುವವರ ನಾಮ ಪತ್ರವಗಳನ್ನು  ನವೆಂಬರ್ 17ರ ಒಳಗಾಗಿ ಪರಿಶೀಲನೆ ಪ್ರಕ್ರಿಯೆ ನಡೆಯಬೇಕಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ, ಜತೆಗೆ ಅವಧಿ ಮೀರಿದೆ. ಆದ್ದರಿಂದ ನವೆಂಬರ್ 24ರ ಬೆಳಗ್ಗೆ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಸಬೇಕು. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್ 24 ರಂದು ಪ್ರಕಟಿಸಬೇಕು.

ನವೆಂಬರ್ 26ರ ಮಧ್ಯಾಹ್ನನ 3 ಗಂಟೆಯವರೆಗೂ ನಾಮಪತ್ರ ಹಿಂಪಡೆಯಲು ಅವಕಾಶ ನೀಡಬೇಕು. ನವೆಂಬರ್ 25ರ ಸಂಜೆ 5 ಗಂಟೆಯ ವೇಳೆಗೆ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಬೇಕು. ಡಿಸೆಂಬರ್ 7ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಮತದಾನ ನಡೆಸಿದ ಬಳಿಕ ಫಲಿತಾಂಶ ಘೋಷಣೆ ಮಾಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವವರು ಮತ್ತು ಪ್ರತಿವಾದಿಗಳ ಸಮ್ಮುಖದಲ್ಲಿ ಈ ಚುನಾವಣಾ ದಿನಾಂಕಗಳನ್ನು ಅಂತಿಮಗೊಳಿಸಿದ್ದು, ಯಾವುದೇ ತೊಂದರೆಯಾಗದಂತೆ ಮುಕ್ತ ಪಾರ್ದರ್ಶಕ ಮತ್ತು ನ್ಯಾಯಯುತವಾಗಿ ಚುನಾವಣೆ ನಡೆಸಿ, ಫಲಿತಾಂಶವನ್ನು ಪ್ರಕಟಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

Key words: High Court, directs , elections, KSCA , December 7