ಇಂಡಿಗೋ ವಿಮಾನ ಹಾರಾಟ ವ್ಯತ್ಯಯ ಹಿನ್ನೆಲೆ: ಕೇಂದ್ರಕ್ಕೆ ಹೈಕೋರ್ಟ್ ತರಾಟೆ

ನವದೆಹಲಿ,ಡಿಸೆಂಬರ್,10,2025 (www.justkannada.in): ದೇಶದಲ್ಲಿ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಟ ನಡೆಸಿದ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.

ಇಂಡಿಗೋ ವಿಮಾನಯಾನ ಸಂಸ್ಥೆಯ ನೂರಾರು ವಿಮಾನಗಳು ರದ್ದಾದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಗರಂ ಆದ  ದೆಹಲಿ ಹೈಕೋರ್ಟ್, ವಿಮಾನ ಪ್ರಯಾಣ ದರ 40 ಸಾವಿರ  ರೂ.ಗಳು ಆಗಲು ಹೇಗೆ ಸಾಧ್ಯ? ಅದನ್ನ ತಡೆಯಲು ಯಾಕೆ ಆಗಲಿಲ್ಲ ಎಂದು ಪ್ರಶ್ನಿಸಿತು.

ಪರಿಸ್ಥಿತಿಯನ್ನು “ಆತಂಕಕಾರಿ” ಎಂದು ಕರೆದ ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ನೇತೃತ್ವದ ವಿಭಾಗೀಯ ಪೀಠವು, ಒಂದು ವೇಳೆ ಬಿಕ್ಕಟ್ಟು ಉಂಟಾದರೆ, ಇತರ ವಿಮಾನಯಾನ ಸಂಸ್ಥೆಗಳು ಲಾಭ ಪಡೆಯಲು ಹೇಗೆ ಅವಕಾಶ ನೀಡಬಹುದು? ಅದು 35 ರಿಂದ 40 ಸಾವಿರಕ್ಕೆ ಹೇಗೆ ಹೋಗಲು ಸಾಧ್ಯ? ನೀವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಬಿಟ್ಟಿದ್ದೀರಿ” ಎಂದು  ಕಿಡಿಕಾರಿತು.

ಇಂತಹ ಪರಿಸ್ಥಿತಿ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವುದಕ್ಕೆ ಸೀಮಿತವಾಗಿಲ್ಲ, ಬದಲಾಗಿ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ” ಎಂದು ನ್ಯಾಯಪೀಠ ಚಾಟಿ ಬೀಸಿತು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಚೇತನ್ ಶರ್ಮಾ, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಈಗಾಗಲೇ ವಾಹಕಕ್ಕೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Key words: High Court, Central government,  IndiGo flight, disruption